ಮಧ್ಯಪ್ರದೇಶದ ಕೂಲಿ ಕಾರ್ಮಿಕರು ವಾಡಿಯಲ್ಲಿ ಬಂಧಿ

0
57

ಕಲಬುರಗಿ: ವಾಡಿ ರೈಲ್ವೆ ಹಳಿ ದುರಸ್ಥಿ ಕೆಲಸಕ್ಕೆಂದು ಬಂದಿರುವ ಮಧ್ಯಪ್ರದೇಶದ ೨೫ ಜನ ಕೂಲಿ ಕಾರ್ಮಿಕರು, ಚಿತ್ತಾಪುರ ತಾಲೂಕಿನ ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಕೊರೊನಾ ಕರ್ಫ್ಯೂ ಫಜೀತಿಗೆ ಸಿಕ್ಕು ಗೋಳಾಡುತ್ತಿದ್ದಾರೆ.

ಹಳಿ ಮಾರ್ಗದ ದುರಸ್ಥಿ ಹಾಗೂ ಸ್ಲೀಪರ್ ಜೋಡಣೆ ಕಾಮಗಾರಿಯ ಗುತ್ತಿಗೆದಾರನೊರ್ವ ಮಧ್ಯಪ್ರದೇಶದ ಚಿನ್ನವಾಡ ಜಿಲ್ಲೆಯ ರಹೇಪ ಗ್ರಾಮ ಮೂಲದ ಈ ಕಾರ್ಮಿಕರನ್ನು ಐದು ತಿಂಗಳ ಹಿಂದೆಯೇ ವಾಡಿ ನಗರಕ್ಕೆ ಕರೆತಂದಿದ್ದಾನೆ. ಕೊರೊನಾ ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಅರ್ಧಾ ವೇತನ ನೀಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪಟ್ಟಣದ ರೈಲ್ವೆ ಕಾಲೋನಿಯ ಪುರಾತನ ರೈಲ್ವೆ ಪೊಲೀಸ್ ಠಾಣೆಯ ಶಿಥಿಲ ಕಟ್ಟದಲ್ಲಿ ಹೆಂಡಿರು ಮಕ್ಕಳೊಂದಿಗೆ ಬೀಡುಬಿಟ್ಟಿರುವ ಈ ಕಾರ್ಮಿಕರು, ಅತ್ತ ಕೆಲಸವೂ ಇಲ್ಲದೆ ಇತ್ತ ಊಟಕ್ಕೆ ಆಹಾರವೂ ಇಲ್ಲದೆ ಸಂಕಟದ ಬದುಕು ಸಾಗಿಸುತ್ತಿದ್ದಾರೆ. ರೈಲ್ವೆ ಅಧಿಕಾರಿಗಳು ನೀಡುತ್ತಿರುವ ಕಿಚಡಿ ಸಾರು ತಿಂದು ಉಸಿರಾಡುತ್ತಿರುವ ಕರುಣಾಜನಕ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ಲಾಕ್‌ಡೌನ್ ಘೋಷಣೆಯಿಂದ ಬಿಕ್ಕಟ್ಟಿಗೆ ಸಿಕ್ಕು ತತ್ತರಿಸಿರುವ ಕಾರ್ಮಿಕರು ಮರಳಿ ಮಧ್ಯಪ್ರದೇಶಕ್ಕೆ ಹೋಗಲು ಹಾತೊರೆಯುತ್ತಿದ್ದಾರಾದರೂ ಗೂಡು ಸೇರಿಸಬೇಕಾದ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ಕಿವಿಗಳಿಗೆ ಇವರ ಕೂಗು ಕೇಳಿಸಿಲ್ಲ. ಕೆಲಸಕ್ಕೆಂದು ಕರೆದುಕೊಂಡು ಬಂದ ಗುತ್ತಿಗೆದಾರ ನಮ್ಮನ್ನು ಬಿಟ್ಟು ಹೇಳದೆ ಕೇಳದೆ ಕಣ್ಮರೆಯಾಗಿದ್ದಾನೆ. ದುಡಿದ ವೇತನವೂ ಪೂರ್ಣಪ್ರಮಾಣದಲ್ಲಿ ಪಾವತಿಸಿಲ್ಲ. ಇರಲು ಮನೆಯಿಲ್ಲ. ನೀರು ಊಟವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ರೈಲು ಮತ್ತು ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ನಾವು ನಮ್ಮೂರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ನಮ್ಮನ್ನು ರಕ್ಷಿಸಿ ಎಂದು ಕಾರ್ಮಿಕರು ಅಂಗಲಾಚುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here