ವಾಡಿ: ಖಡಕ್ ಬಿಸಿಲಿಗೆ ಕಾದ ಹೆಂಚಿನಂತಾದ ಪಟ್ಟಣದ ಬೀದಿಗಳಿಗೆ ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಮಂಡಳಿ, ಟ್ಯಾಂಕರ್ ಮೂಲಕ ನೀರು ಸಿಂಪರಣೆ ಮಾಡುವ ಮೂಲಕ ತಂಪಾಗುವಂತೆ ಮಾಡಿತು.
ಉರಿಯುವ ಸೂರ್ಯನ ಪ್ರತಾಪಕ್ಕೆ ಸಿಕ್ಕು ಸಿಮೆಂಟ್ ರಸ್ತೆಗಳು ಕೆಂಡ ಕಾರುತ್ತಿವೆ. ಏಪ್ರಿಲ್ ತಿಂಗಳು ಆರಂಭವಾಗುತ್ತಿದ್ದಂತೆ ರಣ ಬಿಸಿಲು ಜನರ ಬದುಕು ಬಸವಳಿಯುವಂತೆ ಮಾಡುತ್ತಿದೆ. ವಿಪರೀತ ಬಿಸಲ ಶಕೆಯಿಂದಾಗಿ ಜನರು ಬೆವರುವಂತಾಗಿದೆ. ಮನೆಯಲ್ಲಿನ ಕೂಲರ್ ಮತ್ತು ಎಸಿ ಯಂತ್ರಗಳು ತಂಪು ಗಾಳಿ ನೀಡುವಲ್ಲಿ ಸೋಲುತ್ತಿವೆ. ಇಂತಹ ಪರಸ್ಥಿಯಲ್ಲಿ ಕೊರೊನಾ ಲಾಕ್‌ಡೌನ್ ಘೊಷಣೆಯಾಗಿದ್ದು, ಮನೆಯ ಹೆಂಚುಗಳು ಕಾದು ಧಗೆ ಉಂಟಾಗುತ್ತಿದೆ. ಬೀದಿ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿವೆಯಾದರೂ ಕೆಂಡದಂತಾಗಿ ಕಾವು ತಾಗಿಸುತ್ತಿವೆ.
ಟ್ಯಾಂಕರ್‌ಗಳ ಮೂಲಕ ಪಟ್ಟಣದ ವಿವಿಧ ರಸ್ತೆಗಳಿಗೆ ನೀರು ಸಿಂಪರಣೆಗೆ ಮುಂದಾಗಿರುವ ಎಸಿಸಿ ಕಂಪನಿಯ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಗೆ ನೀರು ಸಿಂಪರಣೆ ಮಾಡುವುದರಿಂದ ತಂಪು ವಾತಾವರಣ ನಿರ್ಮಾಣವಾಗುತ್ತದೆ. ರಸ್ತೆ ನೀಡುತ್ತಿದ್ದ ಕಾವು ಪ್ರಮಾಣ ತಗ್ಗುತ್ತದೆ. ಹೀಗಾಗಿ ರಸ್ತೆಗೆ ನೀರು ಸಿಂಪರಣೆಗೆ ಮುಂದಾಗಿದ್ದೇವೆ ಎಂದು ಎಸಿಸಿ ಕಂಪನಿಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೆದಲಾ ಪ್ರತಿಕ್ರೀಯಿಸಿದ್ದಾರೆ.