ಕಲಬುರಗಿ: ನೋವೆಲ್ ಕರೋನಾ ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತಿದೆ. ಈ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್‌ದಲ್ಲಿ ಪತ್ತೆಯಾಗಿದೆ. ಈ ರೋಗದ ಕುರಿತು ಸಾರ್ವಜನಿಕರು ಭಯಪಡಬಾರದು. ಸಾರ್ವಜನಿಕರು ಕೆಳಕಂಡ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ಅವರು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯು ಜೊತೆ ನಿಕಟ ಸಂಪರ್ಕ, ಸೋಂಕಿತ ವ್ಯಕ್ತಿಯು ಹಸ್ತ ಲಾಘವ ಮತ್ತು ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಇತರೆ ವ್ಯಕ್ತಿ ಬಳಸಿದಾಗ ಹಾಗೂ ಸ್ವಚ್ಛಗೊಳಿಸದೆ/ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಈ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಮುಂಜಾಗೃತಾ ಕ್ರಮಗಳು: ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು. ಶಂಕಿತ ರೋಗಿಯು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್/ಕೈವಸ್ತ್ರ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಂಸ ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು.
ರೋಗದ ಲಕ್ಷಣಗಳು: ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನೆಮೋನಿಯಾ ಹಾಗೂ ಬೇಧಿ ಕರೋನಾ ವೈರಸ್ ರೋಗದ ಲಕ್ಷಣಗಳಾಗಿವೆ. ಈ ತರಹದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಕೊಳ್ಳಬೇಕು.
ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು ಕರೋನಾ ವೈರಸ್‌ನ ಕುರಿತು ಅರಿವು ಹೊಂದುವುದಲ್ಲದೇ ಚಿಕಿತ್ಸೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ೦೫ ಹಾಸಿಗೆಯ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಜಿಲ್ಲೆಯ ಎಲ್ಲ ತಾಲೂಕಾ ಆಸ್ಪತ್ರೆಯಲ್ಲಿ ೦೨ ಹಾಸಿಗೆಯ ಪ್ರತ್ಯೇಕ ವಾರ್ಡ್ ಸಹ ಇರಲಿದೆ. ಕರೋನಾ ವೈರಸ್‌ನ ರೋಗ ಪರೀಕ್ಷೆಗೆ ಬೇಕಾಗಿರುವ ಎಲ್ಲಾ ಅಗತ್ಯ ದಾಸ್ತಾನುಗಳಾದ VTM ,Swab ಹಾಗೂ ಔಷಧಿ ಮತ್ತಿತರ ದಾಸ್ತಾನು ಲಭ್ಯವಿರುತ್ತವೆ. PPE – Personal Protective Equipments ದಾಸ್ತಾನುಗಳಾದ PPE Kit, N 95 ಮಾಸ್ಕ, Triple Layer Mask ಸೇರಿದಂತೆ ಮತ್ತಿತರ ದಾಸ್ತಾನು ಲಭ್ಯ ಇರುತ್ತದೆ. ಈ ರೋಗದ ಕುರಿತು ಅರೋಗ್ಯ ಇಲಾಖೆಯಿಂದ ಸಾರ್ವಜನಿಕರಲ್ಲಿ (I ಇ ಅ ) ಕರಪತ್ರಗಳು, ಹೋರ್ಡಿಂಗ್‌ಗಳು ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.