ಕಲಬುರಗಿ: ಹಲವಾರು ವೇದಗಳನ್ನ ಓದಿದವರು ದೊಡ್ಡ ವ್ಯಕ್ತಿಯಾಗುವುದಿಲ್ಲ, ಮತ್ತೊಬ್ಬರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವವರೇ ಶ್ರೇಷ್ಠ ವ್ಯಕ್ತಿಯಾಗುತ್ತಾರೆಂದು ಮಾಜಿ ಸಚಿವ ಎಸ್. ಕೆ. ಕಾಂತಾ ಹೇಳಿದರು.
ನಗರದ ಕಲಾ ಮಂಡಳದಲ್ಲಿ ಸ್ನೇಹ ಸಂಗಮ ವಿವಿದೋದ್ದೇಶ ಸೇವಾ ಸಂಘವು ಆಯೋಜಿಸಿದ್ದ ಅಮೃತೇಶ ಮಾಸ್ತರ ಕಲಶೆಟ್ಟಿ ಅವರ ನೆನಪಿಗಾಗಿ ಬಸವಾಮೃತ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ ೧೨ನೇ ಶತಮಾನದ ಶರಣರು ಸಮ ಸಮಾಜ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನದೊಂದಿಗೆ ನಡೆ-ನುಡಿ ಒಂದಾಗಿಸಿ ಶ್ರೇಷ್ಠ ವ್ಯಕ್ತಿಗಳಾದರು. ಪ್ರಸ್ತುತ ಸಂದರ್ಭದಲ್ಲಿ ಶರಣರನ್ನು ಕೆಲವೇ ಜಾತಿ ಮತ ಧರ್ಮಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನಿಯ ಸಂಗತಿ ಎಂದು ನುಡಿದರು.
ಕಲೆ ಯಾವುದೇ ಜಾತಿ ಮತದ ಸ್ವತ್ತಲ್ಲ ತಮ್ಮಲ್ಲಿರುವ ಪ್ರತಿಭೆಯಿಂದ ಸತತ ಪ್ರಯತ್ನದೊಂದಿಗೆ ಸಾಧನೆ ಮಾಡಬಹುದು. ಇಂದು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದುಕೊಂಡವರಲ್ಲಿ ಎಲೆಮರೆಯಕಾಯಿಯಂತೆ ಸದ್ದಿಲ್ಲದೆ ಸೇವೆಗೈಯ್ಯುತ್ತಿರುವವರನ್ನು ಸಂಘವು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ಹೆಮ್ಮೆಯ ವಿಷಯ. ಸರ್ಕಾರದಿಂದ ಆಗಬೇಕಾದ ಕೆಲಸವು ಸಂಘವು ಮಾಡುತ್ತಿರುವುದು ಪ್ರಶಂಸನೀಯ. ಇಂತಹ ಕಾರ್ಯ ಮುಂದುವರಿಯಲೆಂದು ಆಶಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿ ಷ.ಬ್ರ. ಡಾ. ರೇವಣಸಿದ್ಧ ಶಿವಾಚಾರ್ಯರು ಮಾತನಾಡುತ್ತಾ ಆಡು ಮುಟ್ಟದ ಸೊಪ್ಪಿಲ್ಲ, ಅಮೃತೇಶ ಮಾಸ್ತರ ಕಲಶೆಟ್ಟಿಯವರು ಸೇವೆಗೈಯದ ಕ್ಷೇತ್ರವಿಲ್ಲ. ಇಂತಹ ಮಹಾನ್ ವ್ಯಕ್ತಿಯ ಸಂಗೀತ ಸಾಹಿತ್ಯ ಕಲೆಯನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಇವರ ಆದರ್ಶ ಜೀವನವನ್ನು ಮಕ್ಕಳಿಗೆ ಪರಿಚಯ ಮಾಡಿಸುವ ಮೂಲಕ ಪಠ್ಯಪುಸ್ತಕದಲ್ಲಿ ಅಳವಡಿಸಿಬೇಕೆಂದು ಸರಕಾರಕ್ಕೆ ಸಲಹೆ ನೀಡಿದರು.
ಸಂಘದ ಅಧ್ಯಕ್ಷರಾದ ಹಣಮಂತರಾಯ ಎಸ್. ಅಟ್ಟೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಭಾಗದ ಸಂಗೀತ, ಸಾಹಿತ್ಯ, ಪ್ರವಚನ, ಹಾಸ್ಯ, ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಡುವುದರೊಂದಿಗೆ ಅವರ ಸೇವೆಯನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಹಗಲು ರಾತ್ರಿಯನ್ನದೆ ಯಾವುದೇ ಪ್ರಚಾರ ಪಡೆಯದೆ ತಮ್ಮ-ತಮ್ಮ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಇವರ ಆದರ್ಶ ಜೀವನ ಸಮಾಜಕ್ಕೆ ಪರಿಚಯಿಸಿ ಸರ್ವರಿಗೂ ಮಾದರಿಯಾಗಲೆಂದು ಸಂಘದ ಆಶಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ದಾವಣಗೆರೆ ಉಪಕುಲಪತಿಗಳಾದ ಶರಣಪ್ಪ ಹಲಸೆ, ಹಿರಿಯ ವೈದ್ಯರಾದ ಎಸ್. ಎಸ್. ಗುಬ್ಬಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ಎ.ಆಯ್.ಟಿ.ಯು.ಸಿ. ಕಾರ್ಮಿಕ ಸಂಘಟನೆ ಅಧ್ಯಕ್ಷರಾದ ಪ್ರಭುದೇವ ಯಳಸಂಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ್, ಶಾಂತಪ್ಪ ಕಲಶೆಟ್ಟಿ ಮಾತನಾಡಿದರು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ ಅಮೃತೇಶ ಮಾಸ್ತರರು ರಚಿಸಿದ ಪ್ರಾಸ ಕವನಗಳನ್ನು ಹಾಡುವುದರ ಜೊತೆಗೆ ತಮ್ಮ ಹಾಸ್ಯಚಟಾಕಿಗಳೊಂದಿಗೆ ಮಾತನಾಡಿ ಸಭಿಕರನ್ನು ರಂಜಿಸಿದರು.
ಬಸವಾಮೃತ ಪ್ರಶಸ್ತಿಗೆ ಆಯ್ಕೆಯಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ವೀರಭದ್ರಪ್ಪ ತಳವಾಡೆ, ಹಾಸ್ಯ ಕಲಾವಿದ ಹೇಮಂತ ಅಷ್ಟಗಿಕರ್, ಪ್ರವಚನಗಾರರಾದ ಸಂಗಮೇಶ ಶಾಸ್ತ್ರೀ ಮಾಶಾಳ, ಸಾಹಿತಿಗಳಾದ ಅಣ್ಣಾರಾವ ಸಾಮದೆ ಹಾರಕೂಡ, ರಂಗಕಲಾವಿದರಾದ ಶಂಕರಲಿಂಗ ನಿಂಬರ್ಗಿ, ಪ್ರಗತಿಪರ ರೈತರಾದ ಲಕ್ಷ್ಮೀಕಾಂತ ಪಿ. ಟೆಂಗಳಿ ಉಪಳಾಂವ ಇವರೆಲ್ಲರಿಗೂ ಪ್ರಶಸ್ತಿ ನೀಡಿ ವಿಶೇಷವಾಗಿ ಗೌರವಿಸಲಾಯಿತು.
ಸಂಗೀತ ಕಲಾವಿದರಾದ ಶ್ರವಣಕುಮಾರ ಮಠ ಪ್ರಾರ್ಥಿಸಿದರು, ರವಿ ಶಹಾಪೂರಕರ ನಿರೂಪಿಸಿದರು, ಮಲಕಾರಿ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ನಂದೀಶ್ವರ ಜೆ. ಪಾಟೀಲ, ರಘುನಂದನ ಕುಲಕರ್ಣಿ, ಮಹೇಶ ತೇಲಕುಣಿ, ರಾಜು ಹೆಬ್ಬಾಳ, ಬಸವರಾಜ ಜೋಗುರ, ಪ್ರಭುಲಿಂಗ ತಾಡಪಳ್ಳಿ, ರಜನಿಕಾಂತ ಬರುಡೆ, ಅಶೋಕ ತಳವಾಡೆ, ಶರಣು ಜೆ. ಪಾಟೀಲ ಬೆಳಗುಂಪಿ, ನಾಗಲಿಂಗಯ್ಯ ಮಠಪತಿ, ವಿಜಯಕುಮಾರ ತೆಗಲತಿಪ್ಪಿ, ರಾಜು ಉದನೂರ, ಶಿವರಂಜನ್ ಸತ್ಯಂಪೇಟ್, ಅಣವೀರಯ್ಯ ಪ್ಯಾಟಿಮನಿ, ಶರಣು ಛಪ್ಪರಬಂದಿ, ಶ್ರೀಶೈಲ್ ಗುಡೇದ, ಸಿದ್ದಣ್ಣ ಬಿರಾದಾರ, ಕುಪೇಂದ್ರ ಬಿರಾದಾರ, ಸಂಗಮೇಶ ಹೂಗಾರ, ಶಾಂತಲಿಂಗಪ್ಪ ಪಾಟೀಲ, ರೇವಣಸಿದ್ದ ಕಲಕೋರಿ, ಸಿದ್ಧಣ್ಣ ಸಜ್ಜನ, ಭೀಮಾಶಂಕರ ತಳವಾಡೆ, ರೇವಣಸಿದ್ಧಯ್ಯ ಮಠಪತಿ, ನಾಗೇಂದ್ರಯ್ಯ ಮಠ, ವೆಂಕಟೇಶ ಜನಾದ್ರಿ, ಹೇಮಂತ ಕೋಲ್ಹಾಪುರೆ ಸೇರಿದಂತೆ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.