ಕಲಬುರಗಿ: ತಹಶೀಲ್ದಾರರು ಹಾಗೂ ಚುನಾವಣಾ ಕಾರ್ಯಗಳಿಗೆ ನೇಮಿಸಿದ ಅಧಿಕಾರಿಗಳು ಪ್ರತಿ ಗ್ರಾಮ ಮತ್ತು ಬೂತ್‌ಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ಪ್ರತಿ ಬಿ.ಎಲ್.ಓ.ಗಳಿಂದ ಹೊಸ ಮತದಾರರ ಹಾಗೂ ತಿದ್ದುಪಡಿ ಅರ್ಜಿಗಳ ಕುರಿತು ಮಾಹಿತಿ ಸಂಗ್ರಹಿಸಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಮತದಾರರ ಪಟ್ಟಿ ವೀಕ್ಷಕ ಸುಬೋಧ ಯಾದವ್ ಅವರು ಹೇಳಿದರು.
ಶುಕ್ರವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಕಲಬುರಗಿ ಜಿಲ್ಲಾ ಮತದಾರರ ಪಟ್ಟಿ ಪರಿಷ್ಕರಣೆ-೨೦೧೯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಮತದಾರರ ಪಟ್ಟಿಗೆ ಸಂಬಂಧಿಸಿದ ತಾಲೂಕು ಬಿ.ಎಲ್.ಎ.ಗಳೊಂದಿಗೆ ನೇರವಾಗಿ ಸಂಪರ್ಕವನ್ನು ಹೊಂದಬೇಕು. ನಿಗದಿತ ಸಮಯದೊಳಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಮತದಾರರ ಪಟ್ಟಿ ಸ್ವಚ್ಛ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯ ಎಂದರು.
ಮತದಾರರ ಪಟ್ಟಿ ತಯಾರಿಕೆಗೆ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿ.ಎಲ್.ಎ.ಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು. ಕಲಬುರಗಿ ಜಿಲ್ಲೆಯಲ್ಲಿ ೨೧.೭೭ ಲಕ್ಷ ಮತದಾರರಿದ್ದು, ಶೇ.೯೭ರಷ್ಟು ಮತದಾರರ ನೊಂದಣಿ ಕಾರ್ಯ ಮುಗಿದಿದೆ ಎಂದರು. ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಜೇವರ್ಗಿ ತಾಲೂಕಿನಲ್ಲಿ ೩, ಚಿತ್ತಾಪೂರ ತಾಲೂಕಿನಲ್ಲಿ ೨೦, ಸೇಡಂ ತಾಲೂಕಿನಲ್ಲಿ ೨, ಚಿಂಚೋಳಿ ತಾಲೂಕಿನಲ್ಲಿ ೪೦, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ೬, ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ೬೧೨ ಮತದಾರರ ಪಟ್ಟಿ ಕುರಿತು ದೂರುಗಳು ಬಂದಿವೆ. ಕಲಬುರಗಿ ಉತ್ತರ ಕ್ಷೇತ್ರದಲ್ಲಿ ೪೧೭ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದರು.
ಮೊಬೈಲ್ ಆಪ್ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನೊಂದಣಿ ಹಾಗೂ ಮತದಾರರ ಪಟ್ಟಿ ಸ್ವಯಂ ದೃಢೀಕರಣ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆಯಿಂದ ಕೆಲವೊಮ್ಮೆ ಎರಡೆರಡು ಬಾರಿ ಅರ್ಜಿಗಳು ಸಲ್ಲಿಕೆಯಾಗಿದ್ದು ಇವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ, ತಾಲೂಕುಗಳ ತಹಶೀಲ್ದಾರರು, ಕ್ಷೇತ್ರವಾರು ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿ, ಬಿ.ಎಲ್.ಎ.ಗಳು ಉಪಸ್ಥಿತರಿದ್ದರು.