ಕಲಬುರಗಿ: ರಾಜಕೀಯ ವಲಯದಲ್ಲಿ ‘ಅಜಾತ ಶತ್ರು’ಎಂದೇ ಜನಪ್ರಿಯರಾಗಿದ್ದ ಮಾಜಿ ಮುಖ್ಯಮಂತ್ರಿ ಸರ್ವಧರ್ಮ ಸಮನ್ವಯಕಾರ ದಿವಂಗತ ಡಾ. ಎನ್.ಧರ್ಮಸಿಂಗ್ ಅವರ ೮೩ ನೇ ಜನ್ಮದಿನದಂಗವಾಗಿ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಅವರ ಒಡನಾಡಿಗಳಿಗೆ ಕೊಡಮಾಡುವ ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.೨೪ ರಂದು ಬೆಳಗ್ಗೆ ೧೧.೧೫ ಕ್ಕೆ ನಗರದ ಜಗತ್ ವೃತ್ತದಲ್ಲಿರುವ ದಿ ಫೈನ್ ಆರ್ಟ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ, ಸರಳ, ಸಜ್ಜನಿಕೆಯಿಂದ ಜನಮನ್ನಣೆ ಗಳಿಸಿದ್ದ ಧರ್ಮಸಿಂಗ್‌ಜೀ ಅವರು ಪ್ರೀತಿ-ವಿಶ್ವಾಸದಿಂದಲೇ ತನ್ನ ವಿರೋಧಿಗಳ ಮನ ಗೆಲ್ಲುತ್ತಿದ್ದರು. ಇದು ಅವರ ವ್ಯಕ್ತಿತ್ವದ ವೈಶಿಷ್ಟತೆಯಾಗಿತ್ತು.
ಮಾಜಿ ಸಿಎಂ ಡಾ. ಎನ್.ಧರ್ಮಸಿಂಗ್ ಅವರು ಬಡತನದಲ್ಲಿ ಜನಿಸಿದರೂ ಬಡತನದ ಕುಲುಮೆಯಲ್ಲಿ ಬೆಂದು ಬಾಡಿ ಹೋಗದ ಸುಂದರ ಗುಲಾಬಿ ತೋಟದ ಮಂದರ ಹೂವಾಗಿ ಅರಳಿದ್ದಾರೆ. ಬಡತನ ಅವರಿಗೆ ಶಾಪವಾಗಲಿಲ್ಲ, ಬದಲಾಗಿ ವರವಾಗಿ ಪರಿಣಮಿಸಿದೆ. ಅವರಲ್ಲಿನ ಸದ್ಗುಣಗಳು ಮೇಲಕ್ಕೆತ್ತಿವೆ. ಕಠಿಣ ಪರಿಶ್ರಮ, ಸಂಘಟನಾ ಚಾತುರ್ಯತೆ ಅವರನ್ನು ಉನ್ನತ ಮಟ್ಟಕ್ಕೆ ಮುಟ್ಟಿಸಿದೆ. ತಮ್ಮ ಸತತವಾದ ಪ್ರಯತ್ನದಿಂದ ರಾಷ್ಟ್ರಮಟ್ಟಕ್ಕೆ ಬೆಳೆದಿದ್ದಾರೆ.
ಹಾಗಾಗಿ, ನೆಲೋಗಿಯಿಂದ ದೆಹಲಿಯವರೆಗಿನ ಅವರ ಸಂಘರ್ಷದ ಹೋರಾಟದ ಬದುಕಿನ ಮಾರ್ಗವನ್ನು ಇಂದಿನ ಸಮಾಜಕ್ಕೆ ತೋರಿಸುವ ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ. ಮಾನವನ ಜೀವನದ ಗುರಿ ಆದರ್ಶವಾಗಿ ಬಾಳುವುದು, ಸತ್ಕಾರ್ಯಗಳನ್ನು ಮಾಡುವುದು, ಲೋಕ ಪೂಜ್ಯನಾಗಿ ನೆನಪನ್ನು ಬಿಟ್ಟು ಹೋಗುವುದಾಗಿದೆ. ಈ ದಾರಿಯಲ್ಲಿ ಮಾಜಿ ಸಿಎಂ ದಿವಂಗತ ಡಾ. ಎನ್.ಧರ್ಮಸಿಂಗ್‌ಜೀ ಯವರು ಯಶಸ್ವಿಯಾಗಿ ನಡೆದಿದ್ದಾರೆ ಎಂದು ಅವರು ವಿವರಿಸಿದರು.
ಧರ್ಮಪ್ರಜೆ ಪ್ರಶಸ್ತಿಗೆ ಆಯ್ಕೆಯಾದ ಒಡನಾಡಿಗಳು: ಮಾಜಿ ಸಿಎಂ ಡಾ.ಎನ್.ಧರ್ಮಸಿಂಗ್ ಅವರ ಜೀವನುದ್ದಕ್ಕೂ ಒಡನಾಡಿಗಳಾಗಿದ್ದ ಹಿರಿಯ ಅನುಭವಿಗಳಾದ ಮುದಬಾಳ(ಬಿ)ಯ ಖಾಸಿಂ ಪಟೇಲ್ ಪೊಲೀಸ್ ಪಾಟೀಲ, ನೆಲೋಗಿಯ ಧರ್ಮರಾಯ ಗುಜಗೊಂಡ, ಯಡ್ರಾಮಿಯ ಚಂದ್ರಶೇಖರ ಪುರಾಣಿಕ್, ಕೋಳಕೂರಿನ ಶರಣಪ್ಪಗೌಡ ಪೇಠ ಪಾಟೀಲ, ಕಲಬುರಗಿಯ ಶೈಲಜಾ ಪಾಟೀಲ ಅವರನ್ನು ‘ಧರ್ಮಪ್ರಜೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಾಯರಿ ಮತ್ತು ತಾಳ್ಮೆಯ ರೂವಾರಿ ಎನಿಸಿಕೊಂಡಿದ್ದ ಅಜಾತ ಶತ್ರುವಿನ ನೆನಪಿಗಾಗಿ ಈ ಭಾಗದ ೫ ಜನ ಪ್ರಮುಖ ಕವಿಗಳು ತಮ್ಮ ಸ್ವರಚಿತ ಶಾಯರಿಗಳನ್ನು ವಾಚಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕರಾದ ಬಿ.ಎಂ.ಪಾಟೀಲ ಕಲ್ಲೂರ, ಶ್ರೀಕಾಂತ ಪಾಟೀಲ ತಿಳಗೂಳ, ಪರಮೇಶ್ವರ ಶಟಕಾರ, ಶಿವರಾಜ ಅಂಡಗಿ ಇತರರಿದ್ದರು.