ಸುರಪುರ: ತಾಲ್ಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಸುರಪುರ ಮತ್ತು ಕಾರ್ಮಿಕ ಇಲಾಖೆ ಹಾಗು ಮತ್ತಿತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಹಾಗು ಸರಕು ಸಾಗಾಣಿಕೆ ವಾಹನಗಳಲ್ಲಿ ಮಕ್ಕಳು ಮತ್ತು ಕೂಲಿ ಕಾರ್ಮಿಕರ ಸಾಗಿಸುವುದು ಕಾನೂನು ಬಾಹಿರ ಎಂಬ ವಿಷಯದ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳಾನಾಯ್ಕ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕಾರ್ಮಿಕರಿಗೆ ಇಂದು ಸರಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ ಕಾರ್ಮಿಕರು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.ಕಾರ್ಮಿಕರು ಕೇವಲ ಕಟ್ಟಡ ಕಟ್ಟುವವರು ಮಾತ್ರವಲ್ಲದೆ ಬಡಿಗ,ಕಂಬಾರ,ಕುಂಬಾರ ಸೇರಿದಂತೆ ಎಲ್ಲಾ ವರ್ಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕ ವರ್ಗದಲ್ಲಿದ್ದು ಎಲ್ಲರು ಸೌಲಭ್ಯಗಳ ಪಡೆಯುವಂತೆ ಹಾಗು ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲಿದ್ದ ಸಾಯಿಬಣ್ಣ ಮೇಲಗಲ್ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ದಾವಣಗೇರೆ ಮಾತನಾಡಿ,ಕಾರ್ಮಿಕರು ಕೇವಲ ಕೆಲಸದ ಕಡೆಗೆ ಮಾತ್ರ ಗಮನ ನೀಡದೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯ ರೂಪಿಸುವಂತವರಾಗಬೇಕು.ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ,ಆ ಯೋಜನೆಗಳ ಮೂಲಕ ಮಕ್ಕಳ ಉತ್ತಮ ಶಿಕ್ಷಣ ಕೊಡಿಸುವಂತೆ ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ ಮಾತನಾಡಿ,ಕಾರ್ಮಿಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಹಚ್ಚಬೇಡಿ,ಅಲ್ಲದೆ ಅನೇಕ ಜನ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ಆಟೋ ಮತ್ತಿತರೆ ವಾಹನಗಳ ಮೇಲೆ ಕುಳಿತು ಪ್ರಯಾಣಿಸುವ ಮೂಲಕ ಅನೇಕ ಬಾರಿ ಅಪಘಾತಕ್ಕೊಳಗಾದ ಪ್ರಸಂಗಗಳು ನಡೆದಿವೆ.ಇಂತಹ ಪ್ರಯಾಣ ಕಾನೂನು ಬಾಹಿರ ಮತ್ತು ಅಪಾಯಕಾರಿಯಾಗಿದ್ದು ಕಾರ್ಮಿಕರು ವಾಹನಗಳ ಮೇಲೆ ಕುಳಿತು ಪ್ರಯಾಣಿಸುವುದು ಕಂಡರೆ ಅವರ ಮೇಲೆ ಮತ್ತು ವಾಹನ ಚಾಲಕ ಹಾಗು ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತ್ರಾಯ ಕರಡಿ ಮಾತನಾಡಿದರು.ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ,ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಎಸ್. ಪಾಟೀಲ,ಬಿಇಒ ಮೌನೇಶ ಕಂಬಾರ,ನಗರಸಭೆಯ ಓಂಕಾರೆಪ್ಪ,ಮ್ಕಕಳ ಕಲ್ಯಾಣ ಇಲಾಖೆ ಸದಸ್ಯ ಮಾಳಪ್ಪ ವಂಟೂರ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಸನ್ಮಾನಿಸಿ ವಿವಿಧ ಸಲಕರಣೆಗಳ ಕಿಟ್ ನೀಡಲಾಯಿತು ಹಾಗು ಬಿಸಿಯೂಟ ಅಡುಗೆ ಸಹಾಯಕಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಾಯಕವಾಡ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.ಅನೇಕ ಜನ ನ್ಯಾಯವಾದಿಗಳು,ಕಕ್ಷಿದಾರರು ಹಾಗು ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಮಿಕರು ಭಾಗವಹಿಸಿದ್ದರು.