ಕಲಬುರಗಿ: ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾಗಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನತೆಯ ನಡುವೆ ಸೇತುವೆಯಂತೆ ಮಾಧ್ಯಮಗಳು ಕೆಲಸ ಮಾಡಬೇಕಾಗಿದೆ ಎಂದು ದಿ ಹಿಂದೂ ಆಂಗ್ಲ ದೈನಿಕದ ನಿವೃತ್ತ ಹಿರಿಯ ಸಹಾಯಕ ಸಂಪಾದಕರಾದ ಶಿವನಂದನ್ ಟಿ. ವಿ. ಅವರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಕಲಬುರಗಿ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ವಿಕೋಪ ನಿರ್ವಹಣೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿಕೋಪ ವರದಿಗಾರಿಕೆಯ ತತ್ವ, ಸವಾಲುಗಳು ಹಾಗೂ ವಿಕೋಪ ಸಂದರ್ಭದಲ್ಲಿ ಮಾಧ್ಯಮ ನೀತಿ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.
ವಿಕೋಪ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ಮಧ್ಯೆ ಯಾವುದೇ ಕಾರಣಕ್ಕೂ ಅಹಂ ಎದುರಾಗಬಾರದು, ಇದರಿಂದ ಸಮಸ್ಯೆ ಹೆಚ್ಚಾಗಿ ಜನರು ಸರಕಾರದ ಮೇಲಿನ ನಂಬಿಕೆ ಕಳೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮಾಧ್ಯಮಗಳು ಮತ್ತು ಸರಕಾರಿ ಅಧಿಕಾರಿಗಳ ಮಧ್ಯೆ ಉತ್ತಮ ಸಂಬಂಧದ ಅವಶ್ಯಕತೆಯಿದೆ. ಅಂದಾಗ ಮಾತ್ರ ವಿಕೋಪದ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳ ಸುಲಭವಾಗಿ ನಿವಾರಿಸುವಲ್ಲಿ ಸಹಾಯಕವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಯಾವುದೇ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿ ನೀಡಬೇಕು. ಆಗ ಮಾತ್ರ ಘಟನೆಗಳ ನೈಜ ವರದಿ ಮಾಡಲು ಸಾಧ್ಯ, ಇಲ್ಲದಿದ್ದರೆ ಸುಳ್ಳು ಸುದ್ದಿಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಎಚ್ಚರಿಸಿದರು. ವಿಕೋಪಗಳ ಸಂದರ್ಭದಲ್ಲಿ ಸಾರ್ವಜನಿಕರ ಸಂಪತ್ತು, ಜೀವಹಾನಿ ತಪ್ಪಿಸುವ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖವಾದ ಪಾತ್ರ ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.
ಇತ್ತೀಚೆಗೆ ವಿದ್ಯುನ್ಮಾನ (ಎಲೆಕ್ಟ್ರಾನ್) ಮಾಧ್ಯಮಗಳು, ಸುದ್ದಿ ನೀಡುವ ಭರಾಟೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸದೆ ಸುದ್ದಿ ಪ್ರಕಟಿಸುತ್ತವೆ ಎಂದು ವಿಷಾದ ಅವರು ವ್ಯಕ್ತಪಡಿಸಿದರು. ವಿಕೋಪ ನಿರ್ವಹಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಅರ್ಎಫ್) ಕಾರ್ಯಾಚರಣೆ ಕುರಿತು ಇತ್ತೀಚೆಗೆ ಕಂಟ್ರೋಲ್ ರೂಂ ತೆರೆಯುವುದರಿಂದ ಮಾಧ್ಯಮಗಳಿಗೆ ಮಾಹಿತಿ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಸುಧಾರಿಸಬೇಕಾಗಿದೆ ಎಂದು ಅವರು ಹೇಳಿದರು.
೧೯೯೩ರಲ್ಲಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಭಾರೀ ಭೂಕಂಪವಾಗಿ ಸಾವು ನೋವು-ಸಂಭವಿಸಿತು. ಕಂಪನದ ಕೇಂದ್ರ ಬಿಂದುವಾದ ಕಿಲಾರಿ ಗ್ರಾಮ ನಾಮಾಶೇಮವಾಗಿತ್ತು. ನಾನು ೫ ದಿನಗಳ ಕಾಲ ವರದಿಗೆ ತೆರಳಿದ್ದಾಗ ಸಾಕಷ್ಟು ಅನುಭವ ಉಂಟಾಯಿತು ಎಂದು ಆ ಕರಾಳ ದಿನಗಳನ್ನು ಅವರು ಮೆಲುಕು ಹಾಕಿದರು.
ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷರಾದ ಭವಾನಿ ಸಿಂಗ್ ಅವರು, ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕೋಪಗಳೆಂದರೆ ಕೇವಲ ನೆರೆಗೆ ಸಂಬಂಧಿಸಿದ್ದಲ್ಲ, ಪ್ರಕೃತಿಯಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ವಿಕೋಪಗಳೆಂದು ಪರಿಗಣಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಲಬುರಗಿ ಜಿಲ್ಲೆಯಲ್ಲಿ ಅತಿಯಾದ ಬಿಸಿಲಿನ ಪ್ರಭಾವದಿಂದ ಎದುರಾಗುವ ಸಮಸ್ಯೆ ಕೂಡ ವಿಕೋಪಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಪರ್ತಕರ್ತರು ಜನರ ಸಮಸ್ಯೆ ನಿವಾರಿಸುವಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿರ್ದೇಶಕರಾದ ಡಾ. ದಿಲೀಪ್ಕುಮಾರ್ ಎಂ. ಅವರು ವಿಕೋಪ ನಿರ್ವಹಣೆಯ ಮೂಲ ತತ್ವಗಳು ಹಾಗೂ ವಿಕೋಪ ನಿರ್ವಹಣಾ ಕಾಯ್ದೆಗಳ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಸಿದ್ದೇಶ್ವರಪ್ಪ ಜಿ.ಬಿ. ಸೇರಿದಂತೆ ಹಿರಿಯ ಪರ್ತಕರ್ತರು, ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ತರಬೇತಿ ಕೇಂದ್ರದ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಅಂಬೋಜಿ ಅವರು ಸ್ವಾಗತಿಸಿದರು. ತಹಸೀಲ್ದಾರ್ ಮತ್ತು ಉಪ ಪ್ರಾಂಶುಪಾಲರಾದ ನಾಗಮ್ಮ ಅವರು ವಂದಿಸಿದರು.