ವಾಡಿ: ಕಲಬುರಗಿ ನಗರದಲ್ಲಿ ಫೆ.೫ ರಿಂದ ಶುರುವಾಗಲಿರುವ ಅಖಿಲ ಭಾರತ ಕನ್ನಡ ನುಡಿಜಾತ್ರೆಗೆ ಬರುವಂತೆ ಬೀದಿ ನಾಟಕ ತಂಡ ಜಾಗೃತಿ ಮೂಡಿಸಿತು. ಕನ್ನಡ ಸಾಹಿತ್ಯದ ತೇರು ಎಳೆಯಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿಕೊಳ್ಳಿ ಎಂದು ಹಾಡಿನ ಮೂಲಕ ಮನವಿ ಮಾಡಿ ಗಮನ ಸೆಳೆದರು ರಂಗ ಕಲಾವಿದರು.
ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗೃತಿ ಮುಂದಾಗಿರುವ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಅಧಿಕಾರಿಗಳು, ಗ್ರಾಮೀಣ ಭಾಗಕ್ಕೆ ಬೀದಿ ನಾಟಕ ತಂಡವನ್ನು ಕಳಿಸುವ ಮೂಲಕ ಅಕ್ಷರ ಸಮ್ಮೇಳನ ಪ್ರಚಾರಕ್ಕೆ ಹೆಚ್ಚು ಮಹತ್ವ ನೀಡಿದೆ. ರವಿವಾರ ವಾಡಿ ಪಟ್ಟಣದ ಪ್ರಮುಖ ವೃತ್ತಗಳಾದ ಅಂಬೇಡ್ಕರ್ ಚೌಕ್, ರೈಲು ನಿಲ್ದಾಣ, ಆಜಾದ್ ಚೌಕ್, ಬಸ್ ನಿಲ್ದಾಣ ಹೀಗೆ ವಿವಿದೆಡೆ ರಂಗ ಗೀತೆಗಳನ್ನು ಹಾಡಿ ಜನರನ್ನು ಆಕರ್ಷಿಸಿದ ರಾಯಚೂರಿನ ಶೃತಿ ಸಂಸ್ಕೃತಿ ಸಂಸ್ಥೆಯ ಕಲಾವಿದರು, ನಾಟಕ ರೂಪದಲ್ಲಿ ನಿರೂಪಣೆ ಮಾಡಿ ಸಾಹಿತ್ಯ ಗೋಷ್ಠಿಗಳ ಮೇಲೆ ಬೆಳಕು ಚೆಲ್ಲಿದರು. ನುಡಿಜಾತ್ರೆಯ ಮಹತ್ವ ತಿಳಿಸುವ ಮೂಲಕ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶೃತಿ ಸಂಸ್ಕೃತಿ ಸಂಸ್ಥೆಯ ಖ್ಯಾತ ಗಾಯಕ ಡಿಂಗ್ರಿ ನರಸಪ್ಪ ನೇತೃತ್ವದ ತಂಡದ ಸಹ ಕಲಾವಿದರಾದ ರಾಜಪ್ಪ ಶಿರವಾರಕರ, ಬೂದೆಪ್ಪ ಮೇತ್ರಿ, ಯಲ್ಲಪ್ಪ ಕಡ್ತಲ, ಬಸವರಾಜ ಹುಬ್ಬಳ್ಳಿ, ಸಾಬಣ್ಣ ಸಿಂಗ್ರಿ, ಸಂಗಮೇಶ ಮೇತ್ರಿ, ಕವಿತಾ ಲಕ್ಕುಂದಿನ್ನಿ ಹಾಗೂ ರಾಧಾ ಅವರು ಪ್ರಸ್ತಿತಪಡಿಸಿದ ಜಾನಪದ ಗೀತೆಗಳು ಜನರನ್ನು ಗುಂಪು ಸೇರಿಸಿದವು. ಎಳೆಯೋಣ ಬನ್ನಿ ಒಂದಾಗಿ ಕನ್ನಡದ ತೇರು ಎಂದು ರಂಗ ಗೀತೆಗಳು ಸಾರಿದವು. ನಂತರ ಕಮರವಾಡಿ ಗ್ರಾಮದತ್ತ ಸಂಚರಿಸಿದ ರಂಗ ಕಲಾವಿದರ ತಂಡ ಗ್ರಾಮೀಣ ಜನರಿಗೂ ಸಾಹಿತ್ಯ ಸಮ್ಮೇಳನದ ಸಂದೇಶ ತಲುಪಿಸಿತು. ವಾಡಿ ವಲಯ ಕಸಾಪ ನಿಕಟಪೂರ್ವ ಅಧ್ಯಕ್ಷ ಮಲ್ಲೇಶ ನಾಟೀಕಾರ, ಸಂಚಲನ ಸಾಹಿತ್ಯ ವೇದಿಕೆಯ ಸಹ ಕಾರ್ಯದರ್ಶಿ ಮಲಿಕಪಾಶಾ ಮೌಜನ್, ಸ್ಥಳೀಯರಾದ ರಾಜು ಮುಕ್ಕಣ್ಣ, ಪರಶುರಾಮ ಕಟ್ಟಿಮನಿ, ವಿಜಯಕುಮಾರ ಯಲಸತ್ತಿ, ಪುರಸಭೆ ಸಿಬ್ಬಂದಿ ಶಿವುಕಾಂತಮ್ಮ, ಸರ್ದಾರ ಪಾಲ್ಗೊಂಡಿದ್ದರು.