ಕಲಬುರಗಿ: ಅಂಧಕಾರದ ಆಚರಣೆ ಮತ್ತು ದೇವದಾಸಿ ಅನಿಷ್ಟ ಪದ್ದತಿಯಿಂದ ದೂರಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಮಾನ್ಯ ಜನರಂತೆ ತಾವು ಕೂಡ ಸರಕಾರದ ಯೋಜನೆಯ ಸೌಲಭ್ಯಗಳನ್ನು ಪಡೆದು ಆರ್ಥಿಕ ಅಭಿವೃದ್ದಿ ಹೊಂದಬೇಕೆಂದು ತಾಲೂಕ ಪಂಚಾಯತ ಅಧ್ಯಕ್ಷ ಜಗದೇವ ರೆಡ್ಡಿ ಸಲಹೆ ನೀಡಿದರು.
ಚಿತ್ತಾಪೂರ ಪಟ್ಟಣದ ತಾಲೂಕ ಪಂಚಾಯತ ಸಭಾಂಗಣದಲ್ಲಿ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ದೇವದಾಸಿ ಪುನರವಸತಿ ಯೋಜನೆ ಕಲಬುರಗಿ ಇವರು ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅವರು ಅಧಿಕಾರಿಗಳು ಯೋಜನೆಯ ಸದುಪಯೋಗದಲ್ಲಿ ಅಡೆತಡೆ ಮಾಡಿದರೆ ನನ್ನ ಗಮನಕ್ಕೆ ತಂದರೆ ಕ್ರಮವಹಿಸುವುದಾಗಿ ಅಭಯ ನೀಡಿದರು.
ದೇವದಾಸಿ ಪುನರ ವಸತಿ ಕಛೇರಿ ವತಿಯಿಂದ ತಾವುಗಳು ಈಗಾಗಲೇ ಸೌಲಭ್ಯ ಪಡೆಯುತ್ತಿದ್ದು ಸಂತಸದ ವಿಷಯ. ಮಾಜಿ ದೇವದಾಸಿಯರಿಗೆ ಮಾತ್ರ ಈ ಯೋಜನೆ ಸೀಮಿತವಾಗಿರುತ್ತದೆಯೇ ಹೊರತು ಸರಕಾರದ ಸೌಲಭ್ಯ ಸಿಗುತ್ತದೆ ಎಂದು ತಮ್ಮಲ್ಲಿ ದೇವದಾಸಿ ಪದ್ದತಿ ಸಕರಿಸಿದ್ದೇ ಆದರೆ ತಮಗೆ ದಂಡ ಮತ್ತು ಶೀಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೇವದಾಸಿ ಪುನರವಸತಿ ಯೋಜನಾಧಿಕಾರಿಗಳಾದ ಎಸ್. ಎನ್ ಹಿರೇಮಠ ಮಾತನಾಡಿ, ದೇವದಾಸಿ ಇದೊಂದು ಅನಿಷ್ಟ ಪದ್ದತಿ. ಇದರ ದುಷ್ಪರಿಣಾಮಗಳು ಸಮಾಜಕ್ಕೆ ಕಳಂಕ ತರುವಂತದ್ದು, ಅನಾದಿ ಕಾಲದಿಂದ ಇದು ದೇವರ ಹೆಸರಿಗೆ ಹೆಣ್ಣು ಮಗಳನ್ನು ದಾಸಿಯನ್ನಾಗಿ ಮಾಡುತ್ತಿದ್ದರು. ಅವರಿಗೆ ಮದುವೆ ಆಗುತ್ತಿರಲಿಲ್ಲ. ದೇವರ ಸೇವ ಮಾಡಿಕೊಂಡು ಇರುತ್ತಿದ್ದರು. ಕಾಲಾಂತರದಿಂದ ಇದು ಬರು ಬರುತ್ತಾ ಅನಿಷ್ಟ ಪದ್ದತಿಯಾಗಿ ಪರಿಣಮಿಸಿದ್ದರಿಂದ ಸಮಾಜಕ್ಕೆ ಮಾರಕ ರೋಗದಂತೆ ಹಬ್ಬಿತು. ಈ ಪದ್ದತಿಯನ್ನು ತಡೆದು ಸಾಮಾನ್ಯ ಜನರಂತೆ ಬದುಕಲು ರಾಜ್ಯ ಸರಕಾರ ಬುಡ ಸಮೇತ ಈ ಪದ್ದತಿಯನ್ನು ಕಿತ್ತು ಹಾಕಿ ಸಮೃದ್ದ ಸಮಾಜ ಸೃಷ್ಟಿ ಮಾಡಲು ಸಕಲ ವ್ಯವಸ್ಥೆಯನ್ನು ಕೈಗೊಂಡು ಮಹಿಳಾ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ೧೯೯೩-೦೪ ಮತ್ತು ೨೦೦೭-೦೮ರ ಸಮೀಕ್ಷೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಡೆಸಿದ ಸಮೀಕ್ಷೆ ಪಟ್ಟಿ ಪ್ರಕಾರ ಕಲಬುರಗಿ ಜಿಲ್ಲೆಗೆ ೧೪೪೫ ಮಾಜಿ ದೇವದಾಸಿಯವರು ಇದ್ದಾರೆ. ೪೫ ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಮಾಶಾಸನ ಸೌಲಭ್ಯ ನಿವೇಶನ ಇದ್ದು ವಸತಿ ರಹಿತರಿಗೆ ಮಹಿಳಾ ಅಭಿವೃದ್ದಿ ನಿಗಮದಿಂದ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ವಸತಿ ಕಲ್ಪಿಸಲಾಗುತ್ತಿದೆ ಎಂದರು.
ಇದಲ್ಲದೇ ಸ್ವ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ದಿ ಹೊಂದಲು ನಿಗಮದಿಂದ ಸಾಲ ಮತ್ತು ಸಹಾಯಧನ ಕಲ್ಪಿಸಲಾಗುತ್ತಿದೆ. ಇದು ಲಾಭ ಪಡೆದುಕೊಳ್ಳಬೇಕು. ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯವಂತರಾಗಿರಲು ತಾಲೂಕ ಮಟ್ಟದ ಆರೋಗ್ಯ ಶಿಬಿರ, ಜಿಲ್ಲಾ ಮಟ್ಟದ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ದೇವದಾಸಿ ಅನಿಷ್ಟ ಪದ್ದತಿ ಹೋಗಲಾಡಿಸಲು ಜಾತ್ರಾ ಜಾಗೃತಿ ಕಾರ್ಯಕ್ರಮ, ಬೀದಿ ನಾಟಕ, ಸಾಮಾಜಿಕ ನ್ಯಾಯ ಸಮಿತಿ ಜತೆಗೆ ಕಾನೂನು ಅರಿವು ನೆರವು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಸ್ ಪಿ ಸಾತನೂರಕರ್ ಮಾತನಾಡಿ, ಬಾಲ್ಯ ವಿವಾಹ ಪದ್ದತಿ ಇದೂ ಒಂದು ಸಮಾಜಿಕ ಪೀಡುಗಾಗಿದೆ. ಪುರುಷನಿಗೆ ೨೧ ವರ್ಷ, ಹೆಣ್ಣು ಮಕ್ಕಳಿಗೆ ೧೮ ವರ್ಷ ವಯಸ್ಸಾದ ಮೇಲೆ ಮದುವೆ ಮಾಡುವುದು ಸಮಂಜಸ. ಇದನ್ನು ಹೊರತುಪಡಿಸಿ ಗ್ರಾಮಾಂತರ ಪ್ರದೇಶದಲ್ಲಿ ೧೫-೧೬ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದಾರೆ. ಅದು ಅಪರಾಧ ಅಂತವರಿಗೆ ೨ ವರ್ಷ ಸಜಾ, ೧ ಲಕ್ಷ ದಂಡ ವಿಧಿಸಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಮದುವೆ ಮಆಡುವುದರಿಂದ ಅಂಗಾಂಗಳು ಅಷ್ಟು ಬಲಿಷ್ಠವಾಗುದಿಲ್ಲ. ಹುಟ್ಟುವ ಮಕ್ಕಳು ದುರ್ಬಲವಾಗಿ ಹುಟ್ಟುತ್ತವೆ ಎನ್ನೋದನ್ನು ಅರ್ಥ ಮಾಡಿಕೊಳ್ಳಬೇಕು.
ನ್ಯಾಯವಾದಿ ಅಯ್ಯಣ್ಣ ಆವಂಟಿ ಮಾತನಾಡಿ, ಉಚಿತ ಕಾನೂನು ಸೇವಾ ಪ್ರಾಧಿಕಾರದ ಸದುಪಯೋಗ ಪಡಿದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಪ್ರಥಮ ದರ್ಜೆ ಸಹಾಯಕ ಸಂತೋಷಕುಮಾರ ಉಪಸ್ಥಿತರಿದ್ದರು. ಜಗನ್ನಾಥ ನಾಟೀಕಾರ್ ನಿರೂಪಿಸಿದರು. ವಾಯ್.ಡಿ.ಬಡಿಗೇರ್ ವಂದಿಸಿದರು.