ಸುರಪುರ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಇಲ್ಲವಾದರೆ ಗ್ರಾಮಗಳು ಅಶಾಂತಿಗೆ ಗುರಿಯಾಗುತ್ತವೆ ಎಂದು ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಬೇಸರ ವ್ಯಕ್ತಪಡಿಸಿದರು.
ನಗರದ ಅಬಕಾರಿ ಉಪ ನಿರೀಕ್ಷಕರ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಮಾರಲಬಾವಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಥೆಚ್ಚವಾಗಿ ನಡೆಯುತ್ತಿದೆ.ಇದನ್ನು ಪ್ರಶ್ನಿಸುವವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ.ಅಕ್ರಮ ಮದ್ಯ ಸೇವನೆಯಿಂದ ಕುಟುಂಬಗಳ ನೆಮ್ಮದಿ ಹಾಳಾಗುವುದಲ್ಲದೆ ಗ್ರಾಮಗಳ ಅಭಿವೃಧ್ಧಿಗೆ ಮಾರಕವಾಗಿದೆ.ಅಲ್ಲದೆ ಆರ್ಥಿಕ ನಷ್ಟವು ಉಂಟಾಗಲಿದೆ.ಮುಖ್ಯವಾಗಿ ಅಕ್ರಮ ಮದ್ಯದಿಂದ ಸಣ್ಣ ಸಣ್ಣ ವಯಸ್ಸಿನ ಯುವಕರು ಮದ್ಯ ಸೇವನೆಯ ಚಟಕ್ಕೆ ದಾಸರಾಗುತ್ತಾರೆ.ಇದು ಕೇವಲ ಒಂದು ಗ್ರಾಮದ ಕತೆಯಲ್ಲದೆ ತಾಲೂಕಿನಾದ್ಯಂತ ಈ ಪಿಡುಗು ಅಂಟಿಕೊಂಡಿದ್ದು ಕೂಡಲೆ ಅಕ್ರಮ ಮದ್ಯ ಸರಬರಾಜು ಮತ್ತು ಮಾರಾಟ ಎರಡನ್ನು ತಡೆಯಬೇಕು ಇಲ್ಲವಾದರೆ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಆಗ್ರಹಿಸಿದರು.
ನಂತರ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಹುಣಸಗಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ,ಸುರಪುರ ತಾಲೂಕು ಗೌರವಾಧ್ಯಕ್ಷ ರಾಜು ದರಬಾರಿ,ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ,ಶಂಕರಗೌಡ ಪಾಟೀಲ ಮಾರಲಬಾವಿ,ಸಿ.ಎಂ.ಹುಣಸಗಿ,ಸುನೀಲ್ ಸುರಪುರ,ಭಾಷಾ ಸುರಪುರ ಸೇರಿದಂತೆ ಅನೇಕರಿದ್ದರು.