ಸುರಪುರ: ಇಂದಿನ ರಾಜ್ಯ ಸರಕಾರದ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃಧ್ಧಿಗೆ ಸರಕಾರ ಬಿಡುಗಡೆ ಮಾಡಿದ ಹಣ ಖರ್ಚಾಗದೆ ಉಳಿಸಿರುವುದನ್ನು ಬೇರೆ ಇಲಾಖೆಗೆ ಬಳಸುವುದಾಗಿ ಹೇಳುತ್ತಿದ್ದಾರೆ.ಇದನ್ನು ವಾಲ್ಮೀಕಿ ನಾಯಕ ಸಂಘವು ತೀವ್ರವಾಗಿ ವಿರೋಧಿಸುತ್ತದೆ ಎಂದು ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ ಮಾತನಾಡಿದರು.
ನಗರದ ತಹಸೀಲ್ದಾರ ಕಚೇರಿ ಮುಂದೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಇಂದು ರಾಜ್ಯದಲ್ಲಿರುವ ಎಸ್.ಸಿ,ಎಸ್.ಟಿ ಸಮುದಾಯ ತೀರಾ ಹಿಂದುಳಿದಿದೆ ಇದಕ್ಕೆ ಕಾರಣ ಅಧಿಕಾರಿಗಳು.ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಸರಿಯಾಗಿ ಬಳಸದೆ ಹಾಗೇ ಉಳಿಸುವ ಮೂಲಕ ಸಮಾಜದ ಅಭಿವೃಧ್ಧಿಯನ್ನು ಕಡೆಗಣಿಸುತ್ತಿದ್ದಾರೆ.ಇದರಿಂದ ಇಂದು ನಮ್ಮ ಸಮಾಜ ತೊಂದರೆ ಅನುಭವಿಸಲು ಕಾರಣವಾಗುತ್ತಿದೆ.ಆದ್ದರಿಂದ ಅಂತಹ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
ಸಂಘದ ಗೌರವಾಧ್ಯಕ್ಷ ಸಿದ್ದಣ್ಣಗೌಡ ಕರಿಬಾವಿ ಮಾತನಾಡಿ,ಸರಕಾರ ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಅಭೀವೃಧ್ಧಿಗಾಗಿ ೩೦.೪೪೫ ಕೋಟಿ ರೂಪಾಯಿ ಅನುದಾನ ನೀಡಿದೆ,ಅದರಲ್ಲಿ ಕೇವಲ ೧೧.೮೬೧ ಕೋಟಿ ಖರ್ಚು ಮಾಡಿ ಸುಮಾರು ೧೮.೫೮೪ ಕೋಟಿ ರೂಪಾಯಿ ಅನುದಾನ ಉಳಿಸಿಕೊಂಡಿವೆ.ಇದರಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಮಗಾರಿಗಳು ನಡೆಯದೆ ಅಭಿವೃಧ್ಧಿ ಕುಂಠಿತವಾಗಿದೆ.ಇದಕ್ಕೆ ಅಧಿಕಾರಿಗಳ ಬೇಜವಬ್ದಾರಿತನವೆ ಕಾರಣವಾಗಿದೆ.ಆದ್ದರಿಂದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಉಳಿದ ಅನುದಾನವನ್ನು ಸಮಾಜದ ಏಳಿಗೆಗೆ ಖರ್ಚು ಮಾಡುವಂತೆ ಆಗ್ರಹಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರರಾದ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ,ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ,ರಾಜಾ ಅಪ್ಪಾರಾವ್ ನಾಯಕ ಸತ್ಯಂಪೇಟೆ,ಗೋಪಾಲ ನಾಯಕ ಡೊಣ್ಣಿಗೇರಾ,ವೆಂಕಟೇಶ ಸಾವಂತಗಿರಿ,ಸುಭಾಸ ವಾಗಣಗೇರಾ,ಭೀಮಣ್ಣ ದೊರೆ ಮಾಲಗತ್ತಿ,ರಂಗಪ್ಪ ನಾಯಕ ತಿಂಥಣಿ,ದೇವರಾಜ ಗಿರಣಿ ದೇವಾಪುರ,ಬಾಪುಗೌಡ ತೀರ್ಥ,ಗುರುನಾಥರೆಡ್ಡಿ ಸೇರಿದಂತೆ ಅನೇಕರಿದ್ದರು.