ಹ್ಯಾಪಿ ನ್ಯೂ ಈಯರೆಂದರೆ….

0
41

ಎಂದಿನಂತೆ ಮತ್ತೆ ಇಂದು ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ! ಬಹಳ ಮಂದಿ ಪಾಲಿಗದು ಮದ್ಯರಾತ್ರಿಯೇ ಆಗಿರ್ತದೆ. ನಟ್ಟ ನಡುರಾತ್ರಿ ಹನ್ನೆರಡು ಗಂಟೆ ಬಾರಿಸುತ್ತಿದ್ದಂತೆ ಮದ್ಯರಾತ್ರಿಗರ ಹುಳಿಮದ್ಯದ ಹುಳೀ ಕಿರುಚಾಟಗಳದ್ದೇ ಗೌಜು ಗದ್ದಲ !! ನಗರವಾಸಿಗಳ ತುಂಬೆಲ್ಲ. ಈ ರೋಗ ಈಗೀಗ ಹಳ್ಳಿಗಳಿಗೂ ಹಬ್ಬಿದೆ. ಇದು ಹೊಸವರ್ಷದ ಸ್ವಾಗತವಂತೆ.! ಟೀವಿಗಳ ತುಂಬೆಲ್ಲ ಇವುಗಳದ್ದೇ ಅಬ್ಬರದ ಪ್ರಚಾರ. ಲಿಂಗಭೇದ ಮರೆತ ಕುಡಿತ, ಕುಣಿತಗಳಿಂದಾಗಿ ಅವಗಡಗಳು ಘಟಿಸಬಾರದೆಂದು ಪೊಲೀಸರ ಗಸ್ತು!!

ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವರ್ಷಕ್ಕೆ ವಿದಾಯ, ಹೊಸದಕ್ಕೆ ಸ್ವಾಗತ. ತರಹೇವಾರಿ ಥ್ರಿಲ್ಲಿಂಗ್ ಭ್ರಮೆಯ ಡ್ರಿಲ್ಲಿಂಗ್ ಪೋಷ್ಟಗಳು. ಹೊಸ ಡೈರಿ, ಕ್ಯಾಲೆಂಡರ್ ಗಳು, ಈಗೀಗ ಹೊಸ ಗೆಳೆತನಗಳು. ಇವು ಯಾವೂ ನನಗೆ ಹೊಸ ವರ್ಷದ ಖುಷಿಯನ್ನು ಇದುವರೆಗೆ ನೀಡಿಲ್ಲ.

Contact Your\'s Advertisement; 9902492681

ನನ್ನ ಹಾಗೆ ಅನೇಕರಿಗೂ ನೀಡಿಲ್ಲದಿರಬಹುದು.? ಇನ್ನು ಕೆಲವರಂತೂ ” ನಾವು ಭಾರತೀಯರು ಅದರಲ್ಲೂ ಹಿಂದೂಗಳಿಗೆ ಯುಗಾದಿಯೇ ಹೊಸವರ್ಷ” ಮುಂತಾಗಿ ಸಂಸ್ಕಾರ ವರಸೆಯ ಕಮೆಂಟ್ಸ್ ಮಾಡುತ್ತಾರೆ. ಹೋಗಲಿ ಉಗಾದಿಗಾದರೂ ಅಂಥದೊಂದು‌ ತಾಜಾ ತಾಜಾ ಹುರುಪಿನ ಹೊಸ ವರ್ಷಾಚರಣೆಯ ಖುಷಿ ಉಕ್ಕಿ ಹರಿದೀತೆಂದರೆ, ಹುಂ,ಹೂಂ ಅಲ್ಲೂ ಇಲ್ಲ. ನಮ್ಮ ಕೂಡು ಕುಟುಂಬ ಪ್ರೀತಿಯ ಸಹಜ ಸಂತೃಪ್ತ ಬದುಕು ಹೈಜಾಕ್ ಆಗಿದೆ.

ಹಾಗಾದರೆ ಹ್ಯಾಪಿ ನ್ಯೂ ಈಯರ್ ಅಂದರೇನು? ಇಲ್ಲದಿರುವ, ಸಹಜವಾಗಿ ಉಂಟಾಗದಿರುವ ಸಂತಸ ಸಂಭ್ರಮಗಳ ಭ್ರಮೆಯ ಸಮೂಹಸನ್ನಿ ಸೃಷ್ಟಿಸುವುದೇ ಭಾಗಶಃ ನಿಜ. ಮತ್ತೆ ಮತ್ತೆ ಹೊಸ ವರ್ಷಾಚರಣೆ ಎಂಬ ಮಾಯಾವಿಯ ಹಿಂದೆ ಅಮಲಿನ ಲೋಕದ ಹುನ್ನಾರವೇ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಅದೊಂದು ಬಿಸಿನೆಸ್ ಮ್ಯಾನೇಜಮೆಂಟ್ ಜಗದ ಹಿಡನ್ ಲೆಕ್ಕಾಚಾರ. ಗೋಳೀಕರಣ ಲೋಕದ ಬಂಡವಾಳಿಗರ ವ್ಯಾಪಾರಿ ಹುನ್ನಾರವಲ್ಲದೇ ಇನ್ನೇನೂ ಇಲ್ಲ. ಸಾಲಮಾಡಿಯಾದರೂ ತುಪ್ಪ ತಿನ್ನು ಎಂಬ ಹಳೆಯ ವ್ಯಸನದ ಮುಂದುವರಿದ ಹೊಸಭಾಗ… ನೀವೇನಂತೀರಿ..?

ಮಲ್ಲಿಕಾರ್ಜುನ ಕಡಕೋಳ
ಮೊ : 93410 10712

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here