ಇಂದೆಂದಿಗಿಂತಲೂ ಯಶಸ್ವಿಯಾಗಿ 85 ನೇ ಸಮ್ಮೇಳನ ನಡೆಯಬೇಕು :ಗೋವಿಂದ ಎಂ. ಕಾರಜೋಳ

0
98

ಕಲಬುರಗಿ: ಕಲಬುರಗಿಯಲ್ಲಿ ಫೆಬ್ರವರಿ ೫,೬ ಹಾಗೂ ೭ರಂದು ಜರುಗಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ಜರುಗಬೇಕು. ಈ ಸಮ್ಮೇಳನ ಯಶಸ್ವಿಯಾಗಿ ನಡೆಯಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಜ ಗೋವಿಂದ ಎಂ.ಕಾರಜೋಳ ಅವರು ಸಮ್ಮೇಳನದ ವಿವಿಧ ಸಮಿತಿಗಳಿಗೆ ಸೂಚಿಸಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಎಲ್ಲಾ ಸಮಿತಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಬಾರದು. ಸಮ್ಮೇಳನ ಕಾರ್ಯಕ್ಕೆ ನೇಮಿಸಿರುವ ಪ್ರತಿಯೊಂದು ಸಮಿತಿಗಳು ತಮಗೆ ವಹಿಸಿರುವ ಕೆಲಸವನ್ನು ಜನವರಿ ತಿಂಗಳ ಅಂತ್ಯದ ಒಳಗಾಗಿ ಸಂಪೂರ್ಣವಾಗಿ ಮುಗಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು.

Contact Your\'s Advertisement; 9902492681

ಸಂಘ-ಸಂಸ್ಥೆಗಳು, ಉಳ್ಳವರು ಸಮ್ಮೇಳನಕ್ಕೆ ಉದಾರವಾಗಿ ಆರ್ಥಿಕ ನೆರವು ನೀಡಬೇಕು. ಕಲಬುರಗಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅನುದಾನ ಪಡೆಯಬೇಕು. ನೆರವುಯಾಚನೆ ಸಂಬಂಧ ಯಾರೊಂದಿಗೆ ಬೇಕಾದರೂ ಮಾತನಾಡುತ್ತೇನೆ ಎಂದರು. ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೆಸರಿನಲ್ಲಿ ಖಾತೆ ತೆರೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಆರ್ಥಿಕ ನೆರವು ನೀಡುವಂತಹ ದಾನಿಗಳು ಆರ್‌ಟಿಜಿಎಸ್ ಅಥವಾ ನೆರವಾಗಿ ಚೆಕ್ ಮೂಲಕ ಸಲ್ಲಿಸಬಹುದು ಎಂದು ಕೋರಿದರು.

ಹಾಗೆಯೇ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಉತ್ತಮ ಕಿಟ್ (ಬ್ಯಾಗ್) ನೀಡಬೇಕು. ಈ ನಿಟ್ಟಿನಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಮತ್ತಿತರ ಸಂಸ್ಥೆಗಳ ಧನಸಹಾಯ ಪಡೆದು ಕಿಟ್ ವಿತರಿಸುವ ವ್ಯವಸ್ಥೆ ಮಾಡಬೇಕೆಂದರು. ೩ ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಸ್ಥಳೀಯ ಆಹಾರದ ಜೊತೆಗೆ ನಾಡಿನ ಇತರೆಡೆಯಿಂದ ಬರುವ ಜನರಿಗೂ ಅನುಕೂಲವಾಗುವಂತೆ ಆ ಪ್ರದೇಶಗಳ ಖಾದ್ಯಗಳನ್ನು ಉಣಬಡಿಸಬೇಕು. ಹೋಳಿಗೆ-ತುಪ್ಪ, ಸಜ್ಜೆ ಖಡಕ್ ರೊಟ್ಟಿ ಮುಂತಾದವುಗಳ ನೀಡಬೇಕು. ಮೂರು ದಿನಗಳ ಕಾಲ ವಿವಿಧ ಉಪಹಾರ ನೀಡಬೇಕು ಎಂದು ಅವರು ಸೂಚಿಸಿದರು.

ಪರಿಸರ ಸ್ನೇಹಿ ತಟ್ಟೆ, ಗ್ಲಾಸ್‌ಗಳನ್ನು ಬಳಸಬೇಕು ಎಂದು ಅವರು ಆಹಾರ ಸಮಿತಿಗೆ ಈ ಸಂದರ್ಭದಲ್ಲಿ ಸೂಚಿಸಿದರು. ವೇದಿಕೆ ನಿರ್ಮಾಣಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಈಗಾಗಲೇ ೩೫ ಎಕರೆ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ೫೦೦ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮಳಿಗೆ ಹಾಗೂ ೩೦೦ ವಾಣಿಜ್ಯ ಮಳಿಗೆಗಳ ನಿರ್ಮಿಸಲಾಗುತ್ತಿದೆ ಎಂದು ವೇದಿಕೆ ಸಮಿತಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಕಾರ್ಯಕ್ರಮದಲ್ಲಿ ೨೦ ಸಾವಿರ ಕುರ್ಚಿಗಳನ್ನು ಹಾಕಿಸಬೇಕು. ವೇದಿಕೆ ಹಾಗೂ ಇನ್ನಿತರೆಡೆ ಎಲ್.ಇ.ಡಿ. ಪರದೆಗಳನ್ನು ಹಾಕಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಪುಸ್ತಕ ಪ್ರದರ್ಶನ ಮಳಿಗೆಗಳಲ್ಲಿ ಕೇವಲ ಸಾಹಿತ್ಯದ ಪುಸ್ತಕಗಳೇ ಅಲ್ಲದೇ ಕಲಬುರಗಿ ಜಿಲ್ಲೆಯ ಇತಿಹಾಸ, ವಚನ ಸಾಹಿತ್ಯ,ಕಲೆ, ಅರಸರ ಜೀವನ ಚರಿತ್ರೆ, ಸೂಫಿ ಸಂತರ ಸಾಹಿತ್ಯವನ್ನೊಳಗೊಂಡಿರುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಬೇಕು. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ  ಹಾಗೂ ಸಾಹಿತ್ಯ ಅಕಾಡೆಮಿಗೆ ಮನವಿ ಸಲ್ಲಿಸುವಂತೆ ಪುಸ್ತಕ ಪ್ರರ್ದಶನ ಹಾಗೂ ಮಾರಾಟ ಮಳಿಗೆಗಳ ಸಮಿತಿಗೆ ಉಪಮುಖ್ಯಮಂತ್ರಿಗಳು ಸೂಚಿಸಿದರು.

ವಸತಿ ಮತ್ತು ಸಾರಿಗೆ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಪಂಚಾಯತ್ ಸಿಇಓ ಡಾ. ಪಿ. ರಾಜಾ ಅವರು, ಸಮ್ಮೇಳನಕ್ಕೆ ಆಗಮಿಸುವ ನೋಂದಾಯಿತ ಪ್ರತಿನಿಧಿಗಳಿಗೆ ಹಾಗೂ ಅತಿಥಿಗಳಿಗೆ ಸಾರಿಗೆ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನಗರದ ವಸತಿ ಶಾಲಾ, ಕಾಲೇಜುಗಳು, ಸರ್ಕಾರದ ವಸತಿ ಗೃಹಗಳನ್ನು ಮತ್ತು ಕಲ್ಯಾಣ ಮಂಟಪಗಳನ್ನು ಗುರುತಿಸಲಾಗಿದೆ. ಅತಿಗಣ್ಯರು, ಗಣ್ಯರು ಹಾಗೂ ಅತಿಥಿಗಳಿಗೆ ಒಟ್ಟು ೧೨೦೦ ಕೊಠಡಿಗಳ ಅಗತ್ಯವಿದ್ದು, ಈಗಾಗಲೇ ೬೦೦ ಕೊಠಡಿಗಳನ್ನು ಗುರುತಿಸಲಾಗಿದೆ. ತಾತ್ಕಾಲಿಕವಾಗಿ ೪೦೦ ಸ್ನಾನಗೃಹ ಹಾಗೂ ೩೦೦ ಶೌಚಾಲಯಗಳನ್ನು ನಿರ್ಮಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸಮ್ಮೇಳನಕ್ಕೆ ಆಗಮಿಸುವ ನೋಂದಾಯಿತ ಪ್ರತಿನಿಧಿಗಳಿಗೆ ಹಾಗೂ ಅತಿಥಿಗಳಿಗೆ  ಎಸ್‌ಎಂಎಸ್ ಹಾಗೂ ದೂರವಾಣಿ ಮೂಲಕ ಸಾರಿಗೆ ಮತ್ತು ವಸತಿ ಕುರಿತು ಮಾಹಿತಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಇನ್ನುಳಿದಂತೆ ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಿಂದ ಆಗಮಿಸುವ ಸಾರ್ವಜನಿಕರಿಗೆ ಪ್ರತಿ ತಾಲೂಕಿನಲ್ಲಿ ೨ ಬಸ್‌ಗಳಂತೆ ಒಟ್ಟು ೨೦ ಬಸ್‌ಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ೫೦ ಕ್ರೂಸರ್, ೫೦ ಇನೋವಾ ಕಾರುಗಳು ಸೇರಿದಂತೆ ೧೫೦ ವಾಹನ,  ೧೧೦ ಶಾಲಾ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಕೆಲವು ವಾಹನಗಳನ್ನು ಬಾಡಿಗೆಗೆ ಹಾಗೂ ದಾನಿಗಳಿಂದ ಉಚಿತ ಸೇವೆ ಪಡೆಯಲು ಮನವಿ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳು, ಕಲಬುರಗಿ ಜಿಲ್ಲೆಯಿಂದ ಸಂಚರಿಸುವ ಪ್ರತಿ ಬಸ್‌ಗಳ ಮೇಲೆ ಸಾಹಿತ್ಯ ಸಮ್ಮೇಳನದ ಮಾಹಿತಿಯ ಪೋಸ್ಟರ‍್ಸ್‌ಗಳನ್ನು ಹಾಕುವ ಮೂಲಕ ಈಗಿನಿಂದಲೇ ಜಿಲ್ಲೆಯ ಹಾಗೂ ಹೊರಗಿನಿಂದ ಬರುವ ಜನರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು ಎಂದು ಎನ್‌ಇಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

ಇನ್ನು ಉಪಮುಖ್ಯಮಂತ್ರಿಗಳು, ಆರೋಗ್ಯ ಸಮಿತಿಯಿಂದ ವಿವರ ಕೇಳಲಾಗಿ, ಈಗಾಗಲೇ ೪ ಮೆಡಿಕಲ್ ಕಾಲೇಜು ಹಾಗೂ ಜಯದೇವ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದ್ದು, ಪ್ರತಿ ಆಸ್ಪತ್ರೆಯಲ್ಲಿ ೪ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಡಾಕ್ಟರ್ ಹಾಗೂ ಸಿಬ್ಬಂದಿಗಳಿಗೆ ೩ ಪಾಳಿಯಲ್ಲಿ ಕೆಲಸ ಮಾಡಿಸಲಾಗುವುದು ಎಂದು ಸಮಿತಿಯ ಅಧಿಕಾರಿಗಳು ಮಾಹಿತಿ ನೀಡಿದರು. ನಗರದ ದೊಡ್ಡ ಆಸ್ಪತ್ರೆಗಳಿಂದ ಸಿಬ್ಬಂದಿಗಳನ್ನು ಹಾಗೂ ಡಾಕ್ಟರ್‌ಗಳನ್ನು ಉಚಿತ ಸೇವೆ ಒದಗಿಸುವಂತೆ ಮನವಿ ಸಲ್ಲಿಸುವಂತೆ ಉಪಮುಖ್ಯಮಂತ್ರಿಗಳು ಸಲಹೆ ನೀಡಿದರು.

ರಾಜ್ಯದ ಹಿರಿಯ  ಸಾಹಿತಿಗಳಿಗೆ ಪತ್ರ ಬರೆದು ಲೇಖನ ಒದಗಿಸುವಂತೆ ಮನವಿ ಸಲ್ಲಿಸಬೇಕು ಎಂದು ಸ್ಮರಣ ಸಂಚಿಕೆ ಸಮಿತಿಗೆ ಅವರು ಸೂಚಿಸಿದರು. ಈ ಸಂದರ್ಭದಲ್ಲಿ  ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ಈಗಾಗಲೇ ಅನೇಕ ಸಾಹಿತಿಗಳಿಗೆ ಪತ್ರ ಬರೆದಿದ್ದು, ೭೦ ಲೇಖನಗಳು ಬಂದಿದ್ದು, ಪ್ರಕಟಣೆಗೆ ಸಿದ್ಧವಾಗಿವೆ. ಇನ್ನುಳಿದಂತೆ ಲೇಖಕರು, ಸಾಹಿತಿಗಳು ಕಳುಹಿಸಿಕೊಡುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

ಸಣ್ಣ ವಾಹನಗಳನ್ನು ಬಳಸಿಕೊಂಡು ಜಿಲ್ಲೆಯ ಇತಿಹಾಸ ಸಾರುವ ಧ್ವನಿ ಮತ್ತು ವಿಡಿಯೋ ಪ್ರಸಾರವನ್ನು ಪ್ರತಿ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕು ಎಂದು ಪ್ರಚಾರ ಸಮಿತಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ವಿಧಾನಸಭೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಪ್ರಿಯಾಂಕ್ ಖರ್ಗೆ, ಎಂ.ವೈ.ಪಾಟೀಲ,ಸುಭಾಷ ಆರ್.ಗುತ್ತೇದಾರ, ರಾಜಕುಮಾರ ಪಾಟೀಲ್ ತೇಲ್ಕೂರ, ಕನೀಜ್ ಫಾತಿಮಾ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣ್ಣ ಕಮಕನೂರ, ಕಲಬುರಗಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ, ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್, ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಅಪರ ಜಿಲ್ಲಾಧಿಕಾರಿ ಶಂಕರಪ್ಪ ವಣಿಕ್ಯಾಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಸಮ್ಮೇಳನದ ಎಲ್ಲಾ ಸಮಿತಿಗಳ ಕಾರ್ಯಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here