ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ನಿರ್ಗತಿಕರು, ಭಿಕ್ಷುಕರು ಹಾಗೂ ನಿರ್ವಸತಿಯರಿಗೆ ಸಾರ್ವಜನಿಕರು, ದಾನಿಗಳು ಅನುಕಂಪದಿಂದ ನೇರವಾಗಿ ಆಹಾರ ನೀಡಬಾರದು. ಬದಲಾಗಿ ಆಹಾರ ಧಾನ್ಯ ನೀಡಲಿಚ್ಛಿಸುವ ದಾನಿಗಳು ಆಹಾರ ಸಮಿತಿಗೆ ಸಂಪರ್ಕಿಸಿ ನೀಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. 144 ನಿಷೇಧಾಜ್ಞೆ ಇರುವುದರಿಂದ ಕೆಲವು ವ್ಯಕ್ತಿಗಳು, ಸಂಘ ಸಂಸ್ಥೆಗಳು ತಯಾರಿಸಿದ ಆಹಾರವನ್ನು ನೇರವಾಗಿ ಭಿಕ್ಷುಕರಿಗೆ, ನಿರ್ಗಕತಿಕರಿಗೆ ನೀಡುತ್ತಿರುವುದು ನಿಷೇಧಾಜ್ಞೆ ಉಲ್ಲಂಘಿಸಿದಂತಾಗುತ್ತದೆ.
ನಿರ್ಗತಿಕರು, ಭಿಕ್ಷುಕರು ಹಾಗೂ ನಿರ್ವಸತಿಯರಿಗೆ ಆಹಾರ ಧಾನ್ಯ ನೀಡಲಿಚ್ಚಿಸುವ ದಾನಿಗಳು ನೇರವಾಗಿ ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಡಿ. ಎಂ. ಪಾಣಿ-9449985855ಗೆ ಸಂಪರ್ಕಿಸಿ ಕೇವಲ ದವಸ ಧಾನ್ಯಗಳನ್ನು ನೀಡಿ ಸ್ವೀಕೃತಿ ಪಡೆಯಬಹುದಾಗಿದೆ. ಯಾವುದೇ ರೀತಿಯ ತಯಾರಿಸಿದ ಆಹಾರವನ್ನು ನೀಡಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.