ಕಲಬುರಗಿ: ಅಂಬೇಡ್ಕರ್ ಅವರ ಹೋರಾಟದ ಪ್ರತಿಫಲವಾಗಿ ಇಂದು ಕೈಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದೇವೆ. ಶೈಕ್ಷಣಿಕವಾಗಿ ಮುಂದೆ ಬಂರುತಿದ್ದೇವೆ. ಮತದಾನ ಹಕ್ಕು, ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಪಡೆಯುತಿದ್ದೇವೆ, ಅವರು ನೀಡಿರುವ ಸಂವಿಧಾನ ರಕ್ಷಣೆ ಮಾಡುವಂತಹ ಕಾಲ ಬಂದಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಇಲ್ಲಿನ ಹೇರೂರ ಕೆ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಪುತ್ಥಳಿ ಕೇವಲ ಉದ್ಘಾಟನೆಗಳಿಗೆ ಸೀಮಿತವಾಗಬಾರದು, ಅವರ ಹೋರಾಟ ಪ್ರತಿದಿನ ನಿಮ್ಮಲ್ಲಿ ಹರಿದಾಡುತ್ತಿರಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಅವರ 56 ವರ್ಷಗಳ ಹೋರಾಟದ ಫಲವಾಗಿ ನಾವು ಇಂದು ಮುಂದೆ ಬರಲು ಸಾಧ್ಯವಾಗಿದೆ. ಮೀಸಲಾತಿಯಿಂದ ಸಾಕಷ್ಟು ನೌಕರಿಗಳನ್ನು ಪಡೆದಿದ್ದೇವೆ, ನಾವು ಎಷ್ಟು ನೆನೆಸಿಕೊಂಡರೂ ಕಡಿಮೆ, ಅವರ ಹೋರಾಟ ಕೇವಲ ಶೋಷಿತರಿಗೆ ದಲಿತರಿಗೆ ಸೀಮಿತವಾಗಿರಲಿಲ್ಲ. ಎಲ್ಲ ಸಮುದಾಯದ ಏಳಿಗೆ ದೂರದೃಷ್ಠಿ ಇಟ್ಟುಕೊಂಡಿದ್ದರು. ಅವರೊಬ್ಬ ಆರ್ಥಿಕ ತಜ್ಞರು ಕೂಡ ಆಗಿದ್ದರು. 1932 ರಲ್ಲಿ ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ ಸ್ಥಾಪನೆ ಮಾಡಿದರು ಎಂದು ತಿಳಸಿದರು.
ಬಸವಣ್ಣನವರು ಮಹಿಳೆಯರಿಗೆ ಅನುಭವ ಮಂಟಪದ ಮೂಲಕ 12 ನೇ ಶತಮಾನದಲ್ಲಿಯೇ ಸಮಾನತೆಗಳನ್ನು ನೀಡಲು ಹೋರಾಡಿದ್ದರು. ಬಳಿಕ ಅದನ್ನೇ ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿ ಜಾರಿಗೆ ತರುವ ಕಾರ್ಯಮಾಡಿದರು ಎಂದರು.
ಬಹುವರ್ಷಗಳ ಹೋರಾಟದಿಂದ ಇಂದು ಈ ಗ್ರಾಮದಲ್ಲಿ ಪುತ್ಥಳಿ ಉದ್ಘಾಟಿಸಲಾಗುತ್ತಿದೆ ಅಂಬೇಡ್ಕರ್ ಅವರ ಹೋರಾಟದ ಇತಿಹಾಸ ಹೊಸ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ,ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಅಲ್ಲಮಪ್ರಭು ಪಾಟೀಲ್, ಶಾಸಕ ಎಂ.ವೈ ಪಾಟೀಲ ಬುದ್ಧವಿಹಾರದ ಗುರುಗಳು ಸೇರಿದಂತೆ ದಲಿತ ಮುಖಂಡರು ಇದ್ದರು.