ನಮ್ಮೂರ ನುಡಿ ಜಾತ್ರೇಲಿ ನಾ ಕಂಡ ಸತ್ಯ

0
140

ಕರ್ನಾಟಕದ ರಾಜಕಾರಣಿಗಳಿಂದ ಸದಾ ನಿರ್ಲಕ್ಷಕ್ಕೆ ಒಳಗಾದ ಕಲಬುರ್ಗಿಯಲ್ಲಿ ಕನ್ನಡ ನುಡಿ ಜಾತ್ರೆ ೩೨ ವರ್ಷಗಳ ನಂತರ  ನಡೆದಿರುವುದೇ ಒಂದು ಸಂತಸದ ಸಂಗತಿ. ಇಂದ್ರ-ಚಂದ್ರ ಹೂವು-ಬಳ್ಳಿ, ಹೆಣ್ಣು ನಕ್ಷತ್ರಗಳ ಬಗ್ಗೆ ಬರೆಯುವುದು, ರಾಜ ಮಹಾರಾಜರುಗಳು, ಅವರು ಮಾಡಿದ ಕೊಲೆಗಳು, ಅವರ ಹೆಂಡತಿಯರ ಸಂಖ್ಯೆಗಳು, ರಾಜ ವೈಭವಗಳು, ಆನೆಗಳು, ಒಂಟೆಗಳು, ಕುದುರೆಗಳು, ನರ್ತಕಿಯರು ಮತ್ತವರ ವರ್ಣನೆ ಮಾಡುವುದೇ ಸಾಹಿತ್ಯ ಎಂದು ನಂಬಿರುವವರೇ ಅಂದು – ಇಂದು ಕನ್ನಡ ರಥದ ಹಗ್ಗವನ್ನು ಹಿಡಿದು ಜಗ್ಗಾಡುತ್ತಿದ್ದಾರೆ. ಆದರೆ ಅವರಿಗೆ ಈ ದೇಶದ ಸಮಸ್ಯೆಗಳು ಸಮಸ್ಯೆಗಳಾಗಿ ಕಾಣುವುದೇ ಇಲ್ಲ.  ಬಸವಾದಿ ಶರಣರ ವಚನಗಳು, ದಾಸರ ಕೀರ್ತನೆಗಳು ಇವರಿಗೆ ಸಾಹಿತ್ಯವಾಗಿ ಕಾಣದೇ ಬರೀ ಮಂತ್ರಗಳಾಗಿ ಕಾಣುತ್ತವೆ.

ಈ ಮಣ್ಣಿನ ಮಕ್ಕಳ ಮೂಲ ಸಮಸ್ಯೆಗಳನ್ನು ಮರೆತು ಕನ್ನಡದ ಹೆಸರಿನಲ್ಲಿ ಜಾತ್ರೆ ಮಾಡುವುದೇ ಅವರ ದೃಷ್ಠಿಯಲ್ಲಿ ಕನ್ನಡ ಅಭಿಮಾನ. ಅಂತವರ ವಿರುದ್ಧ ಪರ್ಯಾಯ ಸಾಹಿತ್ಯ ಸಮ್ಮೇಳನ ಮಾಡಿ, ಹಸಿವು, ಬಡತನ, ಮೌಢ್ಯ ಕಂದಾಚಾರಗಳನ್ನು ವಿರೋಧಿಸುವ ವಾಸ್ತವಿಕ ಸತ್ಯಗಳನ್ನು ಜನರಿಗೆ ಕಟ್ಟಿಕೊಡುವ ಮೂಲಕ ಸಾಹಿತ್ಯ ಹೇಗಿರಬೇಕು ಎಂದು ಪರಿಚಯಿಸಿದ ಬಂಡಾಯದ ಬೇರುಗಳಿಗಂಟಿದ ಮಣ್ಣಿನ ಚೂರುಗಳಾದ ನಮಗೆ, ಒಂದೇ ವರ್ಗಕ್ಕೆ ಸೀಮಿತವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಅಸಮಧಾನ ಮತ್ತು ತಕರಾರು ಯಾವತ್ತೂ ಇದೆ. ಹೀಗಿರುವಾಗಲೂ ಕೆಲವು ಪ್ರಗತಿಪರ ಸಾಹಿತಿಗಳಿಗಾಗಿ ಮತ್ತು ಅಲ್ಲಿ ದೊರೆಯುವ ಪುಸ್ತಕಗಳಿಗಾಗಿ ನನ್ನಂತಹ ಅನೇಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಂತಹವರಿಗೆ ಜೀವಪರ ಸಾಹಿತಿಗಳ ಮಾತು ತುಂಬಾ ಖುಷಿ ಮತ್ತು ಮಾರ್ಗದರ್ಶನ ನೀಡಿರುವುದು ಮರೆಯಲಾಗದು.

Contact Your\'s Advertisement; 9902492681

ಓದುಗರಿಗೆ ತೃಪ್ತಿ ನೀಡಬಲ್ಲ ನೂರಾರು ಪುಸ್ತಕ ಮಳಿಗೆಗಳು, ಅಲ್ಲಿ ಸಾವಿರಾರು ವೈಜ್ಞಾನಿಕ ವೈಚಾರಿಕ ಮತ್ತು ಸಮಕಾಲಿನ ಬರಹಗಳನ್ನೊಳಗೊಂಡ ಕೃತಿಗಳು, ಓದುಗರ ಓದಿನ ದಾಹ ನೀಗಿಸಬಲ್ಲ ವಿಜ್ಞಾನ, ತಂತ್ರಜ್ಞಾನ, ಕೃಷಿ, ವ್ಯಾಪಾರ, ಬಸವಾದಿ ಶರಣರ ವಚನಗಳ ಗುಂಚ, ಸಂತ, ಸೂಫಿ, ದಾಸರ ಕಿರ್ತನೆ ಹಾಗೂ ಕವ್ವಾಲಿ ಸೇರಿದಂತೆ ಶ್ರೀ ಸಾಮಾನ್ಯರ ಕಾವ್ಯ ಕಥೆಗಳ ಚಿಂತನೆಯನ್ನೊಳಗೊಂಡ ನೂರಾರು ಸಾಹಿತಿಗಳ ಲಕ್ಷಾಂತರ ಕೃತಿಗಳು (ಮೂಲಭೂತವಾದಿತನ ಪ್ರತಿಪಾದಿಸುವ ಜೀವವಿರೋಧಿ ಪುಸ್ತಕಗಳೂ ಇದ್ದವು. ಮಾರಾಟವಾಗದಕ್ಕೋ ಅಥವಾ ಮನುಷ್ಯನ ತಲೆಯಲ್ಲಿ ವಿಷಬೀಜ ಬಿತ್ತಲಿಕ್ಕೋ ಗೊತ್ತಿಲ್ಲ ಅರ್ದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು.) ಈ ಸಾಹಿತ್ಯ ಸಮ್ಮೇಳನ ಎಂಬ ನುಡಿ ಜಾತ್ರೆಯಲ್ಲಿ ರಾರಾಜಿಸುತ್ತಿದ್ದವು.

ಮೂರು ದಿನಗಳ ಕಾಲ ಲಕ್ಷ ಲಕ್ಷ ಜನ ಸೇರಿದರೂ ಸಾರಿಗೆ ಸಂಪರ್ಕ ಕಲ್ಪಿಸುವ ವಿಷಯದಲ್ಲಿ ಯಾವ ತೊಂದರೆಯೂ ಆಗದ ಹಾಗೆ ಅಚ್ಚುಕಟ್ಟಾಗಿ ನೋಡಿಕೊಳ್ಳಲಾಯಿತು. ಗಿoಟuಟಿಣeeಡಿs ಗಳ ಪರಿಶ್ರಮ ಮತ್ತು ಅವರು ಪ್ರಾಮಾಣಿಕ ಸೇವೆ ಮಾಡಿದ್ದರಿಂದ ಎಲ್ಲರೂ ಹೊಟ್ಟೆ ತುಂಬ ಊಟ ಮಾಡುವಂತಾಯಿತು. ಕಲಬುರ್ಗಿ, ವಾಡಿ, ಶಹಬಾದ್, ಚಿತ್ತಾಪುರ, ಆಳಂದ, ಅಫಜಲಪುರ, ಚಿಂಚೋಳಿ, ಸೇಡಂ, ಜೆವರ್ಗಿ ಸೇರಿದಂತೆ ವಿವಿಧ ನಗರಸಭೆ, ಪುರಸಭೆಗಳಿಂದ ಬಂದ ಪೌರ ಕಾರ್ಮಿಕರು ಸಮ್ಮೇಳನದ ವೇದಿಕೆ, ರಸ್ತೆ ಸೇರಿದಂತೆ ಇಡೀ ವಾತಾವರಣ ಸ್ವಚ್ಛತೆ ಮಾಡಲು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಅವರ ಬಗ್ಗೆ ತಿಳಿಸದಿದ್ದರೆ ಸಮ್ಮೇಳನಕ್ಕೇ ಅಪಮಾನ ಮಾಡಿದಂತಾಗುವುದು. ಇನ್ನು ಈ ಬಿಸಿಲು ನಾಡಿನ ನಾಷ್ಟಾ (ತಿಂಡಿ) ಚುರಮುರಿ ಸುಸಲಾ, ಸಿರಾ, ಉಪ್ಪಿಟ್ಟು, ಶಾವಿಗೆ ಪಾಯಸಾ, ಮಿರ್ಚಿ ಬಜಿ ತುಂಬಾ ಸ್ವಾದಿಷ್ಟ ವಾಗಿತ್ತು. ಮಧ್ಯಾಹ್ನ ಊಟದಲ್ಲಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಪುಂಡಿ ಪಲ್ಲೆ, ಬದನೆಕಾಯಿ ಎಡಿಗಾಯಿ, ನುಗ್ಗೆಕಾಯಿ ಸಾರು, ಹುಗ್ಗಿ, ಮೋತಿಚೂರ ಲಾಡು, ಮಜ್ಜಿಗೆ, ಮೊಸರನ್ನ, ಅನ್ನ ಸಾಂಬಾರು, ದೇಹಕ್ಕೆ ಪೌಷ್ಟಿಕಾಂಶ ನೀಡುವುದರ ಜೊತೆಗೆ ಇಲ್ಲಿನ ಬಿಸಿಲಿಗೆ ಸೋಲಿಸುವ ಶಕ್ತಿ ನೀಡಿತು.

ಸಮ್ಮೇಳನಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲು ವಿಳಂಬ ಮಾಡಿದರೂ ಜನರಿಂದ ಕೋಟಿ ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದ್ದು, ಇಲ್ಲಿನ ಜನರ ಕನ್ನಡಭಿಮಾನದ ಪ್ರತೀಕವಾಗಿತ್ತು. ಆದರೆ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡುವ ಮೂಲಕ ಟಿವಿ ಮಾಧ್ಯಮಗಳನ್ನು ಕನ್ನಡ ನುಡಿ ಜಾತ್ರೆಯಿಂದ ದೂರ ಸರಿಸಿ ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿದ್ದು, ಮತ್ತು ಸಮಾರೋಪ ಸಮಾರಂಭದ ದಿನವೇ ಇದೇ ಭಾಗದ ಬೀದರನಲ್ಲಿ ಪಶು ಮೇಳ ನಡೆಸಿರುವ ಸರಕಾರದ ನಿರ್ಧಾರ ಖಂಡನೀಯ. ಆದರೆ ಜನ ಮಾತ್ರ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು ಸಮಾಧಾನಕರ ಸಂಗತಿ. ಇನ್ನು ಸರಕಾರಿ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರು ಗಿoಟuಟಿಣeeಡಿs ಗಳಾಗಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿದ್ದರಿಂದ ಸಮ್ಮೇಳನದಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳಲು ಕಾರಣವಾಯಿತು.

ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಕ್ಕಾ ಬಲಪಂಥೀಯರ ಸಮ್ಮೇಳನ  ಮಾಡಲು ಹೊರಟ ಪರಿಷತ್ತಿನ ನಡೆಯನ್ನು ಖಂಡಿಸಿದ ಡಾ.ಅಪ್ಪಗೆರೆ ಸೋಮಶೇಖರ, ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಆರ್.ಕೆ. ಹುಡಗಿ, ಡಾ.ಪ್ರಭು ಖಾನಾಪುರೆ, ದಸಂಸ ಕಾರ್ಯಕರ್ತರು ಅಶ್ವಿನಿ, ರೇಣುಕಾ, ಪೂಜಾ ಸೇರಿದಂತೆ ಅನೇಕ ಪ್ರಗತಿಪರ ಸ್ನೇಹಿತರು, ಸಂಘಟನೆಗಳು ಕೆಲವು ಬೇಡಿಕೆಗಳನ್ನಿಟ್ಟಿದ್ದರು. ಅವುಗಳಲ್ಲಿ ಒಂದನೇ ಶತಮಾನದ ಸಾಮ್ರಾಟ್ ಅಶೋಕನ ಶಿಲಾಶಾಸನಗಳು ಸಮೀಪದ ಸನ್ನತ್ತಿ ಗ್ರಾಮದಲ್ಲಿ ಸಿಕ್ಕಿದ್ದು, ಆ ವಿಷಯ ಕುರಿತು ಒಂದು ಗೋಷ್ಠಿ ಇರಬೇಕು, ಹಿರಿಯ ಸಾಹಿತಿ ಚನ್ನಣ್ಣ ವಾಲಿಕಾರ ಅವರ ಹೆಸರು ಮುಖ್ಯ ವೇದಿಕೆಗೆ ಇಡಬೇಕು, ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಶೈಕ್ಷಣಿಕ, ಸಾಹಿತ್ಯಿಕ ಮತ್ತು ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಬೇಕೆಂದು ಬಯಸಿದ್ದರು.

ಮೊದಲು ಗಣನೆಗೆ ತೆಗೆದುಕೊಳ್ಳದ ಕನ್ನಡ ಸಾಹಿತ್ಯ ಪರಿಷತ್ತು, ಬಂಡಾಯ ಎದ್ದು ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸುವ ವಾಸನೆ ಹಿಡಿದು ಕೆಲವು ಬೇಡಿಕೆಗಳಿಗೆ ಪೂರ್ಣ ಒಪ್ಪಿಗೆ ನೀಡಿತು. ಮತ್ತು ಇನ್ನು ಕೆಲವು ಬೇಡಿಕೆಗಳಿಗೆ ಭಾಗಶಃ ಒಪ್ಪಿಕೊಂಡು ಬಂಡಾಯ ಏಳದೆ ಸಮ್ಮೇಳನ  ಸರಾಗವಾಗಿ ನಡೆಯಲಿ ಎಂಬ ಏಕಮಾತ್ರ ಉದ್ದೇಶದಿಂದ ಶರಣಾದರು. ಆದರೂ ಚಾಲಾಕಿ ಬುದ್ದಿಯ ಮನು ಬಳಿಗಾರ ಮತ್ತು ಅವರ ಟೀಮ್, ಕನ್ನಡ ಭಾಷೆ: ಹೊಸ ತಂತ್ರಜ್ಞಾನ, ಪುಸ್ತಕ ಲೋಕ, ಕಲಬುರ್ಗಿ ಜಿಲ್ಲಾ ದರ್ಶನ, ಕನ್ನಡ ನಾಡು-ನುಡಿ ಮತ್ತು ಯುವ ಕರ್ನಾಟಕ, ಕೃಷಿ ಮತ್ತು ನೀರಾವರಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ, ಜನಪದ ಜಗತ್ತು, ಹಾಗೂ ತತ್ವಪದ – ಸೂಫಿ -ಬೌದ್ಧ ಸಾಹಿತ್ಯ ಕುರಿತ ಗಂಭೀರವಾದ ಕೋಷ್ಠಿಗಳನ್ನು ಮುಖ್ಯ ವೇದಿಕೆಗೆ ಇಡದೇ ಸಮನಾಂತರ ವೇದಿಕೆಯಲ್ಲಿ ಇಟ್ಟಿರುವುದಕ್ಕೆ ಕಾರಣ ಆ ಎಲ್ಲಾ ವಿಷಯಗಳು ಸರ್ವರಿಗೂ ಮುಟ್ಟದಿರಲಿ ಎಂಬ ಒಳ ಉದ್ದೇಶ ಇರಬೇಕು.

ಅತ್ಯಂತ ಹಿರಿಯ, ಮತ್ತು ಬಂಡಾಯ ಸಾಹಿತಿ, ಸಂಶೋಧಕ, ನಾಟಕಕಾರ ಹಾಗೂ ಹೋರಾಟಗಾರ ಡಾ.ಚನ್ನಣ್ಣ ವಾಲಿಕಾರ ಅವರ ಹೆಸರು ಮುಖ್ಯ ವೇದಿಕೆಗೆ ಇಡದೇ ಸಮನಾಂತರ ವೇದಿಕೆಗೆ ಸೀಮಿತಗೊಳಿಸಿರುವುದು ಇವರ ಮನು ಬುದ್ದಿ ಎತ್ತಿ ತೋರಿಸುತ್ತದೆ. ಗೌತಮ ಬುದ್ಧನ ನಂತರ  ಅವನ  ಶಾಂತಿಯ ಸಂದೇಶವನ್ನು ಬೌದ್ಧ ಧಮ್ಮದ ಮೂಲಕ ಜಗತ್ತಿಗೆ ಸಾರಿದ ಭರತ ಖಂಡದ ಚಕ್ರವರ್ತಿ ಸಾಮ್ರಾಟ್ ಅಶೋಕನ ಶಾಸನಗಳು ಇದೇ ಜಿಲ್ಲೆಯ ಸನ್ನತ್ತಿಯಲ್ಲಿ ದೊರೆತಿದ್ದರೂ ಒಂದು ಪ್ರಮುಖ ಗೋಷ್ಠಿ ಆಯೋಜಿಸದೇ ಬೌದ್ಧ ಸಾಹಿತ್ಯ ಎಂಬ ಸೀಮಿತ ವಿಷಯದ ಗೋಷ್ಠಿ ನಡೆಸಿ ಮೂಗಿಗೆ ತುಪ್ಪ ಹಚ್ಚುವ ಮೂಲಕ ಕೊನೆಗೂ ತಮ್ಮ ಧಮಾಂಧ ಬುದ್ದಿ ಪ್ರದರ್ಶಿಸಿದ್ದಾರೆ.

ಕವಿಗೋಷ್ಠಿ ನೋಡಲು ಯಶಸ್ವಿಯೆನೋ ಆಯಿತು. ಆದರೆ, ಕೆಲವು ವೈಚಾರಿಕ ಕವನಗಳನ್ನು ಹೊರತುಪಡಿಸಿದರೆ, ಬಹುತೇಕ ಕವನಗಳು ಗಟ್ಟಿಯಾಗಿರಲಿಲ್ಲ ಎಂದು ಸಾಹಿತ್ಯಾಸಕ್ತರು ಗೊಣಗುತ್ತಿದ್ದರು. ದೇಶದ ಸಮಸ್ಯೆಗೆ ಸ್ಪಂದಿಸದೆ ವ್ಯಕ್ತಿಯ ವರ್ಣನೆಯ ಭಕ್ತಿಯಲ್ಲಿ ಮುಳುಗಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇದೆಲ್ಲವನ್ನು ನೋಡಿದ ಮತ್ತೆ ಕೆಲವರು ಬಹುತೇಕ ಕವಿಗಳ ಆಯ್ಕೆಯಲ್ಲಿ ಪಕ್ಕಾ ಲಾಭಿಯಾಗಿದೆ ಎಂದು ಆಕ್ರೋಶ, ಅಸಮಾಧಾನ ಮತ್ತು ನಿರಾಶೆಯನ್ನು ಒಟ್ಟಿಗೆ ವ್ಯಕ್ತ ಪಡಿಸುತ್ತಿದ್ದರು. ಆ ಎಲ್ಲರ ಸಿಟ್ಟಿನಲ್ಲಿ, ಅಸಮಾಧಾನದಲ್ಲಿ ಹಾಗೂ ಅವರ ಆಕ್ರೋಶದಲ್ಲಿ ಕನ್ನಡದ ಬಗ್ಗೆ ಕಾಳಜಿ ದೇಶದ ಭವಿಷ್ಯದ ಬಗ್ಗೆ ಚಿಂತನೆ ಅಡಗಿತ್ತು.

*ಕನ್ನಡ ಜಾತ್ರೆಯಲ್ಲಿ ಸಂಸ್ಕೃತ ಭಾಷೆಗೆ ಪೂಜೆ*

ಜನರ ಇಂಗ್ಲಿಷ್ ವ್ಯಾಮೋಹ, ಸರಕಾರದ ಅವೈಜ್ಞಾನಿಕ ಶಿಕ್ಷಣ ನೀತಿಗಳಿಂದ ಕನ್ನಡ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಮಾತನಾಡಬೇಕಿದ್ದ  ಸಮ್ಮೇಳನದ ಸರ್ವಾಧ್ಯಕ್ಷರು ಸಂಸ್ಕೃತ ರಾಷ್ಟ್ರೀಯ ಭಾಷೆಯಾಗಬೇಕು ಎಂದು   ಹೇಳುವ ಮೂಲಕ ತಮ್ಮ ಮೂಲಭೂತವಾದಿ ಮನಸ್ಸನ್ನು ತೋರ್ಪಡಿಸಿದ್ದಾರೆ. ಮತ್ತು ತಾವು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಅನೈತಿಕ ಮಾರ್ಗದಿಂದ ಎಂಬುದಕ್ಕೆ ಜಗದ್ಗುರುವಿಗೂ ಮೀರಿಸುವ ಅವರ ವೇಷ ಮತ್ತು ಭಾಷಣದ ಮೂಲಕವೇ ಖಾತ್ರಿಪಡಿಸಿದ್ದಾರೆ. ಇವರು ೮೫ನೇಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಬಗ್ಗೆ ಇವರು ವಹಿಸಿದ ಮೌನ ಕನ್ನಡಕ್ಕಿಂತ ತಮಗೆ ಸಿಕ್ಕ ಅವಕಾಶವೇ ಮುಖ್ಯ ಎನ್ನುವಂತಿತ್ತು. ಸರ್ವಾಧ್ಯಕ್ಷರೊಂದಿಗಿ ನಡೆದ ಸಂವಾದ  ಕಾರ್ಯಕ್ರಮದಲ್ಲಿ ಸಂಸ್ಕೃತ ಕೇಳಿದ ಕಿವಿಗಳಿಗೆ ಸೀಸ ಹಾಕುತ್ತಿದ್ದವರು ಈಗ ಎಲ್ಲರೂ ಸಂಸ್ಕೃತ ಕಲಿಯಬೇಕು ಹಾಗೂ ಅದೇ ರಾಷ್ಟ್ರೀಯ ಭಾಷೆಯಾಗಬೇಕು ಎನ್ನುವುದರ ಒಳ ಮರ್ಮವೇನು? ದೇಶದ ೯೯.೯೯ % ಪ್ರತಿಶತ ಜನರಿಗೆ ಓದಲು, ಬರೆಯಲು ಮತ್ತು ಮಾತನಾಡಲು ಬರದ ಸತ್ತ ಸಂಸ್ಕೃತ ಭಾಷೆಯನ್ನು ರಾಷ್ಟ್ರೀಯ ಭಾಷೆ ಮಾಡಬೇಕು  ಎಂದು ಕನ್ನಡ ನುಡಿ ಜಾತ್ರೆಯಲ್ಲೇ ಒತ್ತಾಯಿಸುವ ನಿಮ್ಮ ಉದ್ದೇಶವೇನು ಎಂದು ಹಿರಿಯ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮತ್ತು ಇತರರು ಕೇಳಿದ ಪ್ರಶ್ನೆಗೆ ತಡವರಿಸಿದ ಸರ್ವಾಧ್ಯಕ್ಷರು ಉತ್ತರ ಕೊಡಲಾಗದೇ ತಿಣುಕಾಡಿ ಮುಜುಗರ ಪಟ್ಟ ಘಟನೆ ನಡೆಯಿತು.

ಸರಕಾರದ ರಾಜಾಶ್ರಯದಲ್ಲಿ ಇಡೀ ಸಮ್ಮೇಳನವನ್ನು ಕೇಸರಿಕರಣಗೊಳಿಸಲು ಹೊರಟ ಮನು ಮತ್ತು ಅವನ ಮರಿಗಳ ನಡೆಯಿಂದ ಬೆಸತ್ತ ಎಲ್ಲಾ ಯುವ ಮತ್ತು ಹಿರಿಯ ಸಾಹಿತಿಗಳು ಸಮ್ಮೇಳನದಿಂದಲೇ ದೂರ ಉಳಿದಿದ್ದಾರೆ. ಸಮಾರೋಪ ಸಮಾರಂಭದ ಗೌರವ ಉಪಸ್ಥಿತಿ ಇರಬೇಕಾದ ಡಾ.ಸಿದ್ದಲಿಂಗಯ್ಯ, ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಿದ್ದ ಸಾಹಿತಿ ರಹಮತ್ ತರಕೇರಿ ಸೇರಿದಂತೆ ಅನೇಕರು ಮೌನದಿಂದಲೇ ಸಮ್ಮೇಳನ ಬಹಿಷ್ಕರಿಸಿದ್ದಾರೆ. ಭಾಗವಹಿಸಿದ ಹೋರಾಟಗಾರ್ತಿ ಕೆ. ಲೀಲಾ, ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್, ಆರ್.ಕೆ. ಹುಡುಗಿ, ಡಾ.ಹೆಚ್.ಟಿ. ಪೋತೆ, ಬಿ.ಟಿ. ಲಲಿತಾ ನಾಯಕ್, ಡಾ. ಪ್ರಭು ಖಾನಾಪುರೆ ವಿಕ್ರಮ್ ವಿಸಾಜಿ, ಸುಬ್ರಾಸ್ ಎಂಟೆತ್ತಿನವರ್, ಡಾ. ಹೆಚ್.ಟಿ.ಪೋತೆ, ಸೇರಿದಂತೆ ಹಲವರು ವೇದಿಕೆಯಲ್ಲೇ ಪ್ರತಿಭಟನಾ ನುಡಿಗಳನ್ನಾಡುವ ಮೂಲಕ ಸಮ್ಮೇಳನದ ಒಳಸಂಚನ್ನು ವಿಫಲಗೊಳಿಸಿದ್ದಾರೆ. ಕವನ ವಾಚನ ಮಾಡಿದ ಕೆಲವು ಪ್ರಜ್ಞಾವಂತ ಕವಿಗಳು ತಮ್ಮ ಕವನದ ಮೂಲಕವೇ ಪ್ರತಿಭಟನೆ ನಡೆಸಿದ್ದಾರೆ. ಅವರು ವೇದಿಕೆ ಮೇಲೆ ನಡೆಸಿದ ಪ್ರತಿಭಟನೆ, ದಿಟ್ಟ ಭಾಷಣ ಗಟ್ಟಿ ಕವನ ಎತ್ತಿದ ಪ್ರಶ್ನೆಗಳು, ಮನು ಮತ್ತವರ ಮರಿಗಳ ನಿರೀಕ್ಷೆ ಹುಸಿಯಾಗಿಸಿದವು. ಮನುಷ್ಯತ್ವ ಪ್ರೀತಿಸುವವರಿಗೆ ಸ್ವಲ್ಪ ಮಟ್ಟಿಗಾದರೂ ಸಮಾಧಾನ ನೀಡಿತು.

ವಿಕ್ರಮ್ ತೇಜಸ್
 9448881313

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here