ಚಿತ್ತಾಪುರ: ಈ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶದಿಂದ ಚಿತ್ತಾಪುರ ತಾಲೂಕಿಗೆ ಸುಮಾರು 14 ಕೋಟಿ ವೆಚ್ಚದಲ್ಲಿ ಮೋರಾರ್ಜಿ ದೇಸಾಯಿ, ಡಾ ಬಿಆರ್ ಅಂಬೇಡ್ಕರ್, ಕಿತ್ತೂರು ಚನ್ನಮ್ಮ, ವಸತಿ ಶಾಲೆಗಳ ಸ್ಥಾಪನೆಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪರಿಶ್ರಮ ಪ್ರಶಂಸಾರ್ಹ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕೊಂಡಾಡಿದರು.
ಚಿತ್ತಾಪುರ ತಾಲೂಕಿನ ಹತ್ತಿರದ ವಾಡಿ ಹೊರವಲಯದ ನ್ಯೂ ಟೌನ್ ಶಿಪ್ ಗೆ ಮಂಜೂರಾದ ವಿವಿಧ ಕಾಮಗಾರಿಗಳ ಮತ್ತು ನಗರೋತ್ಥಾನ ನೀರು ಸರಬರಾಜು ಕಾಮಗಾರಿಗಳ ಅಡಿಗಲ್ಲು ಸಮಾರಂಭ ಗುಂಡಿ ಒತ್ತುವ ಮೂಲಕ ಉಧ್ಘಾಟಿಸಿ ಮಾತನಾಡುತ್ತಾ.
ರಾಜ್ಯದಲ್ಲಿ ಇಂದು ವಸತಿ ಶಾಲೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಓದುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ವಸತಿ ಶಾಲೆಗಳಲ್ಲಿ ಒಟ್ಟು 2600 ವಿದ್ಯಾರ್ಥಿನಿಲಯಗಳಲ್ಲಿ 3.71 ಲಕ್ಷ ಮಕ್ಕಳು ಇದ್ದು, ವಿವಿಧ ಇಲಾಖೆಯಡಿಯಲ್ಲಿನ 824 ವಸತಿ ನಿಲಯಗಳಲ್ಲಿ 1.71 ಲಕ್ಷ ಮಕ್ಕಳು ಓದುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ತಲಾ ರೂ 50 ಕೋಟಿ ವೆಚ್ಚದಲ್ಲಿ ಐದು ಸುಸಜ್ಜಿತ ವಸತಿ ಶಾಲೆಗಳನ್ನು ನಿರ್ಮಿಸಲು ಯೋಚಿಸಲಾಗಿದ್ದು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಡಿಸಿಎಂ ಹೇಳಿದರು.
ಕಲ್ಯಾಣ ಎಂದರೆ ಕೇವಲ ಜನಪ್ರಿಯತೆ ಗಳಿಸಲು ಮಾಡುವ ಕಾರ್ಯಕ್ರಮವಲ್ಲ. ನಿಜವಾದ ಕಲ್ಯಾಣ ವೆಂದರೆ ಆರ್ಥಿಕ ಹಾಗೂ ಸಮಾಜಿಕವಾಗಿ ಕಟ್ಟಕಡೆಯ ವ್ಯಕ್ತಿಗೆ ಸ್ವಾಭಿಮಾನದ ಬದುಕು ಕೊಡುವುದಾಗಿದೆ ಎಂದರು. ಹಾಗಾಗಿ ಚಿತ್ತಾಪುರ ಕ್ಷೇತ್ರವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ಯಲು ಪರಿಶ್ರಮಿಸುತ್ತಿದ್ದು ಡಿಸಿಎಂ ಸಾಹೇಬರು ಹೆಚ್ಚು ಹೆಚ್ಚು ಅನುದಾನ ಒದಗಿಸುವ ಮೂಲಕ ಆಶೀರ್ವಾದ ಮಾಡಬೇಕು ಎಂದರು.
ಯಾವುದೇ ಯೋಜನೆಗೆ ಅನುದಾನ ತರುವುದು ಸುಲಭದ ಮಾತಲ್ಲ. ಕಾಂಗ್ರೇಸ್ ಪಕ್ಷ ಅಧಿಕಾರಲ್ಲಿದ್ದಾಗ ಜನಸಂಖ್ಯೆಗೆ ಅನುಗುಣವಾಗಿ ಎಸ್ ಸಿಸಿಪಿ ಹಾಗೂ ಟಿ ಎಸ್‌ಪಿ ಯೋಜನೆ ಜಾರಿಗೆ ತಂದು ವಾರ್ಷಿಕ ರೂ 30,000 ಸಾವಿರ ಕೋಟಿ ಮೀಸಲಿಟ್ಟಿದ್ದೆವು. ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಲ್ಲಿದ್ದು ಇಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶೋಷಿತರ, ಬಲಹೀನರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು.
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ 820 ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 3200 ಹಾಸ್ಟೆಗಳಲ್ಲಿ 4.20 ಲಕ್ಷ ಮಕ್ಕಳು ಓದುತ್ತಿದ್ದಾರೆ ಎಂದ ಶಾಸಕರು ನಾಗಾವಿ ನಾಡಿನಲ್ಲಿ ಶೈಕ್ಷಣಿಕ ಒತ್ತುನೀಡಲು ಚಿತ್ತಾಪುರಪಟ್ಟಣದಲ್ಲಿ 66 ಎಕರೆಯಲ್ಲಿ ಹಾಗೂ ವಾಡಿ ನ್ಯೂ ಟೌನ್ ಶಿಪ್‌ನಲ್ಲಿ 150 ಕೋಟಿ ವೆಚ್ಚದಲ್ಲಿ ಬೇರೆ ಬೇರೆ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.
ಈ ಸಲ ಚಿತ್ತಾಪುರ ತಾಲೂಕಿನಲ್ಲಿ ಹಲವರು ಕೆ ಎಎಸ್ ಪಾಸಾಗಿದ್ದು ತಹಸೀಲ್ದಾರ ಅಂತಹ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಾಗಾಗಿ ಅಂತಹ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಅನುಕೂಲವಾಗುವಂತೆ ಕೆಎ ಎಸ್ ತರಬೇತಿ ಕೇಂದ್ರವನ್ನು ಚಿತ್ತಾಪುರ ಪಟ್ಟಣದಲ್ಲಿ ಸ್ಥಾಪಿಸುವಂತೆ. ಮತ್ತು ನಾಗಾವಿ ನಾಡಿನ ಗತವೈಭವ ಮರುಳಿ ಪಡೆಯಲು ಚಿತ್ತಾಪುರ ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉದ್ದೇಶಿತ ಎಜುಕೇಷನ್ ಹಬ್ ಗಳ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನ ಒದಗಿಸುವಂತೆ ಹಾಗೂ ರೈತರ ತೊಗರಿಗೆ ಬೆಂಬಲ ಬೆಲೆಯನ್ನು 300 ದಿಂದ 500 ರವೆಗೆ ಹೆಚ್ಚಿಸಿ ಪ್ರತಿಯೊಬ್ಬ ರೈತರಿಂದ ಈಗ ಖರೀದಿಸಲು ಉದ್ದೇಶಿಸಿರುವ ಹತ್ತು ಕ್ವಿಂಟಾಲ್ ಗಿಂತ ಇನ್ನಷ್ಟು ಹೆಚ್ಚಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಮಾತನಾಡುತ್ತಾ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರಿಗೆ ಮನವಿ ಮಾಡಿದರು.
ವೇದಿಕೆಯ ಮೇಲೆ ಶಾಸಕ ಬಿಜಿ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಶರತ್ ಬಿ,ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಿಇಓ ರಾಜಾ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಶಾಸಕ ವಾಲ್ಮಿಕಿ ನಾಯಕ್, ಜಿಪಂ ಸದಸ್ಯ ಶಿವರುದ್ರ ಬೇಣಿ,ತಾಪಂ ಅಧ್ಯಕ್ಷ ಜಗಣ್ಣಗೌಡ ಪಾಟೀಲ್,
ಸೇರಿದಂತೆ ಇತರರು ಇದ್ದರು.