ಕಲಬುರಗಿ: ಆರ್. ಎಸ್. ಎಸ್ ಸಂಘಟನೆಯು ಎಂದಿಗೂ ಗಾಂಧಿಯನ್ನು ಒಪ್ಪಿಕೊಂಡಿಲ್ಲ ಬಿಜೆಪಿ ಅಧಿಕಾರಕ್ಕೆ ಬರುವದಕ್ಕಿಂದ ಮೊದಲು ಗಾಂಧಿ ಜಯಂತಿಯಾಗಲಿ ಪುಣ್ಯತಿಥಿಯಾಗಲಿ ಮಾಡಿಲ್ಲ. ಆದರೆ ಇಂದು ಬಿಜೆಪಿಯವರಲ್ಲಿ ದೇಶಭಕ್ತಿ ಹೆಚ್ಚಾಗಿದೆ. ಇದರಿಂದ ಮುಂದಿನ ದಿನಗಲ್ಲಿ ದೇಶಕ್ಕೆ ಅಪಾಯ ಎದುರಾಗುವಂತ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಎಚ್ಚರಿಸಿದರು.
ಜಗತ್ತ ವೃತ್ತದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಮಹಾತ್ಮಾ ಗಾಂಧಿಯವರು ಹುತಾತ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಇಂದು ದೇಶದಲ್ಲಿ ಅಶಾಂತಿ, ಒಳಜಗಳ, ಒಬ್ಬರಿಗೊಬ್ಬರೂ ಕಂಡರೆ ಆಗದಂತ ಪರಿಸ್ಥಿತಿಯನ್ನು ಬಿಜೆಪಿ ನಿರ್ಮಾಣ ಮಾಡುತ್ತಿದೆ. ದೇಶವನ್ನು ಮತ್ತೆ ಗುಲಾಮಗಿರಿಯತ್ತ ತೆಗೆದುಕೊಂಡು ಹೋಗವಂತ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ದೇಶದಲ್ಲಿ ವೈಚಾರಿಕ ವಿಚಾರಗಳು ಭಿನ್ನವಾಗುತ್ತಿವೆ. ಗಾಂಧಿಯನ್ನು ಕೊಂದವರಿಗೆ ಇಂದು ದೇಶಭಕ್ತ ಎಂಬ ಪಟ್ಟ ಕಟ್ಟಲಾಗುತ್ತಿದೆ. ಕೆಲವರು ನಾವೇ ಶ್ರೇಷ್ಠರು ನಮ್ಮ ವಿಚಾರಗಳೇ ಶ್ರೇಷ್ಠ ಎಂಬ ಭ್ರಾಂತಿಯಲ್ಲಿ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದರು.
ತಾಕತ್ತಿದ್ದರೆ ಗೋಡ್ಸೆ, ಸಾರ್ವಕರ ಕುರಿತಾದ ಪುಸ್ತಕಗಳನ್ನು ನಿಷೇಧಿಸಿ: ನಾವು ಗೋಡ್ಸೆ ಹಾಗೂ ಸಾರ್ವಕರ ಅವರ ಕುರಿತಾದ ಪುಸ್ತಕಗಳನ್ನು ಓದಿದ್ದೇವೆ. ದೇಶದ ವಿವಿಧ ಭಾಷೆಗಳಲ್ಲಿ ಪುಸ್ತಕಗಳು ಮುದ್ರಣವಾಗಿದೆ. ಗೋಡ್ಸೆ ಯಾರು ಅವನು ಗಾಂಧಿಯನ್ನು ಕೊಲ್ಲುವದಕ್ಕಿಂತ ಮುಂಚ್ಚೆ ಯಾರ್‍ಯಾರು ಜೊತೆ ಸೇರಿ ಸಂಚು ರೂಪಿಸಿದರು. ಅವರೊಂದಿಗೆ ಯಾರ್‍ಯಾರು ಕೈಜೋಡಿಸಿದ್ದರು. ಕೊಲೆಗೆ ಎಲ್ಲಿ ಸಮಯ ನಿಗದಿ ಮಾಡಲಾಯಿತು ಎಂದು ಪುಸ್ತಕಗಳಲ್ಲಿ ವಿಸ್ತಾರವಾಗಿ ಬರೆಯಲಾಗಿದೆ. ನಿಮಗೆ ತಾಕತ್ತಿದ್ದರೆ ಗೋಡ್ಸೆ, ಸಾರ್ವಕರ ಕುರಿತು ಬರೆದ ಪುಸ್ತಕಗಳನ್ನು ನಿಷೇಧಿಸಿ ಎಂದು ಸವಾಲು ಹಾಕಿದರು.
ಇದಕ್ಕೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಜಿಲ್ಲೆಯಲ್ಲಿ ಕ್ಲಬ್‌ಗಳು ಆರಂಭವಾಗುತ್ತಿವೆ. ಅಕ್ರಮ ಮರಳು ಸಾಗಾಣಿಕೆಗೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸರಿಗೆ ಬ್ರೆಕ್ ಹಾಕಬೇಕು. ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆ ಇದಕ್ಕೆ ಮುಂದಾಗದಿದ್ದರೆ ಇಂದಿನಿಂದ ಹೋರಾಟವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತೇವೆ. ಜಿಲ್ಲೆಯನ್ನು ಪಟ್ಟಭದ್ರ ಶಕ್ತಿಗಳಿಂದ ಕಾಪಾಡಬೇಕಾಗಿದೆ ಎಂದು ಎಚ್ಚಿರಿಸದರು.
ಪ್ರೋ. ಆರ್.ಕೆ. ಹುಡಗಿ, ಡಾ.ಮಿನಾಕ್ಷಿ ಬಾಳಿ ಮಹಾತ್ಮ ಗಾಂಧಿಜಿ ಕುರಿತು ಉಪನ್ಯಾಸ ನೀಡಿದರು. ಶಾಸಕರಾದ ಕನಿಜ್ ಫಾತೀಮಾ ಖಮರುಲ್ ಇಸ್ಲಾಂ, ಎಂ.ವೈ.ಪಾಟೀಲ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮೌಲಾನಾ ಶರೀಫ್ ಖಾನ್, ಮಾತನಾಡಿದರು. ವೇದಿಕೆ ಮೇಲೆ ಶಾಸಕ ಪ್ರಿಯಾಂಕ್ ಖರ್ಗೆ, ಮುಖಂಡರಾದ ಮಾಜಿ ಎಂಎಲ್ಸಿ ಅಲ್ಲಮ ಪ್ರಭು ಪಾಟೀಲ, ಸುಭಾಷ ರಾಠೋಡ, ಬಾಬಾಖಾನ, ವಿಜಯಕುಮಾರ ಜಿ. ರಾಮಕೃಷ್ಣ, ಬಾಬುರಾವ ಜಹಾಗೀರದಾರ, ಸೇರಿದಂತೆ ಅನೇಕರು ಇದ್ದರು. ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಪಾಟೀಲ ಮರತೂರ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮಾ ಗಾಂಧಿಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿ ಪಾದಯಾತ್ರೆಗಳು ನಗರದ ರಿಂಗ್ ರಸ್ತೆಯ ವಿವಿಧ ಭಾಗಗಳಿಂದ ಆಗಮಿಸುವ ಮುಖ್ಯ ಮುಖಾಂತರ ಸಾರ್ವಜನಿಕ ಉದ್ಯಾನವನದಲ್ಲಿನ ಮಹಾತ್ಮಾ ಗಾಂಧಿ ಅವರ ಪ್ರತಿಮೆಯವರೆಗೆ ಬಂದು ತಲುಪಿ ನಮನ ಸಲ್ಲಿಸಲಾಯಿತು.