ಕಲಬುರಗಿ: ಯುವ ಶಕ್ತಿ ಅದಮ್ಯವಾದ ಚೈತನ್ಯವನ್ನು ಹೊಂದಿದ್ದು, ಅದು ದೇಶದ ಅಭಿವೃದ್ಧಿಗೆ ಪೂರಕವಾದಲ್ಲಿ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ನಾಗಮಾಣಿಕ್ಯ ಮತ್ತು ಸಿದ್ಧಾರ್ಥ ಸಮಾಜಕಾರ್ಯ ಮಹಾವಿದ್ಯಾಲಯಗಳು ತಾಲೂಕಿನ ಖಾಜಾ ಕೋಟನೂರ ಗ್ರಾಮದಲ್ಲಿ ಒಂದು ವಾರದವರೆಗೆ ಏರ್ಪಡಿಸಿದ ‘ಸಮಾಜಕಾರ್ಯ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಕೈಗೊಳ್ಳುವ ದುಡಿಮೆ ದೇಶದ ಒಳಿತಿಗಾಗಿ ಸಲ್ಲುತ್ತದೆ. ವಿದ್ಯಾರ್ಥಿಗಳು ನಿಷ್ಠೆಯಿಂದ ದುಡಿಯುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಪಿಡಿಎ ಎಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಸಾಹಿತ್ಯ ಪ್ರೇಮಿ ರವೀಂದ್ರಕುಮಾರ ಭಂಟನಳ್ಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾತಿ, ಮತ, ಪಂಥ, ಪಂಗಡಗಳ ಭೇದ-ಭಾವ ದೂರ ಮಾಡಿ ಎಲ್ಲರೂ ಒಂದೇ ಎಂಬ ಭಾವ ಮೂಡಬೇಕು. ಸಮಾಜದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಲು ಸಮಾಜಕಾರ್ಯ ಶಿಬಿರವು ಸೂಕ್ತ ವೇದಿಕೆಯಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದರು.
ಹಿರಿಯ ಕವಿ ನಾಗೇಂದ್ರಪ್ಪ ಮಾಡ್ಯಾಳೆ, ಸಂಸ್ಥೆ ಆಡಳಿತಾಧಿಕಾರಿ ಅರವಿಂದ ಗೋಟೂರ, ಗ್ರಾಮದ ಪ್ರಮುಖರಾದ ಶಾಂತಯ್ಯ ಸ್ವಾಮಿ, ಶಿವಲಿಂಗಪ್ಪ ಮಡಿವಾಳ, ಕತಲಪ್ಪ ನೂಲಕರ್, ಶ್ರೀಕಾಂತ ಪೊಲೀಸ್ ಪಾಟೀಲ, ವೈಜನಾಥ ಡಿಗ್ಗಿ, ಹಣಮಂತರಾವ ಕುಲಕರ್ಣಿ, ಬಸವರಾಜ ಮಡಿವಾಳ, ನಿಜಲಿಂಗಪ್ಪಾ ಪೂಜಾರಿ, ರೇವಣಸಿದ್ಧಪ್ಪಾ ಕಣಸೂರ, ಸಿದ್ದಪ್ಪಾ ಸಾಹುಕಾರ ಸಾಹು, ಆನಂದಕುಮಾರ ಎಂ.ಜಮಾದಾರ ವೇದಿಕೆ ಮೇಲಿದ್ದರು.
ನಾಗಮಾಣಿಕ್ಯ ಸಮಾಜಕಾರ್ಯ ಮಹಾವಿದ್ಯಾಲಯದ ಅಧ್ಯಕ್ಷ ಮಹೇಶಕುಮಾರ ಮಾಡಗಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಜ್ಯೋತಿ ಟಿ., ಶಿವಶರಣು ಹುಬ್ಬಳ್ಳಿ, ಪಿ.ಈ.ರಾಂಪೂರೆ, ಸನ್ಮತಿ ಎಂ.ಅಂಬಲಗಾ, ಜಗದೀಶ ರಾಠೋಡ, ಪ್ರಿಯಾಂಕಾ ಬೆಣ್ಣೂರಕರ್, ಮೋಹನ್ ರಾಠೋಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.