ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷ ಕೂಡ ಡಿ. ೧ರಿಂದ ೨೫ರವರೆಗೆ ನಗರದ ಎಚ್.ಸಿ.ಜಿ ಕ್ಯಾನ್ಸ್‌ರ್ ಆಸ್ಪತ್ರೆ ಎದುರಿಗಿರುವ ಖೂಬಾ ಪ್ಲಾಟ್ ಮೈದಾನದಲ್ಲಿ ಸಂಜೆ ೬.೩೦ರಿಂದ ೭.೩೦ರವರೆಗೆ ಬೀದರ್ ಲಿಂಗಾಯತ ಮಹಾಮಠ, ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ ಅವರಿಂದ ವೈರಾಗ್ಯನಿಧಿ ಅಕ್ಕಮಹಾದೇವಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ತಿಳಿಸಿದರು.
ಇಲ್ಲಿನ ಬಸವ ಸೇವಾ ಪ್ರತಿಷ್ಠಾನ, ನೀಲ್ಮ್ಮ ಬಳಗ, ಬಸವಪರ ಸಂಘಟನೆಗಳು ಹಾಗೂ ಬಸವಾದಿ ಕಾಯಕ ಶರಣರ ಸಂಘಟನೆಗಳ ಒಕ್ಕೂಟ ಇವುಗಳ ಆಶ್ರಯದಲ್ಲಿ ನಡೆಯಲಿರುವ ಈ ಪ್ರವಚನ ಕಾರ್ಯಕ್ರಮದಲ್ಲಿ ಡಿ. ೧ರಂದು ಪ್ರವಚನ ಉದ್ಘಾಟನೆ ಕಾರ್ಯಕ್ರಮ, ಡಿ.೬ರಂದು ಮಹಿಳಾ ವಿಶೇಷ ಕಾರ್ಯಕ್ರ, ಡಿ. ೮ಮತ್ತು ೧೫, ೨೨ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿತಮ್ಮ ಪ್ರವಚನ ಹಾಗೂ ಸಾಹಿತ್ಯದ ಮೂಲಕ ಜ್ಞಾನ ದಾಸೋಹ ಮಾಡುವ ಮೂಲಕ ಜನಜಾಗೃತಿಯ ಕಾಯಕ ಮಾಡುತ್ತಿರುವ ಅಕ್ಕ ಅನ್ನಪೂರ್ಣತಾಯಿ ಅವರ ಪ್ರವಚನ ಕಾರ್ಯಕ್ರಮ ನಾಡಿನಾದ್ಯಂತ ಜನರನ್ನು ಆಕರ್ಷಿಸುತ್ತಿದೆ. ಬಸವಾದಿ ಶರಣರ ಅನುಭಾವದ ವಚನಗಳಿಗೆ ತಮ್ಮ ಅನುಭವದ ನುಡಿಗಡಣ ಸೇರಿಸಿ ಕಥೆ, ದೃಷ್ಟಾಂತದ ಮೂಲಕ ಪ್ರವಚನ ಹೇಳುತ್ತಿದ್ದರೆ ಕೇಳುಗರೆಲ್ಲರಿಗೆ ಅದೆಂಥದೋ ನೆಮ್ಮದಿ, ಶಾಂತಿ ದೊರೆತಂತಾಗುತ್ತದೆ. ಬೀದರ್ ನಲ್ಲಿ ಬಸವ ಸೇವಾ ಪ್ರತಿಷ್ಠಾನ ಹುಟ್ಟು ಹಾಕುವ ಮೂಲಕ ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಸವಗಿರಿಯಲ್ಲಿರುವ ತಮ್ಮ ಆಶ್ರಮವನ್ನು ಲಿಂಗಾಯತ ಮಹಾಮಠ ಎಂದು ಬದಲಾಯಿಸುವ ಮೂಲಕ ಬಹು ದೊಡ್ಡ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಬೀದರ್ ನ ಬಸವ ಗಿರಿಯ ಸುಂದರ ಪರಿಸರದಲ್ಲಿ ಗುರು ವಚನ ಪರುಷ ಕಟ್ಟೆ ನಿರ್ಮಿಸಿರುವುದು, ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸುತ್ತಿರುವುದು ಅಕ್ಕನವರ ಬಹು ದೊಡ್ಡ ಸಾಧನೆಯಾಗಿದೆ.
ಈ ವಿಶೇಷ ಕಾರ್ಯಕ್ರಮಗಳಲ್ಲಿ ಸೊಲ್ಲಾಪುರ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ, ಮಕ್ತಂಪುರ ಬೃಹನ್ಮಠದ ಶಿವಾನಂದ ಸ್ವಾಮೀಜಿ, ಬೀದರ್, ಹರಳಯ್ಯ ಪೀಠದ ಡಾ. ಗಂಗಾಂಬಿಕಾ ಪಾಟೀಲ, ಬಿದ್ದಾಪುರ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ಭರತನೂರು ಗುರುನಂಜೇಶ್ವರ ಸ್ವಾಮಿ, ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಚೌದಾಪುರಿ ಹಿರಠಮಠದ ರಾಜಶೇಖರ ಶಿವಾಚಾರ್ಯರು ಸೇರಿದಂತೆ ರಾಜಕೀಯ ಮುಖಂಡರು, ಸಾಹಿತಿಗಳು, ಸಮಾಜದ ಗಣ್ಯರು ಸೇರಿದಂತೆ ಅನೇಕರು ವಿವಿಧ ದಿನಾಂಕಗಳಂದು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಡಿ.೧ರಂದು ನಡೆಯಲಿರುವ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಶ್ರೀಶೈಲಂ ಸಾರಂಗಮಠ ಹಾಗೂ ಕಲಬುರಗಿಯ ಸುಲಫಲ ಮಠದ ಡಾ. ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕರಾದ ದತ್ತಾತ್ರೇಯ ಪಾಟೀಲ ಅಧ್ಯಕ್ಷತೆ, ಖನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಜಗನ್ನಾಥ ರಾಚಟ್ಟಿ, ರೇವಣಸಿದ್ದಯ್ಯ ಮಠ, ರಾಜು ಕಾಡಾದಿ, ಜಯಶ್ರೀ ಚಟ್ನಳ್ಳಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು.