ಕಲಬುರಗಿ: ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗ ಎಂದು ಪರಿಗಣಿಸಲ್ಪಡುವ ಮಾಧ್ಯಮವನ್ನು ಪ್ರಸ್ತುತ ನಡೆಯುತ್ತಿರುವ ಕಲಾಪಕ್ಕೆ ನಿರ್ಬಂಧಿಸುವುದು ಸಮಂಜಸವಾದ ಕ್ರಮವಲ್ಲ ಹಾಗಾಗಿ ಈ ಕೂಡಲೇ ನಿರ್ಬಂಧವನ್ನು ವಾಪಸ್ ಪಡೆಯುವಂತೆ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಂವಿಧಾನದ ಆಶಯದ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚಿಸಲು ನಿರ್ಧರಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗವಾದ ಮಾಧ್ಯಮದ ( ಎಲೆಕ್ಟ್ರಾನಿಕ್ ಹಾಗೂ ಪ್ರಿಂಟ್) ಪ್ರತಿನಿಧಿಗಳಿಗೆ ಕಲಾಪದ ಒಳಗಡೆ ಪ್ರವೇಶ ನಿರ್ಬಂಧಿಸಿರುವ ಕ್ರಮ ಸರಿಯಾದುದದಲ್ಲ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಕಲಾಪದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳನ್ನು ಚರ್ಚಿಸುವ ಹಾಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನರು ತಿಳಿದುಕೊಳ್ಳಬೇಕು ಅದು ಕೇವಲ ಮಾಧ್ಯಮಗಳಿಂದ ಸಾಧ್ಯ ಹಾಗಾಗಿ ಮಾಧ್ಯಮಗಳಿಗೆ ನಿರ್ಬಂಧಿಸಿದರೆ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಜನರಿಗೆ ಕಲಾಪಗಳ ಮಾಹಿತಿ ದೊರಕದಂತೆ ತಡೆದಂತಾಗುತ್ತದೆ ಹಾಗಾಗಿ ಮಾಧ್ಯಮಗಳಿಗೆ ವರದಿ ಮಾಡಲು ಅವಕಾಶ ನೀಡಬೇಕೆಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.