ಸುರಪುರ: ನಗರದಲ್ಲಿ ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ಮಲಗುವ ಮೂಲಕ ಸಾರ್ವಜನಿಕರಿಗೆ ಹಾಗು ವಾಹನಗಳ ಓಡಾಟಕ್ಕೆ ತೊಂದರೆ ಕೊಡುತ್ತಿರುವ ಜಾನುವಾರುಗಳನ್ನು ಕಟ್ಟಿ ಹಾಕಿಕೊಳ್ಳುವಂತೆ ಜಾನುವಾರುಗಳ ಮಾಲೀಕರಿಗೆ ಕಳೆದ ಅನೇಕ ದಿನಗಳಿಂದ ನಗರದ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಿದ್ದ ನಗರಸಭೆ ಅಧಿಕಾರಿಗಳು ಕೊನೆಗೆ ಶುಕ್ರವಾರ ರಾತ್ರಿಯಿಂದ ಬೀದಿ ದನಗಳ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.
ನಗರದ ಎಪಿಎಂಸಿ ಗಂಜ್ ಹಾಗು ಬಸ್ ನಿಲ್ದಾಣದಲ್ಲಿ ಸದಾಕಾಲ ರಸ್ತೆಗೆ ಅಡ್ಡಲಾಗಿ ಮಲಗುವ ಮೂಲಕ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದನ್ನು ಅನೇಕಬಾರಿ ಪತ್ರಿಕೆಯಲ್ಲಿ ಸುದ್ದಿ ಮಾಡುವ ಮೂಲಕ ನಗರಸಭೆಯ ಗಮನಕ್ಕೂ ತರಲಾಗಿತ್ತು.ಇದರಿಂದ ಎಚ್ಚೆತ್ತುಕೊಂಡು ನಗರಸಭೆ ಅಧಿಕಾರಿಗಳು ಶುಕ್ರವಾರ ರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಲಾರಿಯಲ್ಲಿ ಬೀದಿ ದನಗಳನ್ನು ತುಂಬವ ಕೆಲಸಕ್ಕೆ ಮುಂದಾಗಿ ಗಂಜ್ ಬಳಿಯಲ್ಲಿ ಎರಡು ಹಾಗು ಬಸ್ ನಿಲ್ದಾಣದಲ್ಲಿನ ಮೂರು ಒಟ್ಟು ಐದು ಜಾನುವಾರುಗಳನ್ನು ಕಲಬುರ್ಗಿಯಲ್ಲಿರುವ ಗೋಶಾಲೆಗೆ ಸಾಗಿಸಿದ್ದಾರೆ.
ಈಗ ಬರೀ ಐದು ಜಾನುವಾರುಗಳು ಸಿಕ್ಕಿವೆ,ಈಗಲೆ ದನಗಳ ಮಾಲೀಕರು ತಮ್ಮ ಜಾನುವಾರುಗಳ ಕಟ್ಟಿಕೊಂಡರೆ ಸರಿ ಇಲ್ಲವಾದರೆ ಮತ್ತೆ ಬೀದಿಯಲ್ಲಿ ಸಿಗುವ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಲಾಗುವುದು. – ಸುನೀಲ ನಾಯಕ ಪರಿಸರ ಅಭಿಯಂತರ ನಗರಸಭೆ ಸುರಪುರ
ಇದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.ಒಂದು ತಿಂಗಳ ಹಿಂದೆಯೆ ಬೀದಿ ದನಗಳ ಹಿಡಿಯುವ ಕೆಲಸ ನಗರಸಭೆ ಆರಂಭಿಸಿತ್ತು.ಆಗ ಕೆಲ ಸಂಘಟನೆಗಳವರು ಮತ್ತು ಸಾರ್ವಜನಿಕರು ಒಂದು ಬಾರಿ ಅವಕಾಶ ನೀಡಿ,ಜಾನುವಾರುಗಳ ಮಾಲೀಕರು ದನಗಳನ್ನು ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದ್ದರಿಂದ ಬಿಟ್ಟಿದ್ದ ಅಧಿಕಾರಿಗಳು ಅನೇಕ ಬಾರಿ ಧ್ವನಿವರ್ಧಕದ ಮೂಲಕ ನಗರದಲ್ಲಿ ಪ್ರಕಟಣೆಯನ್ನೂ ಹೊರಡಿಸಿ ಜಾಗೃತಿ ಮೂಡಿಸಲಾಗಿತ್ತು.ಆದರೂ ನಿರ್ಲಕ್ಷ್ಯ ತೋರಿದ್ದ ಜಾನುವಾರುಗಳ ಮಾಲೀಕರು ಈಗ ತಮ್ಮ ದನಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗುವ ಪರಸ್ಥಿತಿ ನಿರ್ಮಿಸಿಕೊಂಡಿದ್ದಾರೆ.
ಕಾರ್ಯಾಚರಣೆ ಕುರಿತು ನಗರಸಭೆಯ ಪರಿಸರ ಅಭಿಯಂತ ಸುನೀಲ ನಾಯಕರಿಗೆ ಮಾತನಾಡಿಸಿದಾಗ, ’ಅನೇಕ ಬಾರಿ ಜನರಲ್ಲಿ ಜಾಗೃತಿ ಮೂಡಿಸಿದ್ದೆವೆ ಆದರೂ ಎಚ್ಚರವಹಿಸಿಲ್ಲವಾದ್ದರಿಂದ ಬೇಸತ್ತು ಇಂದು ಕಾರ್ಯಾಚರಣೆ ನಡೆಸಬೇಕಾಯಿತು.ಈ ದನಗಳನ್ನು ಕಲಬುರ್ಗಿಯ ಗೋಶಾಲೆಗೆ ಕಳುಹಿಸಲಾಗುತ್ತದೆ.ಅಲ್ಲಿಗೆ ಹೋದ ದನಗಳನ್ನು ಗೋಶಾಲೆಯವರು ಮತ್ತೆ ಮರಳಿ ಕೊಡುವುದಿಲ್ಲ.ಇದರಿಂದ ಜಾನುವಾರುಗಳ ಮಾಲೀಕರು ನಷ್ಟ ಅನುಭವಿಸುತ್ತಾರೆ ನಾವೇನು ಮಾಡಲಾಗದು’ ಎಂದರು.
ಕಾರ್ಯಾಚರಣೆಯಲ್ಲಿ ಎಸ್.ಐಗಳಾದ ಲಕ್ಷ್ಮಣ ಕಟ್ಟಿಮನಿ,ಶಿವಪುತ್ರ,ಸಿಎಒ ಓಂಕಾರ ಪೂಜಾರಿ,ಅಂಬ್ಲಪ್ಪ ದಪೇದಾರ ಪೌರಕಾರ್ಮಿಕರಾದ ಜಗದೀಶ ಶಾಖನವರ್,ನಾಗೇಶ್,ಹಣಮಂತ,ಬೆನಕಪ್ಪ,ಮಹಾಂತೇಶ,ಲಕ್ಷ್ಮಣ ದೊರೆ ಇತರರಿದ್ದರು.