ಕಲಬುರಗಿ: ಇಂದಿನ ಆಧುನಿಕ ಒತ್ತಡದ ಬದುಕಿನಿಂದ ವಿವಿಧ ರೋಗಗಳು ಉದ್ಭವವಾಗುತ್ತಿವೆ. ರೋಗಕ್ಕೆ ತಕ್ಕಂತೆ ಔಷಧ ಸೇವನೆ ಮಾಡಬೇಕು. ವೈದ್ಯರನ್ನು ಸಂಪರ್ಕಿಸದೆ ಸ್ವಯಂ ವೈದ್ಯರಂತೆ ವರ್ತಿಸಿ ಔಷಧವನ್ನು ಸೇವನೆ ಮಾಡುವುದು ಅಪಾಯಕಾರಿಯಾಗಿದೆಯೆಂದು ಖ್ಯಾತ ಕುಟುಂಬ ವೈದ್ಯ ಡಾ.ಸಂತೋಷ ರೆಡ್ಡಿ ಸಲಹೆ ನೀಡಿದರು.
ಅವರು ನಗರದ ಆಳಂದ ಚೆಕ್ ಪೋಸ್ಟ್‌ನಲ್ಲಿರುವ, ’ಶ್ರೇಯಸ್ ಕ್ಲಿನಿಕ್ & ಮೆಡಿಕಲ್ಸ್’ನಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ’ಔಷಧ ಸಪ್ತಾಹ ಆಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕ್ಲಿನಿಕ್ ಮುಖ್ಯಸ್ಥ ಸೋಮಶೇಖರ ಬಿ.ಮೂಲಗೆ ಮಾತನಾಡಿ, ಕಾಯಿಲೆಯ ಪ್ರಮಾಣಕ್ಕೆ ಹೊಂದಿಕೊಳ್ಳುವಂತಹ ಪ್ರಮಾಣದಲ್ಲಿ ಮಾತ್ರೆ, ಔಷಧ ಸೇವಿಸಬೇಕು. ಬೇಗ ಕಡಿಮೆಯಾಗಬೇಕೆಂಬ ಉದ್ದೇಶದಿಂದ ಹೈಡೋಸ್ ಮಾತ್ರೆ ಸೇವನೆ ಅಡ್ಡ ಪರಿಣಾಮ ಬೀರುತ್ತದೆ. ನೋವು ಶಮನಕಾರಿ ಮಾತ್ರಗಳಿಗೆ ಅಂಟಿಕೊಳ್ಳುವ ಚಟ ಒಳ್ಳೆಯದಲ್ಲವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸದಿರುವ್ಯದರಿಂದ ಕಾಯಿಲೆಗಳಿಗೆ ನಾವೇ ಆಹ್ವಾನ ನೀಡುವಂತಾಗಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಏರು-ಪೇರಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಜಶೇಖರ ಬಿ.ಮರಡಿ, ಶಿವರಾಜ ಸುರಪ್ಪಗೋಳ್, ಕಾರ್ತಿಕ ಹಡಪದ, ನರಸಪ್ಪ ಬಿರಾದಾರ ದೇಗಾಂವ, ಡಾ.ಯೂಸಫ್ ಮಿಯಾ ಸೇರಿದಂತೆ ಹಲವರಿದ್ದರು.