ಕಲಬುರಗಿ: ಅಮೆರಿಕದ ತೀವ್ರ ಒತ್ತಡಕ್ಕೆ ಒಳಗಾಗಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಶೇಕಡ 85 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟಕ್ಕೆ ಒಳಗಾಗುತಿದ್ದು, ಚುನಾವಣಾ ವರ್ಷದಲ್ಲಿ ಇರುವ ಟ್ರಂಪ್ ಅವರು ಅಮೆರಿಕದಲ್ಲಿ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ರೈತ ಮುಖಂಡ, ಸಿಪಿಐಎಂ ಜಿಲ್ಲಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ವಿವಿಧ ರೈತಪರ ಸಂಘಗಳ ಮುಖಂಡದ ನೇತೃತ್ವದಲ್ಲಿ ಅಮೆರಿಕ ಅಧ್ಯಕ್ಷ ಗೋ ಬ್ಯಾಕ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಆಹ್ವಾನಿಸಿ, ಹೈನುಗಾರಿಕೆ ಮತ್ತು ಕುಕ್ಕುಟೋಧ್ಯಮದ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಅಖಿಲ ಭಾರತ ಕಿಸಾನ್ ಸಭಾ ವಿರೋಧ ವ್ಯಕ್ತಪಡಿಸಿ, ಒಪ್ಪಂದ ಭಾರತಕ್ಕೆ ವಾರ್ಷಿಕ ಅಂದಾಜು 42000 ಕೋಟಿ ರೂಪಾಯಿಗಳ ಹೈನು ಉತ್ಪನ್ನಗಳು, ಕೋಳಿ ಉತ್ಪನ್ನಗಳು, ಟರ್ಕಿ ಮತ್ತಿತರ ಕೃಷಿ ಉತ್ಪನ್ನಗಳ ವಸ್ತುಗಳು ಆಮದಾಗುತ್ತವೆ. ಸರ್ಕಾರದ ಈ ನಡೆಯಿಂದ ಸುಮಾರು ನೂರು ಮಿಲಿಯನ್ ಹೈನುಗಾರಿಕಾ ಬಡ ರೈತರು, ಮಹಿಳೆಯರು ತೊಂದರೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.
ದೇಶದ ಜಾಗತಿಕ ಹಣಕಾಸು ಪರಿಸ್ಥಿತಿ ಕುಸಿಯುತ್ತಿರುವ ಈ ಸಮಯದಲ್ಲಿ ಭಾರತದಲ್ಲಿ ಈ ಒಪ್ಪಂದ ಜಾರಿಯಾಗುತ್ತಿದನ್ನು ಖಂಡಿಸಿದರು. ಸರ್ಕಾರದ ಈ ನಡೆಯನ್ನು ಹಿಂತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೇಟ್ಟಿ, ಕಿಸಾನ್ ಸಭಾದ ಜಿಲ್ಲಾಧ್ಯಕ್ಷರಾದ ಮೌಲಾ ಮುಲ್ಲಾ, ಸಂಘದ ಕಾರ್ಯದರ್ಶಿ ಅಶೋಕ ಮ್ಯಾಗೆರಿ, ಪಾಂಡುರಂಗ ಮಾವಿನ್, ಮಲ್ಕಪ್ಪ ಹಿಂದಿನಮನಿ, ಸುಧಾಮ ಧನ್ನಿ, ಮಲ್ಲಣ್ಣಗೌಡ ಬನ್ನೂರ, ಶಾಂತಪ್ಪ ಪಾಟೀಲ, ಸಿದ್ದಯ್ಯ ಸ್ವಾಮಿ, ಸುಭಾಷ ಜೇವರ್ಗಿ, ಗೌರಮ್ಮ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.