ಕಲಬುರಗಿ: ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರು ಹೇಳಿದರು.
ಅವರು ಸೋಮವಾರ ಉನ್ನತ ಶಿಕ್ಷಣ ಇಲಾಖೆಯ ಯೋಜನೆಯಡಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಉಚಿತ ಲ್ಯಾಪ್‌ಟಾಪ್ ವಿತರಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿನಿಯರು ಉಚಿತವಾಗಿ ನೀಡಲಾಗುತ್ತಿರುವ ಲ್ಯಾಪ್‌ಟಾಪ್‌ಗಳ ಸದುಪಯೋಗಪಡಿಸಿಕೊಂಡು ತಂತ್ರಜ್ಞಾನ ನೆರವಿನಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡಲಾಗುತ್ತಿದೆ. ಈ ಕಾಲೇಜಿನಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ವಿಶಾಲವಾದ ಸಭಾಂಗಣ, ಪ್ರಯೋಗಾಲಯಗಳು ಮತ್ತು ತರಗತಿ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರು ಇದ್ದು, ಇದರ ಲಾಭ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಾ.ಆರ್.ಪಿ.ಶಂಕರ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಭೀಮರಾವ್ ಮತ್ತು ನಗರ ಸೇವಕ ಶಿವಸ್ವಾಮಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ. ಖಂಡೇರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ೧೫ ಜನ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಬಿ.ಎಸ್.ಬಿರಾದಾರ್, ಡಾ. ಶಿವಪುತ್ರ ಬೆಡಜಿರಿಗಿ, ಪ್ರೊ.ಸಿ.ಎಸ್.ಸಾಲಿಮಠ, ಡಾ.ಪ್ರಕಾಶ ಮೊರಗೆ, ಡಾ.ವಿಜಯಕುಮಾರ್, ಪ್ರೊ.ನಿತಿಶ್‌ಭೂಶೆಟ್ಟಿ, ಪ್ರಕಾಶ ಪಾಟೀಲ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.
ಡಾ. ಸಂತೋಷ ಹುಂಪ್ಳಿ ಸ್ವಾಗತಿಸಿದರು, ಡಾ.ಮೀನಾಕ್ಷಿ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜ್ಯೋತಿ ರೆಡ್ಡಿ ವಂದಿಸಿದರು. ಡಾ.ಶಶಿಶೇಖರರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.