ಜೆಸ್ಕಾಂ ಕಚೇರಿಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ

0
20

ಕಲಬುರಗಿ: ಇಂದು ಜೆಸ್ಕಾಂನಲ್ಲಿ ಗಣರಾಜ್ಯೋತ್ಸವ ಸಮಾರಂಭವು ತುಂಬಾ ವಿಜೃಂಭಣೆಯಿಂದ ನೆರವೇರಿತು. ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾದ ಡಾ: ಆರ್. ರಾಗಪ್ರಿಯ, ಭಾ.ಆ.ಸೇ., ಇವರು ಸಮಸ್ತ ಅಧಿಕಾರಿಗಳು ಮತ್ತು ನೌಕರರಿಗೂ ೭೧ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳನ್ನು ತಿಳಿಸುತ್ತ, ಇದು ನಮ್ಮ ಪ್ರಜಾಪ್ರಭುತ್ವ ಮತ್ತು ಗಣರಾಜ್ಯದ ಮೌಲ್ಯಗಳನ್ನು ಸ್ಮರಿಸುವ ಒಂದು ದಿನವಾಗಿದೆ. ನಮ್ಮ ಸಮಾಜದಲ್ಲಿ ಮತ್ತು ಎಲ್ಲಾ ನಾಗರೀಕರಲ್ಲಿ ಸ್ವಾತಂತ್ರ್ಯ , ಭ್ರಾತೃತ್ವ ಮತ್ತು ಸಮಾನತೆಗೆ ನಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಈ ದಿವಸ ಭಾರತ ಮತ್ತು ಭಾರತೀಯತೆ ಎಂಬ ಮನೋಭಾವನೆಯನ್ನು ಆಚರಿಸುವ ದಿನವಾಗಿದೆ ಎಂದರು.

ಇದು ನಮ್ಮ ಸಂವಿಧಾನವನ್ನು ಅಂಗೀಕರಿಸಿದ ೭೧ನೇ ವಾರ್ಷಿಕೋತ್ಸವ. ಈ ದಾಖಲೆ ನಮ್ಮ ಗಣರಾಜ್ಯದ ಅಡಿಪಾಯವನ್ನು ಹಾಕಿತು. ಇದು ತತ್ವ ಮತ್ತು ದೇಶಭಕ್ತಿ ಹೊಂದಿರುವ ಪುರುಷರ ಮತ್ತು ಮಹಿಳೆಯರ ಕೆಲಸವಾಗಿದೆ.

Contact Your\'s Advertisement; 9902492681

ಭಾರತದ ಸಂವಿಧಾನವು ಪ್ರಪಂಚದಲ್ಲೇ ಅತ್ಯುತ್ತಮ ಸಂವಿಧಾನವಾಗಿರುವುದರಿಂದ, ನಮ್ಮ ಭಾರತವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಹೊರಹೊಮ್ಮಿದೆ. ನಮ್ಮ ರಾಷ್ಟ್ರದ ಸಂವಿಧಾನವನ್ನು ರಚಿಸಲು ಸುಮಾರು ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳು ಬೇಕಾಯಿತು. ಇತರೆ ದೇಶಗಳ ಸಂವಿಧಾನಗಳಲ್ಲಿ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು, ೭೦ ವರ್ಷಗಳು ಗತಿಸಿದರೂ ನಮ್ಮ ಸಂವಿಧಾನದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳು ಆಗಿರುವುದಿಲ್ಲ. ಭಾರತದ ಸಮಸ್ತ ನಾಗರೀಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ, ಎಲ್ಲರ ನಡುವೆ ಭ್ರಾತೃತ್ವ ಭಾವನೆಯನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ. ಇಡೀ ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದೊಂದು ಶ್ರೇಷ್ಠ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರವರಿಗೆ ಈ ಸಂದರ್ಭದಲ್ಲಿ ಸ್ಮರಿಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಇದೂ ಅಲ್ಲದೆ ದಕ್ಷಿಣ ಆಫ್ರಿಕಾ ರಾಷ್ಟ್ರಾಧ್ಯಕ್ಷರಾಗಿದ್ದ ದಿವಂಗತ ಶ್ರೀಯುತ ನೆಲ್ಸನ್ ಮಂಡೇಲಾರವರು ನಮ್ಮ ಭಾರತದ ಸಂವಿಧಾನದ ಗುಣಗಾನ ಮಾಡುತ್ತ, ಭಾರತದ ಸಂವಿಧಾನವು ದಕ್ಷಿಣ ಆಫ್ರಿಕಾದ ಹೊಸ ಸಂವಿಧಾನ ರಚಿಸಲು ಪ್ರೇರಣಾದಾಯಕವಾಗಿದೆ ಅಲ್ಲದೆ ಡಾ. ಬಿ.ಆರ್. ಅಂಬೇಡ್ಕರರವರು ಸಾಮಾಜಿಕ ನ್ಯಾಯ ಮತ್ತು ತುಳಿತಕ್ಕೆ ಒಳಗಾದ ಜನಾಂಗದ ಉದ್ಧಾರಕ್ಕಾಗಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೊಗಳಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ಇಂದು ನಾವು ನಮ್ಮ ಸಂವಿಧಾನದ ಮೌಲ್ಯಗಳನ್ನು ಪುನರುಚ್ಛರಿಸುತ್ತೇವೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಅದರ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ. ಸಮಾಜದಲ್ಲಿರುವ ಅಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಂವಿಧಾನವನ್ನು ರಚಿಸಲಾಯಿತು. ಇದರಿಂದಾಗಿ ನಾವು ಪ್ರತಿಯೊಬ್ಬರು ನಾಗರೀಕರಾಗಿ, ಒಂದು ಆಯ್ಕೆಯನ್ನು ಬಯಸಿ ಸಂವಿಧಾನದ ಹಾದಿಗೆ ಬದ್ಧರಾಗಿದ್ದೇವೆ. ಆದ್ದರಿಂದ ನಮ್ಮ ದೇಶದ ಇತರ ನಾಗರೀಕರೊಂದಿಗೆ ನಮ್ಮ ದಿನನಿತ್ಯದ ಸಂವಾದದಲ್ಲಿ ನಾವು ಭಾಷೆ, ಧರ್ಮ, ಜಾತಿ, ಸಮುದಾಯ ಇತ್ಯಾದಿಗಳ ವ್ಯತ್ಯಾಸದಿಂದ ಬೆರೆಯುವುದಿಲ್ಲ ಮತ್ತು ಪರಸ್ಪರರನ್ನು ಸಹ ಮಾನವರಂತೆ ಮತ್ತು ಸಮಾನರು ಎಂದು ಪರಿಗಣಿಸುತ್ತೇವೆ.

ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ದ್ವೇಷ, ಕೋಮುವಾದ ಮತ್ತು ವಿಭಜನೆಯ ಬಲವನ್ನು ತಿರಸ್ಕರಿಸುವ ಒಂದು ಆಯ್ಕೆ ನಮಗೆಲ್ಲರಿಗೂ ಇದೆ ಮತ್ತು ಅದನ್ನು ನಾವು ಏಕತೆ, ಭ್ರಾತೃತ್ವ, ಮತ್ತು ಮಾನವೀಯತೆಯ ಮನೋಭಾವದಿಂದ ಬದಲಾಯಿಸಬಹುದಾಗಿದೆ ಎಂದು ಈ ಸಂದರ್ಭದಲ್ಲಿ ನಾನು ಹೇಳಲಿಕ್ಕೆ ಇಷ್ಟಪಡುತ್ತೇನೆ.

ಇನ್ನು ನಮ್ಮ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಡೈರೆಕ್ಟಿವ್ಸ್ ನಮ್ಮ ರಾಜ್ಯದಲ್ಲಿರುವ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಂವಿಧಾನ ಇದ್ದ ಹಾಗೆ. ಕೆ.ಇ.ಆರ್.ಸಿ. ನಿರ್ದೇಶನಗಳಂತೆ ನಾವು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಸಲ್ಲಿಸುವುದು ನಮ್ಮ ಪ್ರಥಮ ಧ್ಯೇಯವಾಗಿರಬೇಕು, ಸಾರ್ವಜನಿಕರಿಗೆ ವಿದ್ಯುತ್ ಅಪಘಾತಗಳನ್ನು ತಡೆಯುವ ಕುರಿತು ಜಾಗೃತಿ ಮೂಡಿಸಿ ವಿದ್ಯುತ್ ಅಪಘಾತಗಳನ್ನು ಕಡಿಮೆಗೊಳಿಸಬೇಕು, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಟ್ಟು ವಿತರಣಾ ನಷ್ಟವನ್ನು ಕಡಿಮೆಗೊಳಿಸಬೇಕು ಮತ್ತು ಕಂದಾಯ ವಸೂಲಿಯನ್ನು ಚುರುಕುಗೊಳಿಸಿ ಕಂಪನಿಯ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡುತ್ತಾ, ಜೈ ಹಿಂದ್, ಜೈ ಕರ್ನಾಟಕ. ಉದ್ಘೋಷಣೆಯೊಂದಿಗೆ ಗಣರಾಜ್ಯೋತ್ಸವ ಸಂದೇಶವನ್ನು ಮುಗಿಸಿದರು.

ಕಂಪನಿಯ ಕೆಲಸ ನಿರ್ವಹಿಸುತ್ತ ಅಂಗ ವೈಫಲ್ಯತೆಯನ್ನು ಹೊಂದಿರುವ ಪವರ್ ಮ್ಯಾನ್, ಸಹಾಯಕ ಪವರ್ ಮ್ಯಾನ್/ಕಿರಿಯ ಪವರ್ ಮ್ಯಾನರವರುಗಳನ್ನು ವ್ಯವಸ್ಥಾಪಕ ನಿರ್ದೇಶಕರು ಸನ್ಮಾನಿಸಿದರು.

೧೨೩ ಮಾಪಕ ಓದುಗರ ಹುದ್ದೆಗಳನ್ನು ಸೃಷ್ಟಿಸಿ ನೌಕರರಿಗೆ ಅನುಕೂಲ ಮಾಡಿ ಕೊಟ್ಟಿರುವುದಕ್ಕಾಗಿ, ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಅವಶ್ಯಕವಾದ ಸುರಕ್ಷಾ ಸಲಕರಣೆಗಳನ್ನು ಸಮಯಕ್ಕೆ ಸರಿಯಾಗಿ ದೊರಕಿಸಿಕೊಟ್ಟು ನೌಕರರ ಪರ ತೋರುತ್ತಿರುವ ಕಾಳಜಿಗಾಗಿ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಪ್ರಧಾನ ವ್ಯವಸ್ಥಾಪಕರಿಗೆ ಕವಿಪ್ರನಿನಿ ನೌಕರರ ಸಂಘದ ವತಿಯಿಂದ ಸಂಘದ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಧನ್ಯವಾದ ಸಲ್ಲಿಸುತ್ತ, ಸನ್ಮಾನಿಸಿದರು. ಮಹ್ಮದ್ ಮಿನ್ಹಾಜುದ್ದೀನ್, ಹಿರಿಯ ಆಪ್ತ ಕಾರ್ಯದರ್ಶಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here