ಶಹಾಬಾದ: ಶೌಚಾಲಯಕ್ಕೆ ಹೋಗುತ್ತಿದ್ದ ವೃದ್ಧ ಮಹಿಳೆಯ ಮೇಲೆ ಹಂದಿಗಳು ದಾಳಿ ಮಾಡಿದ್ದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ನಗರದ ವಾರ್ಡ ನಂ.೧೬ರಲ್ಲಿ ಎಂದಿನಂತೆ ಬಹಿರ್ದೆಸೆಗೆ ಹೋಗುತ್ತಿದ್ದ ಬಸಮ್ಮ ಮಡಿವಾಳ ಎಂಬ ಮಹಿಳೆಯ ಮೇಲೆ ಏಕಾಏಕಿ ಹಂದಿಗಳು ದಾಳಿ ಮಾಡಿವೆ.ನೆಲಕ್ಕೆ ಬಿದ್ದರೂ ಮಹಿಳೆಯ ಮೇಲೆ ನಿರಂತರವಾಗಿ ದಾಳಿ ಮಾಡಿದಾಗ ಕೈಗಳಿಂದ ತಡೆಯುವಲ್ಲಿ ಮುಂದಾಗಿದ್ದಾರೆ.ಕೈಗಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಮಾಂಸ ಹೊರಬಂದಿದೆ.ಸ್ಥಳೀಯರು ಹಂದಿಗಳ ದಾಳಿಯಿಂದ ಬಚಾವ್ ಮಾಡಿದ್ದಾರೆ. ಅಲ್ಲದೇ ಮಹಿಳೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಆದರೆ ಇದು ನಿರಂತರವಾಗಿ ಜನರ ಮೇಲೆ ದಾಳಿ ಮಾಡುತ್ತಿವೆ.ಈ ಬಗ್ಗೆ ಅನೇಕ ಬಾರಿ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಈ ರೀತಿ ಅನೇಕ ಬಾರಿ ದಾಳಿ ನಡೆದಿದೆ. ಇಷ್ಟೊಂದು ಗಂಭೀರ ಸ್ವರೂಪದ ದಾಳಿ ನಡೆದಿರಲಿಲ್ಲ. ಇಲ್ಲಿನ ಬಡಾವಣೆಯ ಜನರು ಕೊರೊನಾ ಭೀತಿಯಿಂದ ಕಂಗೆಟ್ಟಿದ್ದರು. ಈಗ ಹಂದಿಗಳಿಂದ ಜನರು ಮನೆಯಿಂದ ಹೊರಬರದಂತೆ ಆತಂಕಗೊಂಡಿದ್ದಾರೆ.ಕೂಡಲೇ ಹಂದಿಗನ್ನು ಹಿಡಿದು ಇಲ್ಲಿಂದ ದೂರ ಸಾಗಿಸಿ ಎಂದು ಬಡಾವಣೆಯ ಜನರು ಅಲವತ್ತುಕೊಂಡಿದ್ದಾರೆ. ಕೂಡಲೇ ಪೌರಾಯುಕ್ತ ವೆಂಕಟೇಶ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹಂದಿ ಮಾಲೀಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.