ಹೂವಿನಂತೆ ತೋಟಗಾರಿಕೆ ಬೆಳೆಗಳಿಗೂ ಸೂಕ್ತ ಪರಿಹಾರ ಕೊಡಿ: ಬಿರಾದಾರ್ ಆಗ್ರಹ

0
32

ಕಲಬುರಗಿ: ಮಹಾಮಾರಿ ಕೊರೋನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಲಾಕ್‌ಡೌನ್ ಜಾರಿ ಮಾಡಿದ್ದು, ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಹೂವು ಬೆಳೆಗಾರರಿಗೆ  ರಾಜ್ಯ ಸಚಿವ ಸಂಪುಟ ಸಭೆಯು ಪರಿಹಾರ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹವಾಗಿದೆ. ಅದೇ ರೀತಿ ತೀವ್ರ ಸಮಸ್ಯೆ ಎದುರಿಸುತ್ತಿರುವ ತೋಟಗಾರಿಕೆ ಬೆಳೆಗಾರರಿಗೂ ಸಹ ಸೂಕ್ತ ಪರಿಹಾರ ಕೊಡಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುಭಾಷ್ ಬಿರಾದಾರ್ ಕಮಲಾಪೂರ್ ಅವರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ನೇತೃತ್ವದ ಸಚಿವ ಸಂಪುಟ ಸಭೆಯು ರೈತರಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಇದೆ. ಆದಾಗ್ಯೂ, ಗುರುವಾರ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಕೇವಲ ಹೂವು ಬೆಳೆದ ರೈತರಿಗೆ ಮಾತ್ರ ಪರಿಹಾರ ಕೊಡಲು ನಿರ್ಧರಿಸಿ, ಉಳಿದ ತೋಟಗಾರಿಕೆ ಬೆಳೆಗಾರರಿಗೆ ನಿರ್ಲಕ್ಷಿಸಿದ್ದು ಸರಿಯಲ್ಲ ಎಂದು ಅವರು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕಲ್ಲಂಗಡಿ ಬೆಳೆಯನ್ನು ಮಾರಾಟ ಮಾಡಲಾಗದೇ ಜಿಲ್ಲೆಯ ಲಾಡ್‌ಚಿಂಚೋಳಿಯಲ್ಲಿ ರೈತ ಚಂದ್ರಕಾಂತ್ ಬಿರಾದಾರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವತ: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಗ್ರಾಮಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಕುಟುಂಬಕ್ಕೆ ಧೈರ್ಯ ಹಾಗೂ ಸಾಂತ್ವನ ಹೇಳಿದ್ದಾರೆ. ಪಪ್ಪಾಯಿ, ಲಿಂಬೆಕಾಯಿ, ಬಾಳೆ, ತರಕಾರಿ ಮುಂತಾದ ಬೆಳೆಗಳನ್ನು ಮಾರಾಟ ಮಾಡುವ ವ್ಯವಸ್ಥೆಗೆ ಲಾಕ್‌ಡೌನ್ ಅಡ್ಡಿಯಾಗಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಅತೀವೃಷ್ಟಿಯಿಂದ ತೋಟಗಾರಿಕೆ ಬೆಳೆ ಹಾನಿಯಾಯಿತು. ಅದಕ್ಕೆ ಹಿಂದಿನ ಸರ್ಕಾರ ಯಾವುದೇ ಪರಿಹಾರ ನೀಡದೇ ನಿರ್ಲಕ್ಷಿಸಿತು. ಈ ಬಾರಿಯೂ ಸಹ ಉತ್ತಮ ತೋಟಗಾರಿಕೆ ಬೆಳೆ ಬಂದಿದೆ. ಲಾಕ್‌ಡೌನ್‌ನಿಂದ ಮಾರುಕಟ್ಟೆಗೆ ಹೋಗಲು ರೈತರಿಗೆ ಆಗುತ್ತಿಲ್ಲ. ಆಳುಗಳು ಸಹ ಸಿಗುತ್ತಿಲ್ಲ. ಎಲ್ಲ ಮಾರ್ಗಗಳು ಬಂದ್ ಆಗಿವೆ. ಆದ್ದರಿಂದ ತೋಟಗಾರಿಕೆ ಬೆಳೆಯ ನಷ್ಟದ ಕುರಿತು ರಾಜ್ಯ ಸರ್ಕಾರವು ಸಮೀಕ್ಷೆ ಕೈಗೊಂಡು, ಅವರಿಗೂ ಸಹ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ತಂದು ತೋಟಗಾರಿಕೆ ಬೆಳೆಗಾರರ ನಷ್ಟ ಪರಿಹಾರಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here