ಜಗದೊಡೆಯನ ಬೆಂಬತ್ತಿ ಕಲ್ಯಾಣದತ್ತಿರಕ್ಕೆ ಬಂದ ಅಕ್ಕ

0
59
ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆಯಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯ ಶಿರ ಹರಿದು ಬಿದ್ದಡೆ
ಪ್ರಾಣ ನಿಮಗರ್ಪಿತವೆಂಬೆನು – ಅಕ್ಕಮಹಾದೇವಿ

ಅಕ್ಕನ ವ್ಯಕ್ತಿತ್ವ ನದಿಯಿದ್ದಂತೆ. ಈ ಹಿಂದೆ ಭೈರಾಗಿ ಬಂದ, ಹಸಿವು, ತೃಷೆಗಳು ಕಾಡಿದವು. ಅವೆಲ್ಲವನ್ನು ಗೆದ್ದು ಕಾಡಿನ ಹಾದಿ ಹಿಡಿದ ಆಕೆ ಆ ಪ್ರಕೃತಿಯಲ್ಲಿ ಒಂದಾದಳು. ಅಧ್ಯಾತ್ಮದ ಉನ್ನತ ಸ್ಥಿತಿ ತಲುಪಿದಳು. ಬಂಟ, ಬೆಟ್ಟ, ಭಕ್ತನಿರುವಂತೆ ಚನ್ನಮಲ್ಲಿಕಾರ್ಜುನನಲ್ಲಿ ಅಚಲ ನಿಷ್ಠೆ ಹೊಂದಿ ಪ್ರಾಣ ನಿನಗೆ ಅರ್ಪಿಸಿರುವುದರಿಂದ ತರಗೆಲೆ ತಿಂದಾದರೂ ನಾನು ಶುದ್ಧಳಾಗಿಹೆನು ಎಂಬ ಭರವಸೆ ನೀಡುತ್ತಾಳೆ. ಆಕೆಯ ಅಚಲ ನಿರ್ಧಾರದ ಮುಂದೆ ಪ್ರ್ರಾಕೃತಿಕ ತೊಂದರೆಗಳೆಲ್ಲವೂ ಸುಖಾಂತ್ಯವೆನಿಸಿದವು. ನಮ್ಮ ಇಚ್ಛೆಗಳು ಏನನ್ನೂ ಬದಲಾವಣೆ ತರುವುದಿಲ್ಲ. ಆದರೆ ನಾವು ತೊಡುವ ಅಚಲವಾದ ನಿರ್ಧಾರಕ್ಕೆ ಈ ಜಗತ್ತನ್ನು ಬದಲಾಯಿಸುವ ಶಕ್ತಿಯಿದೆ. ಅಂತಹ ಅಚಲ ನಿರ್ಧಾರ ತೆಗೆದುಕೊಂಡ ಅಕ್ಕನ ಎದುರಿಗೆ ಕಾಡಿನ ಗುಡ್ಡ ಮಂಜಿನಂತೆ ಕರಗಿ ಹೋಗುತ್ತದೆ.

Contact Your\'s Advertisement; 9902492681

ಅದೊಂದು ದಿನ ಪದ್ಮಾಸನ ಹಾಕಿ ಧ್ಯಾನಕ್ಕೆ ಕುಳಿತಾಗ ಧೋ ಎಂದು ಮಳೆ ಸುರಿಯುತ್ತದೆ. ನೀರಿನಲ್ಲಿ ಅಕ್ಕ ಕೊಚ್ಚಿ ಹೋಗುತ್ತಾಳೆ. ಒಂದು ಬೆಳಗಿನ ಹೊತ್ತು ಆ ಊರಿನ ಗೌಡರು ಎತ್ತಿನ ಬಂಡಿಯಲ್ಲಿ ಕುಳಿತು ಬರುತ್ತಿರುವಾಗ, ಎತ್ತಿನ ಬಂಡಿ ಹೊಡೆಯುತ್ತಿದ್ದ ಸಿದ್ದಪ್ಪ ಚಿಟ್ಟನೆ ಚೀರಿದ. ಎರಡು ಬೆಳ್ಳನೆಯ ತೆಳುವಾದ ಕಾಲುಗಳು ಮಾತ್ರ ಕಂಡವು. ಸ್ವಲ್ಪ ಮುಂದೆ ಹೋಗಿ ನೋಡಿದಾಗ, ತಲೆ, ದೇಹ ಕಾಣಿಸಿತು. ಸಮೀಪ ಹೋಗಿ ನೋಡುವಷ್ಟರಲ್ಲಿ ಆ ದೇಹದಲ್ಲಿ ಉಸಿರಾಟ ಇರುವುದು ಕಂಡು ಬಂದಿತು. ಕೊರಳಲ್ಲಿನ ರುದ್ರಾಕ್ಷಿ, ಇಷ್ಟಲಿಂಗದಿಂದ ಸಾತ್ವಿಕ ಕಳೆ ಕಂಗೊಳಿಸುತ್ತಿತ್ತು. ಪಾಪ ಈ ಇವಳಿಗೆಂಥ ಆಪತ್ತು ಬಂದಿದೆಯೋ ಏನೋ? ಎಂದು ಮನೆಗೆ ಕರೆದೊಯ್ದು ವೈದ್ಯರನ್ನು ಕರೆಸಿ ಆರೈಕೆ ಮಾಡುತ್ತಾರೆ.

ಎಚ್ಚರವಾದ ಅಕ್ಕ ನಾನು ಇಲ್ಲಿಗ್ಯಾಕೆ ಬಂದಿರುವೆ. ನನ್ನನ್ನು ಕರೆ ತಂದವರು ಯಾರು? ಕಲ್ಲ ಹೊಕ್ಕಡೆ ಕಲ್ಲ ಹೊರಿಸಿದೆ. ಗಿರಿಯ ಹೊಕ್ಕಡೆ ಗಿರಿಯ ಹೊರಿಸಿದೆ ಎನ್ನುವಂತೆ ಈ ಸಂಸಾರ ಬೇಡವೆಂದರೂ ನನಗೆ ಮತ್ತೆ ಮತ್ತೆ ಇಂತಹ ಪರೀಕ್ಷೆಗಳು ಯಾಕೆ ಬರುತ್ತಿವೆ? ಇದು ಕೂಡ ಆ ದೇವರ ಕರುಣೆ-ಪ್ರೀತಿಯೇ ಇರಬೇಕು. ಚನ್ನಮಲ್ಲಿಕಾರ್ಜುನ ನನ್ನ ಜೊತೆಗಿರುವುದಕ್ಕೆ ಇದುವೇ ಸಾಕ್ಷಿ ಅಂದುಕೊಂಡಳು. ನಾಲ್ಕೈದು ದಿವಸ ಅಲ್ಲಿಯೇ ಇದ್ದಾಗ ಜನರು ಬಂದು ಇವಳಿಗೆ ಭೇಟಿಯಾಗುತ್ತಿದ್ದರು. ನೀವೆಲ್ಲ ಯಾರು? ಎಂದು ಅಕ್ಕ ಅವರಿಗೆ ಕೇಳಿದಳು. ನಾವು ಕಲ್ಯಾಣದ ಭಕ್ತರು ಎಂದು ಹೇಳುತ್ತಾರೆ. ಹೌದಾ! ಹಾಗಾದರೆ ಕಲ್ಯಾಣ ಇಲ್ಲಿಂದ ಎಷ್ಟು ದೂರ ಎಂದು ಮರು ಪ್ರಶ್ನೆ ಹಾಕುತ್ತಾಳೆ. ಬಹಳ ಸಮೀಪ ಇದೆ. ಒಂದೆರಡು ದಿನದಲ್ಲಿ ಮುಟ್ಟಬಹುದು ಎಂದು ಅವರು ಹೇಳುತ್ತಾರೆ. ಓಹ್! ಆ ಮಳೆ ನೀರು ನನ್ನನ್ನು ಇಲ್ಲಿಯವರೆಗೆ ಕರೆ ತಂದೀತೆ? ಇದು ಕೂಡ ಆ ಚನ್ನಮಲ್ಲಿಕಾರ್ಜುನನ ಚಮತ್ಕಾರ ಎಂದುಕೊಳ್ಳುತ್ತಾಳೆ.

ಅಕ್ಕ ಅಲ್ಲಿರುವುದನ್ನು ತಿಳಿದ ಸುತ್ತಲಿನ ಜನ ಬಂದು ನಮಸ್ಕರಿಸಿ, ತಮ್ಮ ಸಂಸಾರದ ತಾಪತ್ರಯಗಳನ್ನು ಅವಳ ಮುಂದೆ ನಿವೇದಿಸಿಕೊಳ್ಳುತ್ತಾರೆ. ಗಂಡ ಮನೆಯೊಡೆಯ ಅಲ್ಲ. ಹಾಗೆ ನೋಡಿದರೆ ಚನ್ನಮಲ್ಲಿಕಾರ್ಜುನ ನಿಜವಾದ ಒಡೆಯ. ನೃಪನಿಲ್ಲದ ರಾಜ್ಯವ ಸಾಮಂತರು ಆಳವಂತೆ ನಿಮ್ಮ ನೆನಹಿಲ್ಲದ್ದರಿಂದ ಈ ದೆವ್ವ, ಭೂತ, ಪಿಶಾಚಿಗಳ ಕಾಟದಿಂದ ಬಳಲುವಂತಾಗಿದೆ ಎಂಬ ಶಾಶ್ವತ ಪರಿಹಾರ ನೀಡುತ್ತಾಳೆ.ಕೆಲ ದಿನ ಅಲ್ಲಿಯೇ ಪ್ರವಚನ ಹೇಳಲು ಶುರು ಮಾಡುತ್ತಾಳೆ.

“ಕಣ್ಣಿಗೆ ಶೃಂಗಾರ ಗುರು ಹಿರಿಯರ ನೋಡುವುದು” ಎಂಬ ವಚನವನ್ನು ಬರೆದು, ಬಣ್ಣದಿಂದ ಬೆಲೆ ಬರುವುದಿಲ್ಲ. ಗುಣದಿಂದ ಬೆಲೆ ಬರುತ್ತದೆ. ಲಿಂಗಕ್ಕೆ ಆಚಾರವೇ ಚೆಲುವು. ಹೊರಗಣ ಶೃಂಗಾರ, ಒಳಗಣ ರಣ ರಣ. ಹೊರಗೆ ಜಗಮಗ, ಒಳಗೆ ಧಗಧಗ ಇರಬಾರದು. ಶೃಂಗಾರ ಇರುವುದು ಪರೋಪಕಾರದಲ್ಲಿ. ಪರೋಪಕಾರದಿಂದ ಪ್ರಸನ್ನತೆ ಬರುತ್ತದೆ. ಗುರುವನ್ನು ನೋಡಬೇಕು. ಲಿಂಗವನ್ನು ಹಾಡಬೇಕು. ಜಂಗಮವನ್ನು ಕೂಡಬೇಕು. ಲೋಕಾಂತಕ್ಕಿಂತ ಏಕಾಂತ, ಏಕಾಂತಕ್ಕಿಂತ ಶರಣರ ಸಂಗವೇ ಲೇಸು ಎಂದು ಕಲ್ಯಾಣದ ಶರಣರ ಮಹತ್ವವನ್ನು ಕೊಂಡಾಡುತ್ತಾಳೆ.

ನಾವು ಹೇಗಿದ್ದೆವೆಯೋ ಹಾಗೆಯೇ ಕಾಣಿಸಿಕೊಳ್ಳಬೇಕು. ದೇವರ ಸೃಷ್ಟಿಯಲ್ಲಿ ಜೆರಾಕ್ಸ್ ಯಂತ್ರವೇ ಇಲ್ಲ. ಆತ ಓರಿಜಿನಲ್ ಯಂತ್ರವನ್ನು ಸೃಷ್ಟಿ ಮಾಡಿದ್ದಾನೆ. ಇಂತಹ ಒಡಲೆಂಬ ಬಂಡಿಗೆ ಮೃಡ ಶರಣರ ನುಡಿಗಡಣ ಆಭರಣವಾಗಬೇಕಿದೆ. ಬದುಕಿನಲ್ಲಿ ಶೃಂಗಾರ ಬೇಕು. ಆದರೆ ಅದು ಶಿಸ್ತಿನ ರೂಪದಲ್ಲಿರಬೇಕು ಎಂಬ ಶರಣ ಮಾರ್ಗವನ್ನು ಅಲ್ಲಿಗೆ ಬಂದವರೆದುರು ಅರಹುತ್ತಾಳೆ ಅಕ್ಕ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here