ಯಾದಗಿರಿ,ಸುರಪುರ: ಸಾಲ ಬಾಧೆಗೆ ಬೇಸತ್ತು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ.
ಕುಂಬಾರಪೇಟೆಯ ರೈತ ತಿರುಮಣ್ಣ ಯಲ್ಲಪ್ಪ ಕವಲಿ (೫೩ ವರ್ಷ) ಮೃತ ದುರ್ದೈವಿಯಾಗಿದ್ದು.ಮೃತ ರೈತನಿಗೆ ೧ ಎಕರೆ ಸ್ವಂತ ಜಮೀನು ಹಾಗು ಮೂರು ಎಕರೆ ಪಿತ್ರಾರ್ಜಿತ ಜಮೀನಿದ್ದು,ಈ ಮೂರು ಎಕರೆಯಲ್ಲಿ ಮೃತನ ಮೂರು ಜನ ಸಹೋದರರು ಪಾಲುದಾರರಾಗಿದ್ದಾರೆ.
ಇನ್ನುಳಿದಂತೆ ೩ ಎಕರೆ ಬೇರೆಯವರ ಜಮೀನು ಲೀಜಿಗೆ ಪಡೆದು ವ್ಯವಸಾಯ ಮಾಡಿಕೊಂಡಿದ್ದು,ಸತತ ಬರಗಾಲದಿಂದ ನೊಂದ ರೈತರಂತೆ ಮೃತ ತಿರುಮಣ್ಣ ಕೂಡ ಖಾಸಗಿಯವರ ಬಳಿಯಲ್ಲಿ ಸುಮಾರು ೪ ಲಕ್ಷ ರೂಪಾಯಿ ಸಾಲ ಪಡೆದಿದ್ದು ತೀರಿಸಲಾಗದೆ ನಿತ್ಯವು ಚಿಮತಿಸುತ್ತಿದ್ದನು.ಸಾಲಕ್ಕೆ ಹೆದರದಂತೆ ಮೃತನ ಕುಟುಂಬಸ್ಥರು ಧೈರ್ಯ ಹೇಳಿದರು ನೊಂದ ರೈತ ಸಾಲಕ್ಕೆ ಹೆದರಿ ದಿನಾಂಕ ೦೭ರ ಶನಿವಾರ ಸಂಜೆ ಮನೆಯಲ್ಲಿದ್ದ ಕ್ರಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣವನ್ನು ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ನಾವೆಲ್ಲ ರೈತರು ಸಾಲದಿಂದ ನಿತ್ಯವು ನರಳುತ್ತಿದ್ದೆವೆ. ಇಂದು ತಿರುಮುಣ್ಣ ನಾಳೆ ಇನ್ಯಾರೊ ಅನ್ನೊ ಸ್ಥಿತಿಯಲ್ಲಿದ್ದೆವೆ.ಆದರೆ ಸರಕಾರಗಳು ಮಾತ್ರ ಮೊಸಳೆ ಕಣ್ಣಿರು ಹಾಕುವ ನಾಟಕ ಮಾಡುತ್ತಿವೆ.
ತಿರುಮಣ್ಣನ ಕುಟುಂಬಕ್ಕೆ ಈಗ್ಯಾರು ದಿಕ್ಕು ಎನ್ನುವುದನ್ನು ಸರಕಾರ ಗಂಭೀರವಾಗಿ ಯೋಚಿಸಬೇಕಿದೆ.ಅಲ್ಲದೆ ಸರಕಾರ ತಿರುಮಣ್ಣನ ಕುಟುಂಬಕ್ಕೆ ಕನಿಷ್ಟ ೨೦ ಲಕ್ಷ ಪರಿಹಾರ ನೀಡಬೇಕೆಂದು ಹಾಗು ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.