ಸುರಪುರ: ಕೊರೊನಾ ವೈರಸ್ ಹರಡದಂತೆ ತಡೆಯಲು ಭಾರತ ಲಾಕ್‌ಡೌನ್ ಆಚರಿಸಲಾಗುತ್ತಿದ್ದು,ಇದರಿಂದಾಗಿ ಅನೇಕರಿಗೆ ಸಮಸ್ಯೆಯುಂಟಾಗಿದೆ.ನಗರದಲ್ಲಿ ಆಹಾರದ ಅವಶ್ಯವಿರುವ ನಿರ್ಗತಿಕರು,ವಲಸಿಗರು ಮತ್ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಈ ನೆರವಿನ ಕೇಂದ್ರಕ್ಕೆ ಬಂದು ಆಹಾರ ಮತ್ತು ವಸತಿ ಸೌಲಭ್ಯ ಪಡೆಯಬಹುದು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.
ನಗರದ ದರಬಾರ ಶಾಲೆಯಲ್ಲಿ ತಾಲೂಕು ಆಡಳಿತದಿಂದ ತೆರೆಯಲಾದ ನೆವಿನ ಕೇಂದ್ರಕ್ಕೆ ಆಹಾರ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ,ಕೊರೊನಾ ಎನ್ನುವುದು ಮಹಾಮಾರಿಯಾಗಿದ್ದು ಎಲ್ಲರು ತಮ್ಮ ಮನೆಗಳಲ್ಲಿದ್ದು ವೈರಸ್‌ನಿಂದ ದೂರವಿರಿ,ಅನಾವಶ್ಯಕವಾಗಿ ಹೊರಗಡೆ ಬರದಂತೆ ಸಾರ್ವಜನಿಕರು ಮತ್ತು ವಿಶೇಷವಾಗಿ ಯುವಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಮಾತನಾಡಿ,ನೆರವಿನ ಕೇಂದ್ರದಲ್ಲಿ ನಿರ್ಗತಿಕರಿಗೆ ಮತ್ತು ವಲಸಿಗರಿಗೆ ಆಹಾರ ಮತ್ತು ವಸತಿ ನೆರವಿಗಾಗಿ ಕೇಂದ್ರ ತೆರೆದಿದ್ದು ನಾಳೆಯಿಂದ ನಗರಸಭೆ ವಾಹನದ ಮೂಲಕ ನಗರದಾದ್ಯಂತ ಪ್ರಚಾರ ನಡೆಸಲಾಗುವುದು.ಅಲ್ಲದೆ ಗ್ರಾಮೀಣ ಭಾಗದಲ್ಲೂ ಪರಿಹಾರ ಕೇಂದ್ರದ ಅವಶ್ಯಕತೆ ಕಂಡುಬಂದಲ್ಲಿ ಅಲ್ಲಿಯೂ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡ ಭೀಮಣ್ಣ ಬೇವಿನಾಳ,ಚುನಾವಣಾ ವಿಭಾಗದ ಅಧಿಕಾರಿ ಅಶೋಕ ಸುರಪುರಕರ್,ನಗರಸಭೆ ಸದಸ್ಯ ನಾಸೀರ್ ಕುಂಡಾಲೆ, ಶಿಕ್ಷಕ ಸೋಮರಡ್ಡಿ ಮಂಗಿಹಾಳ,ಶರಣು ನಾಯಕ,ಪ್ರದೀಪ ನಾಲ್ವಡೆ,ಭೀಮು ಯಾದವ ಇತರರಿದ್ದರು.