ಕಲಬುರಗಿ: ಯಡಿಯೂರಪ್ಪನವರು ರಾಜ್ಯದ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದ ನಂತರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿ ಮಂಡಲದಲ್ಲಿ ಒಬ್ಬರಿಗೆ ಮಾತ್ರ ಮಂತ್ರಿ ಸ್ಥಾನ ನೀಡಿದ್ದು, ಹೆಚ್ಚು ಜಿಲ್ಲೆಗಳನ್ನು ಹೊಂದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎರಡನೇ ಹಂತದ ಮಂತ್ರಿ ಮಂಡಲ ವಿಸ್ತರಿಸಿ ಈ ಭಾಗಕ್ಕೆ ವಿಶೇಷ ಆದ್ಯತೆ ನೀಡಬೇಕೆಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷಣ ದಸ್ತಿ ಅವರು ಆಗ್ರಹಿಸಿದ್ದಾರೆ.
10 ವರ್ಷದ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಿರುವದಲ್ಲದೆ, ಪ್ರತಿ ತಿಂಗಳಿಗೊಮ್ಮೆ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಭೇಟಿ ನೀಡಿ ಇಲ್ಲಿಯ ಅಭಿವೃದ್ಧಿಯ ಕೆಲಸಗಳ ಬಗ್ಗೆ ಆಸಕ್ತಿ ತೋರಿಸಿದರು ಎಂದು ತಿಳಿಸಿದ್ದಾರೆ.
ಪ್ರಸ್ತುತ ಮಂತ್ರಿ ಮಂಡಳದಲ್ಲಿ ಕಲಬುರಗಿ, ರಾಯಚೂರ, ಯಾದಗಿರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಮಂತ್ರಿ ಮಂಡಳದಲ್ಲಿ ಪ್ರಾತಿನಿಧ್ಯತೆ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿ, ಬಹುತೇಕ ಅಕಾಡೆಮಿಗಳಲ್ಲಿಯೂ ಸಹ ನಮ್ಮ ಪ್ರದೇಶಕ್ಕೆ ಸಿಗಬೇಕಾದ ಪ್ರಾತಿನಿಧ್ಯತೆ ಸಿಗದೆ ಅನ್ಯಾಯವಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.