ಕಲಬುರಗಿ: ಮಹಾಮಾರಿ ಕೊರೋನಾ ವಿರುದ್ಧ ಇಡೀ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ನಗರದಲ್ಲಿ ಅದನ್ನು ಉಲ್ಲಂಘಿಸಿ ಅನಗತ್ಯವಾಗಿ ಸಂಚಾರ ಮುಂದುವರೆದಿದೆ. ಈಗಾಗಲೇ ಪೋಲಿಸರು ಬಸ್ಕಿ ಹೊಡೆಸುವುದು, ಕಪ್ಪೆಯಂತೆ ಜಿಗಿಯುವುದು, ಕಸಗುಡಿಸುವುದು ಮುಂತಾದ ಶಿಕ್ಷೆಗಳನ್ನು ನೀಡಿದರೂ ಸಹ ಅನಗತ್ಯ ಸಂಚಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ಅನಗತ್ಯವಾಗಿ ದ್ವಿಚಕ್ರವಾಹನಗಳ ಮೇಲೆ ಸಂಚರಿಸುತ್ತಿದ್ದ ಹಲವರನ್ನು ಪೋಲಿಸರು ಹಿಡಿದು ಅವರಿಗೆ ಪ್ರಾಣಾಯಾಮದ ಶಿಕ್ಷೆಯನ್ನು ನೀಡಿದ್ದಾರೆ.
ಚೌಕ್ ಠಾಣೆಯ ಪಿಐ ಶಕೀಲ್ ಅಂಗಡಿ ಅವರ ನೇತೃತ್ವದಲ್ಲಿನ ತಂಡವು ನಗರದ ಗಂಜ್ ಚೌಕ್ ಪೋಲಿಸ್ ಔಟ್ ಪೋಸ್ಟ್ ಮುಂಭಾಗದಲ್ಲಿ ಲಾಕ್ಡೌನ್ ಉಲ್ಲಂಘಿಸಿ ದ್ವಿಚಕ್ರವಾಹನಗಳ ಮೇಲೆ ಸಂಚರಿಸಿದ ಕೆಲವರನ್ನು ಹಿಡಿದು, ಅವರಿಗೆ ಅದೇ ಬಯಲು ಪ್ರದೇಶದಲ್ಲಿ ಯೋಗಾಸನದ ಶಿಕ್ಷೆಯನ್ನು ೧೫ ನಿಮಿಷಗಳ ಕಾಲ ನೀಡಿದರು.
ಕಪಾಲಿಭಾತಿ, ವೃಕ್ಷಾಸನ, ಸೂರ್ಯನಮಸ್ಕಾರ ಮುಂತಾದ ಆಸನಗಳನ್ನು ಪೋಲಿಸರು ಮಾಡಿಸಿದರು. ಈ ಸಂದರ್ಭದಲ್ಲಿ ಕಾಟಾಚಾರಕ್ಕಾಗಿ ಆಸನ ಹಾಕಿದವರಿಗೆ ಪೋಲಿಸರು ಬೆತ್ತದ ರುಚಿಯನ್ನೂ ತೋರಿಸಿದರು.
ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಏಪ್ರಿಲ್ ೧೪ರವರೆಗೆ ಲಾಕ್ಡೌನ್ ಜಾರಿಯಲ್ಲಿದ್ದು, ಯಾರೊಬ್ಬರೂ ಮನೆ ಬಿಟ್ಟು ಹೊರಗೆ ಬರಬಾರದು. ಶುಚಿತ್ವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಪಿಐ ಶಕೀಲ್ ಅಂಗಡಿಯವರು ಲಾಕ್ಡೌನ್ ಉಲ್ಲಂಘಿಸಿದವರಿಗೆ ತಾಕೀತು ಮಾಡಿದರು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವಿರುದ್ಧ ಸಮರ ಸಾರಲು ಭಾನುವಾರ ಏಪ್ರಿಲ್ ೫ರಂದು ರಾತ್ರಿ ೯ ಗಂಟೆಗೆ ೯ ನಿಮಿಷಗಳ ಕಾಲ ಜ್ಯೋತಿ ಬೆಳಗಿಸಲು ಕರೆ ನೀಡಿದ್ದು, ಎಲ್ಲರೂ ಆ ಸಮಯದಕ್ಕೆ ಜ್ಯೋತಿ ಬೆಳಗಿಸಿ ಎಂದು ಹೇಳಿದ ಪೋಲಿಸ್ ಅಧಿಕಾರಿ, ಅವರಿಗೆಲ್ಲ ಒಂದೊಂದು ಮೇಣದಬತ್ತಿಯನ್ನು ಕೊಟ್ಟು ಅವರಿಂದ ಪ್ರಮಾಣ ಮಾಡಿಸಿಕೊಂಡು ಬಿಟ್ಟು ಕಳಿಸಿದರು.