ಬಸವಣ್ಣನಿಂದ ನೋಟ, ಕೂಟದ ಭಕ್ತಿ

0
46
ಹಾವಿನ ಡೊಂಕು ಹುತ್ತಕ್ಕೆ ಸಸಿನ
ನದಿಯ ಡೊಂಕು ಸಮದ್ರಕ್ಕೆ ಸಸಿನ
ನಮ್ಮ ಕೂಡಲಸಂಗನ ಶರಣರ ಡೊಂಕು
ಲಿಂಗಕ್ಕೆ ಸಸಿನ
-ಬಸವಣ್ಣನವರು

ಶಿವ ಮತ್ತು ಯೋಗ ಅನ್ನುವ ಶಬ್ದ ಪ್ರಾರಂಭವಾಗಿರುವುದೇ ಬಸವಾದಿ ಶರಣ ಸಿದ್ಧಾಂತದಿಂದ. ದೇಹದೊಳಗಿನ ಶಕ್ತಿಯನ್ನು ಹೊರಗೆ ಹಾಕು ಎಂದು ದೈಹಿಕ ಯೋಗ ಹೇಳುತ್ತದೆ. ಮಾನಸಿಕ ಯೋಗ ಇದು ಮನದ ಅತ್ಯದ್ಭುತ ಚಿಕಿತ್ಸೆ. ದೇಹವನ್ನು ಆಳುವ ರಾಜ ಮನಸ್ಸು. ಮನಸ್ಸಿಗೆ ಧರ್ಮ, ಯೋಗದ ಚಿಕಿತ್ಸೆ ನೀಡಬೇಕೆಂದು ಮಹಾತ್ಮರು ಹೇಳಿದ್ದಾರೆ. ಸಂಯಮವೇ ಯೋಗ. ತಾಳ್ಮೆಯೇ ಯೋಗ, ಸಹನೆಯೇ ಯೋಗ. ಯೋಗ ಅನ್ನುವುದು ಒಂದು ಕ್ರಿಯೆ. ಬದುಕಿನಲ್ಲಿ ಕಷ್ಟ, ದುಃಖ, ದುಮ್ಮಾನ ಬಂದರೆ ಸಮಚಿತ್ತದಿಂದ ಸ್ವೀಕರಿಸುವ ಶಕ್ತಿ ಮನಸ್ಸಿಗೆ ಇರುತ್ತದೆ.

“ಕಷ್ಟ ನಿನಗಾದಾಗ ನಷ್ಟ ಭಯ ದೂರಿದಾಗ ದೃಷ್ಟಿಯನ್ನು ತಿರುಗಿಸಿ ನೋಡಲ್ಲಿ” ಎನ್ನವುದೇ ಯೋಗ. ದೇಹ ಬಲಿಷ್ಠ ಇದ್ದಾಗ ಗೆಲ್ಲುವುದು ಆಗುವುದಿಲ್ಲ. ಮನಸ್ಸು ಬಲಿಷ್ಠ ಇದ್ದಾಗ ಗೆಲ್ಲುತ್ತಾನೆ. ದೇಹದ ಶಕ್ತಿ ಕಡಿಮೆ ಆಗುತ್ತದೆ. ಆದರೆ ಮನಸ್ಸಿನ ಶಕ್ತಿ ಕ್ಷೀಣವಾಗುವುದಿಲ್ಲ. ಇದನ್ನೇ ಅಕ್ಕ “ಮನ ನಿಮ್ಮಲ್ಲಿ ಒಡವೆರೆದ ಬಳಿಕ ಎನ್ನಲ್ಲಿ ಭವವುಂಟೇ? ಚನ್ನಮಲ್ಲಿಕಾರ್ಜುನ” ಎಂದು ಕೇಳಿದ್ದಾರೆ. ದೇಹ ಕ್ಷೀಣಿಸಬಹುದು. ಮನಸ್ಸು ಗಟ್ಟಿಯಿದ್ದಲ್ಲಿ ಯಾವ ಸಂದರ್ಭದಲ್ಲಿಯೂ ಏನು ಬೇಕಾದರೂ ಮಾಡಬಹುದು. ಹೀಗಾಗಿ ಬದುಕಿನಲ್ಲಿ ಬೇಕು-ಬೇಡ ಎಂಬ ರೀತಿಯಲ್ಲಿ ಇರಬೇಕು.

Contact Your\'s Advertisement; 9902492681

ಹರಿವ ನದಿ ಡೊಂಕು, ಕಬ್ಬು ಡೊಂಕು ಆದರೆ ಅದರ ಉಪಯೋಗ ಯಾವ ರೀತಿ ಮಹತ್ವದ್ದೋ? ಹಾಗೆಯೇ ಮನಸ್ಸಿನ ಡೊಂಕಿಗೆ ಶರಣರ ಸುಳ್ನೂಡಿಗಳು ಸಹಕಾರಿಯಾಗಿವೆ. ಸವಿಯಾಗಿವೆ. ಹಾವು ಡೊಂಕಾಗಿ ಹರಿದಾಡುತ್ತದೆ. ವಿಷಪೂರಿತ ಹಾವಿನ ಹಲ್ಲಿನಲ್ಲಿ ಮಾತ್ರ ವಿಷವಿರುತ್ತದೆ. “ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು” ಎಂದು ಅಕ್ಕ ಹೇಳಿದ್ದಾರೆ. ಆದರೆ ಮನುಷ್ಯ ಹಾಗಲ್ಲ. ಆತ ಅಡಿಯಿಂದ ಮುಡಿಯವರೆಗೆ ವಿಷ ತುಂಬಿಕೊಂಡಿದ್ದಾನೆ.

ಹೀಗಾಗಿ ದೇಹ ಆಳುವ ಮನಸ್ಸಿಗೆ ಉತ್ತಮ ಉಪದೇಶ ಕೊಡು. ಒಳ್ಳೆಯ ರೀತಿಯ ಉಪಾಸನ ವಿಧಾನ ಕಲಿಸು ಎಂದ ಶರಣರು “ಕಾಯಕವೇ ಕೈಲಾಸ” ಎಂದರು. ಇನ್ನೂ ಮುಂದೆ ಹೋದ ಬಸವಣ್ಣನವರು “ಕಾಯವೇ ಕೈಲಾಸ” ಎಂದು ಹೇಳಿದರು. ಎಲ್ಲ ಯೋಗಗಳು, ಮಸ್ಸು ಮತ್ತು ಉಸಿರಾಟದ ನಿಯಂತ್ರಣ ಕುರಿತು ಹೇಳಿದರೆ, ಕಣ್ಣಿನ ನಯಂತ್ರಣ ಕುರಿತು ಬಸವಣ್ಣ ಮೊದಲು ಹೇಳಿದರು. ಅರೆ ತೆರದ ಲಿಂಗ ವೀಕ್ಷಣೆಯಲ್ಲಿ ತೊಡಗಿದಾಗ ಮನಸ್ಸು ಅಲ್ಲಾಡುಬಹುದು. ಆದರೆ ಕಣ್ಣು ಹಾರಾಡಬಾರದು ಎಂದು ಕಣ್ಣಿಗೆ ಮೊದಲು ಬೋಧನೆ ಮಾಡಿದರು. ಕಣ್ಣಿಗೆ ಮೊದಲು ದೀಕ್ಷೆ ಕೊಟ್ಟರು ಬಸವಣ್ಣನವರು. ಮನಸ್ಸು ಮತ್ತು ಕಣ್ಣಿಗೆ ನೇರ ಸಂಪರ್ಕವಿರುವುದರಿಂದ ಲಿಂಗಯೋಗ ಬಹಳ ವಿಶೇಷವೆನಿಸುತ್ತದೆ.

ಇದನ್ನೇ ಸಿದ್ಧರಾಮ ಶರಣರು, “ನೋಟದ ಭಕ್ತಿ ಬಸವಣ್ಣನಿಂದಾಯಿತ್ತು, ಕೂಟದ ಜ್ಞಾನ ಬಸವಣ್ಣನಿಂದಾಯಿತ್ತು ಕಾಣಾ, ಎಲ್ಲಿಯ ಶವಜ್ಞಾನ, ಎಲ್ಲಿಯ ಮಾಟ ಕೂಟ, ಬಸವನಲ್ಲದೇ?, ಮಹಾಜ್ಞಾನಿ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯ, ಕಪಿಲಸಿದ್ಧ ಮಲ್ಲಿಕಾರ್ಜುನ” ಎಂದು ಹೇಳಿದ್ದಾರೆ. ಪಾರಿವಾಳದ ಕಾಲಿಡಿದರೆ ಅದು ರೆಕ್ಕೆ ಬಡಿಯುತ್ತದೆ. ಅದರ ರೆಕ್ಕೆ ಸಮೇತ ಹಿಡಿದರೆ ರೆಕ್ಕೆ, ಕಾಲು ಎರಡನ್ನೂ ಬಡಿಯುವುದಿಲ್ಲ. ಅದರಂತೆ ಲಿಂಗವನ್ನು ಅನಿಮಿಷ ದೃಷ್ಟಿಯಿಂದ ನೋಡಬೇಕು. ಮನಸ್ಸು ಬಹಳ ಚಂಚಲ.

ಭರ್ತೃಹರಿ ಎಂಬ ರಾಜಕುಮಾರ ಮನಸ್ಸು ಹತೋಟಿಯಲ್ಲಿಟ್ಟುಕೊಂಡ. ಆತ ಈ ದೇಶದ ಬಹು ದೊಡ್ಡ ಶ್ರೇಷ್ಠ ಶುಭಾಷಿತಕಾರನಾಗಿ ಪರಿಣಮಿಸಿದ. ನಮ್ಮ ಇಂದ್ರೀಯಗಳಲ್ಲಿ ಅತ್ಯದ್ಭುತ ಇಂದ್ರೀಯ ಕಣ್ಣು. ಲಿಂಗಯೋಗ ಸಾಧನೆಯಿಂದ ಬಾಳಬಟ್ಟೆ ಹೂವಾಗಿ ಪರಿಣಮಿಸುತ್ತದೆ. ಹೆದರದಿರು ಮನವೆ, ಬೆದರದಿರು ತನುವೆ, ನಿಜವನರಿತು ನಿಶ್ಚಿಂತನಾಗಿರು ಎಂದು ಅಕ್ಕಮಹಾದೇವಿ ಹೇಳುತ್ತಾರೆ.

ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಹೇಗೆಯೋ ಹಾಗೆಯೇ ಸತ್ಯ ಮತ್ತು ತತ್ವ ಬಹಳ ಮುಖ್ಯ. ಬಸವತತ್ವ ಆಚರಣೆ ಮತ್ತು ಅಳವಡಿಕೆಯಿಂದ ಗುಡ್ಡದಂತಹ ಸಮಸ್ಯೆಗಳು ಪರಿಹಾರವಾಗಬಲ್ಲವು. ಬಸವತತ್ವಕ್ಕೆ ಚ್ಯುತಿ ಬಂದರೆ ಸಹಿಸದ ನಿಜಗುಣವನ್ನು ಬೆಳೆಸಿಕೊಳ್ಳಬೇಕು. ಮನುಷ್ಯ ಸತ್ಯಕ್ಕೆ ಹೆದರಬೇಕು ವಿನಃ ಸಾವಿಗೆ ಹೆದರಬಾರದು. ಹುಟ್ಟಿದವನು ಒಮ್ಮೆ ಸಾಯಲೇಬೇಕು. ದೇಶಕ್ಕಾಗಿ, ಸತ್ಯಕ್ಕಾಗಿ ಸಾವನ್ನಪ್ಪಿದವರು ಹುತಾತ್ಮರಾಗಬಲ್ಲರು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here