ಸುರಪುರ: ತಾಲೂಕಿನ ಹುಣಸಗಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕುಮಾರಿ ಧನ್ಯಶ್ರೀ ಮಹಾಂತೇಶ ಮುರಾಳರ ಹುಟ್ಟು ಹಬ್ಬದ ಅಂಗವಾಗಿ ಸಾವಿರ ಮಕ್ಕಳಿಗೆ ಬಟ್ಟೆ ಚೀಲಗಳ ವಿತರಿಸುವ ಮೂಲಕ ಪರಿಸರ ಜಾಗೃತಿ ನಮ್ಮ ನಿಮ್ಮ ಹೊಣೆ ಎಂದು ಅರಿವು ಮೂಡಿಸಲಾಯಿತು.
ಧನ್ಯಶ್ರೀಯ ಏಳನೆ ವರ್ಷದ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಬೇಕೆಂಬ ಬಯಕೆ ಹೊಂದಿದ್ದ ಮಹಾಂತೇಶ ಮುರಾಳ ದಂಪತಿಗಳು ಇಂದು ಪ್ಲಾಸ್ಟಿಕ್ ಎಂಬ ರಾಕ್ಷಸ ಹೇಗೆ ಪರಿಸರ ಹಾಳು ಮಾಡುತ್ತಿದೆ ಎಂಬುದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಚರಣೆ ಮಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಸೇವಾ ಕಾರ್ಯಕರ್ತ ನಂದುಲಾಲ್ ಠಾವಣಿ ಮಾತನಾಡಿ,ಪರಿಸರ ಮನುಷ್ಯನಿಗೆ ಏನೆಲ್ಲವನ್ನು ಕೊಟ್ಟಿದ್ದರು ಅದಕ್ಕೆ ನಾವೇನು ಕೊಡುವುದಿಲ್ಲ.ಆದಕಾರಣ ಕನಿಷ್ಟ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಸ್ವಚ್ಛ ಸುಂದರ ಭಾರತ ಹಾಗು ಮಕ್ಕಳ ಸುಂದರ ಬಾಲ್ಯ ನಿರ್ಮಿಸುವುದು ಹೇಗೆ ಎಂಬ ವಿಷಯದ ಕುರಿತು ಶಿಕ್ಷಕ ಸಾಹೇಬಗೌಡ ಬಿರೆದಾರ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ,ಸುಂದರ ಪರಿಸರ ನಮ್ಮದಾಗಿದೆ ಅದನ್ನು ಹಾಳು ಮಾಡುವುದು ಮನುಷ್ಯನ ವಿಕೃತಿಯಾಗಿದೆ.ಪ್ಲಾಸ್ಟಿಕ್ ಬಳಕೆಯಿಂದ ಪಶುಪಕ್ಷಿ ಜಲಚರಗಳಿಗು ಅಪಾಯವಿದೆ.ಮಣ್ಣಿನ ಗುಣಮಟ್ಟವು ಹಾಳಾಗುತ್ತದೆ.ಮನುಷ್ಯನ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಆದ್ದರಿಂದ ನಾವು ಮನೆಯಿಂದ ಹೋಗುವಾಗ ಇಂತಹ ಬಟ್ಟೆಯ ಚೀಲಗಳನ್ನು ಬಳಸಬೇಕೆಂದು ತಿಳಿಸಿದರು.ಈಗ ನೀವೆಲ್ಲರು ತೆಗೆದುಕೊಂಡ ಬಟ್ಟೆ ಚೀಲಗಳನ್ನು ನಿಮ್ಮ ಮನೆಯವರಿಗೆ ನೀಡಿ ಅವರಿಗೂ ಇದರ ಬಗ್ಗೆ ತಿಳಿಸುವಂತೆ ಕರೆ ನೀಡಿದರು.ಮಗಳ ಹುಟ್ಟು ಹಬ್ಬದ ಕಾರಣದಲ್ಲಿ ಇಂತಹ ಪರಿಸರ ಕಾಳಜಿ ತೋರಿದ ಮಹಾಂತೇಶ ಮುರಾಳ ದಂಪತಿಗಳ ಸೇವೆ ಅಮೋಘವಾಗಿದೆ ಎಂದರು.
ಕಾರ್ಯಕ್ರಮದ ಕುರಿತು ಬಸವರಾಜ ಮೇಲಿನಮನಿ ಮಾತನಾಡಿ,ಪರಿಸರ ಸಂರಕ್ಷಣೆ ಹಾಗು ದೇಶಾಭಿಮಾನ ಬೆಳೆಸಿಕೊಳ್ಳುವುದು ಇಂದು ಅವಶ್ಯಕವಾಗಿದೆ.ಇಂದಿನ ಮಕ್ಕಳೆ ಮುಂದಿನ ನಾಗರಿಕರು ಇವರಲ್ಲಿ ಪರಿಸರ ಕಾಳಜಿ ಬೆಳೆಸಿದರೆ ಪರಿಸರ ಬೆಳೆಸಿದಂತಾಗಲಿದೆ ಎಂದರು.
ಅಮೃತಬಾಯಿ ಜಹಾಗೀರದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,ನಂತರ ಶಾಲೆಯ ಎಲ್ಲಾ ಮಕ್ಕಳಿಗೂ ಬಟ್ಟೆ ಚೀಲಗಳನ್ನು ವಿತರಿಸಲಾಯಿತು.ವೇದಿಕೆ ಮೇಲೆ ದೇವು ಬೈಚಬಾಳ,ಶ್ರೀಶೈಲ ಹೂಗಾರ, ಮಹಾಂತೇಶ ಮುರಾಳ ದಂಪತಿಗಳು, ಸುಮಂಗಲಾ ಇದ್ದರು.ನಾಗನಗೌಡ ಪಾಟೀಲ ನಿರೂಪಿಸಿದರು,ಮಶಾಕ ಯಾಳಗಿ ವಂದಿಸಿದರು.