ಕಲಬುರಗಿ: ಕೊರಣ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆ ಮೂರನೇ ಹಂತ ನಮ್ಮ ಮುಂದಿದೆ. ಇದನ್ನು ತಡೆಗಟ್ಟುವುದು ಏಕೈಕ ಮಾರ್ಗ ಸಾಮಾಜಿಕ ಅಂತರ ಕಾಪಾಡುವುದು. ಹೀಗಾಗಿ ಜಿಲ್ಲೆಯ ಜನತೆ ಅನಾವಶ್ಯಕವಾಗಿ ಮನೆಯಿಂದ ಹೊರ ಬರಬಾರದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಮಂಗಳವಾರ ತುಂಬಾ ಕಳಕಳಿಯಿಂದ ಮನವಿ ಮಾಡಿದ್ದಾರೆ.
ಈಗಲೇ ಮುನ್ನೆಚ್ಚರಿಕೆ ವಹಿಸಿದ್ದಲ್ಲಿ ಮೂರನೇ ಹಂತದಲ್ಲಿ ಕೊರೋನಾ ಸೋಂಕು ಸಮುದಾಯದಲ್ಲಿ ಹರಡುವುದನ್ನು ಸಲೀಸಾಗಿ ತಡೆಗಟ್ಟಿ ಅಪಾಯದಿಂದ ಪಾರಾಗಬಹುದು. ಇದಕ್ಕೆ ಜಿಲ್ಲೆಯ ಜನತೆಯ ಸಹಕಾರ ಅತ್ಯವಶ್ಯಕ.
ಅಗತ್ಯ ಸೇವೆಗಳು ಲಭ್ಯವಿರುತ್ತವೆ, ಇದರಲ್ಲಿ ಗೊಂದಲ ಬೇಡ. ಅಗತ್ಯ ಸೇವೆಗಾಗಿ ಮಾತ್ರ ಹೊರಬನ್ನಿ. ಉಳಿದಂತೆ ಇನ್ನಿತರ ಯಾವುದೇ ಕೆಲಸಗಳಿಗೆ ಮನೆಯಿಂದ ದಯವಿಟ್ಟು ಹೊರ ಬರಬೇಡಿ.
ಈ ಮುಂಚೆ ಹಲವು ಬಾರಿ ಜಿಲ್ಲಾಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಹಲವಾರು ಬಾರಿ ಮನವಿ ಮಾಡಲಾಗಿದೆ, ಮುಂದುವರೆದು ಸಿ.ಅರ್.ಪಿ.ಸಿ 144 ನಿಷೇಧಾಜ್ಞೆ ಜಾರಿಗೊಳಿಸಿದ್ದರು ಸಹ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಜನರು ರಸ್ತೆ ಮೇಲೆ ತಿರುಗಾಡುತ್ತಿರುವುದು ತುಂಬಾ ಬೇಸರ ಮತ್ತು ನೋವು ತಂದಿದೆ.
ಆರೋಗ್ಯ ಪರಿಸ್ಥಿತಿಯ ಈ ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೆ ಸರಿಯುವುದಿಲ್ಲ ಎಂಬ ಕಠಿಣ ಎಚ್ಚರಿಕೆಯನ್ನು ಜಿಲ್ಲೆಯ ಜನರಿಗೆ ತಿಳಿಸಲು ಬಯಸುತ್ತೇನೆ.
ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಿದ್ದರು ಸಹ ಮನೆಯಿಂದ ಹೊರಬಂದು ತಿರುಗಾಡುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಮಂಗಳವಾರ ಈ ಆದೇಶ ಉಲ್ಲಂಘಿಸಿದ ಮೂವರ ಮೇಲೆ ಐ.ಪಿ.ಸಿ. ಕಲಂ 188 ಮತ್ತು 271 ರನ್ವಯ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ ಕಾನೂನು ಕ್ರಮ ಕೈಗೊಂಡಿದೆ.
ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸದೇ ಮನೆಯಿಂದ ಹೊರಗಡೆ ಬಂದು ಆರಾಮವಾಗಿ ಓಡಾಡಿದಲ್ಲಿ ತಾವು ಕೇವಲ ತಮ್ಮ ಕುಟುಂಬದವರನ್ನು ಮಾತ್ರ ಅಪಾಯದಲ್ಲಿ ಸಿಲುಕಿಸುತ್ತಿಲ್ಲ ಬದಲಾಗಿ ಇಡೀ ಜಿಲ್ಲೆಯ ಜನತೆಗೆ ತಾವು ಕಂಟಕರಾಗುತ್ತೀರಿ ಎಂಬುದನ್ನು ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಯು ಅರಿಯಬೇಕಿದೆ.
ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬಂದಲ್ಲಿ ವಾಹನಗಳನ್ನು ವಶಕ್ಕೆ ಪಡೆಯುವುದಲ್ಲದೆ ಅಂತವರ ಮೇಲೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತದ ಮುಂದಿನ ಆದೇಶದವರೆಗೂ ಯಾರು ಮನೆಯಿಂದ ಹೊರಗಡೆ ಬರಬಾರದು. ಇದು ಮುಂದಿನ ಒಂದು ತಿಂಗಳ ಕಾಲ ವರೆಗೂ ಆಗಬಹುದು .