ಚಿತ್ತಾಪುರ: ತಾಲೂಕ ಸೇರಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ವರ್ಗಾವಣೆಗೆ ಸಂಚು ನಡೆಯುತ್ತಿದ್ದು ಚಿತ್ತಾಪುರ ಸಿಪಿಐ, ತಹಸೀಲ್ದಾರ ಹುದ್ದೆ ವರ್ಗಾವಣೆಗೆ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಮೂಗು ತೂರಿಸುವ ಪ್ರಯತ್ನ ನಡೆದಿದೆ. ಚಿತ್ತಾಪುರ, ಜೇವರ್ಗಿ, ಕಲಬುರಗಿ, ಶಹಾಬಾದ್, ಕಾಳಗಿ ಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಯತ್ನ ನಡೆದಿದೆ.
ಜಿಲ್ಲೆಯಲ್ಲಿ ಕೆಲವು ಪ್ರಮುಖ ಹುದ್ದೆಗಳಲ್ಲಿ ಇರುವ ಲಿಂಗಾಯತ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಈಗಾಗಲೇ ಸೇಡಂನ ಮುಖ್ಯಾಧಿಕಾರಿ ಶರಣಯ್ಯ ಅವರನ್ನು ಎತ್ತಂಗಡಿ ಮಾಡಲಾಗಿದೆ. ಇದಕ್ಕೆ ಮಾಜಿ ಸಚಿವ ಸುನಿಲ್ ವಲ್ಯಾಪುರೆ ಕುಮ್ಮಕ್ಕಿನಿಂದಲೇ ಇಷ್ಟೆಲ್ಲ ಕಾರಣ ಎನ್ನಲಾಗುತ್ತಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಸಿಪಿಐ ವರ್ಗಾವಣೆಗೆ ಸಂಸದ ಡಾ.ಉಮೇಶ್ ಜಾಧವ ಅವರೇ ಶಿಫಾರಸ್ಸು ಪತ್ರ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೂಡಲೇ ಮಾಜಿ ಸಚಿವ ಸುನಿಲ್ ವಲ್ಯಾಪುರೆ, ಸಂಸದ ಡಾ.ಉಮೇಶ ಜಾಧವ ಅವರು ಲಿಂಗಾಯತ ವಿರೋಧಿ ನೀತಿ ಧೋರಣೆ ಕೈಬಿಡಬೇಕು.
ವೀರಶೈವ ಲಿಂಗಾಯತರ ಮತಗಳ ಸಹಕಾರ ದಿಂದಲೇ ಗೆಲುವು ಸಾಧಿಸಿರುವ ಡಾ.ಉಮೇಶ್ ಜಾಧವ ಅವರು ಲಿಂಗಾಯತ ಸಮುದಾಯಕ್ಕೆ ಸೇರಿರುವ ಅಧಿಕಾರಿಗಳ ವರ್ಗಾವಣೆಗೆ ಕೈ ಹಾಕಿರುವುದು ಸರಿಯಲ್ಲ. ವೀರಶೈವ ಲಿಂಗಾಯತ ವಿರೋಧಿ ಧೋರಣೆ ನಿಲ್ಲಿಸದಿದ್ದರೆ ಇದಕ್ಕೆ ಮುಂದಿನ ದಿನಗಳಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷರು ಡಾ. ಶರಣಕುಮಾರ ಮೋದಿ, ಯುವ ಘಟಕದ ಗೌರವಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಮತ್ತು ಕಾರ್ಯಕಾರಣಿ ಸದಸ್ಯರು ಹಾಗೂ ಸಮಾಜದ ಮುಖಂಡರ ಜೊತೆ ಚರ್ಚಿಸಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ವೀರಶೈವ ಮಹಾಸಭಾ ಸದಸ್ಯ ತಾತಗೌಡ ಎನ್. ಪಾಟೀಲ ಎಚ್ಚರಿಸಿದ್ದಾರೆ.