ಕಲಬುರಗಿ: ತ್ರಿಪದಿ ಕವಿ ಸರ್ವಜ್ಞನ ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದು, ಪ್ರತಿಯೊಬ್ಬರೂ ಅವರ ವಿಚಾರಧಾರೆ ತಿಳಿಯುವುದು ಅತ್ಯಗತ್ಯ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ಹೊರವಲಯದ ಶ್ರೀ ಕಾಡಸಿದ್ಧೇಶ್ವರ ಶಿಕ್ಷಣ ಸಂಸ್ಥೆಯು ನಗರದ ರಾಮ ನಗರದಲ್ಲಿ ‘ಸರ್ವಜ್ಞ ಜಯಂತಿ’ ನಿಮಿತ್ತ ವಚನಾಧರಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವ ವಿತರಣೆ ಮಾಡಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕದ ಮೇರು ಕವಿ ಸರ್ವಜ್ಞನ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಜನರ ಆಡುಭಾಷೆಯಲ್ಲಿ ಸರಳ ಹಾಗೂ ಸುಲಭವಾಗಿ ಅರ್ಥವಾಗುವಂತೆ ತಮ್ಮ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ಗುರುತಿಸಿ, ಅದನ್ನು ತಿದ್ದುವ ಪ್ರಯತ್ನ ಮಾಡಿದ್ದರು. ಅವರ ವಚನಗಳು ಭಾಷೆ, ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿ ಹೆಚ್ಚಿಸಿವೆ. ಇಂಥ ಮಹಾನ್ ವ್ಯಕ್ತಿಯ ವಿಚಾರಧಾರೆಗಳನ್ನು ಈ ದೇಶ, ಸಮಾಜ ರೂಪಿಸುವಂಥ ಇಂದಿನ ಯುವ ಜನತೆ ಅಳವಡಿಸಿಕೊಂಡು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಬಾಡಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಸ್.ವೈ.ಪಾಟೀಲ, ಕಿರಣಕುಮರ ಜಿ.ಎಂ., ನ್ಯಾಯವಾದಿ ಶ್ರೀಶೈಲ್ ಮೂಲಗೆ ಇತರರು ವೇದಿಕೆ ಮೇಲಿದ್ದರು.
ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳು ಪಡೆದುಕೊಂಡರು.