ಕಲಬುರಗಿ: ವಿಶ್ವವ್ಯಾಪಿ ಹರಡುತ್ತಿರುವ ಕೊರೋನಾ ವೈರಸ್‌ಗೆ ಘಟಾನುಘಟಿ ದೇಶಗಳೇ ತತ್ತರಿಸಿ ಹೋಗಿವೆ. ಹೀಗಿರುವಾಗ ಇಂಗ್ಲೆಂಡಿನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿದ ಕನ್ನಡಿಗ ಹಾಗೂ ಜಿಲ್ಲೆಯ ಕಮಲಾಪೂರ್ ಮೂಲದ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರಿಗೂ ಕೊರೋನಾ ಸೋಂಕು ತಗುಲಿದೆ.
ನೀರಜ್ ಪಾಟೀಲ್ ಅವರಿಗೆ ಸೋಖು ತಗುಲಿರುವುದನ್ನು ತಿಳಿದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ವಿಧಾನಸೌಧದಲ್ಲಿ ನೀರಜ್ ಪಾಟೀಲ್ ಅವರು ಅಧಿವೇಶನದಲ್ಲಿ ಓಡಾಡುತ್ತಿದ್ದರು. ಫೆಬ್ರವರಿ ೨೯ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಇತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ನೀರಜ್ ಪಾಟೀಲ್ ಅವರು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸೋಣ ಎಂದು ಬರೆದುಕೊಂಡಿದ್ದಾರೆ.
ಇಂಗ್ಲಂಡ್ ದೇಶದ ಲಂಡನ್‌ನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ನಿರ್ಮಿಸಿದ್ದ ಹೆಮ್ಮೆಯ ಕನ್ನಡಿಗರು, ಆತ್ಮೀಯರು, ಲ್ಯಾಂಬೆತ್ ನಗರದ ಮಾಜಿ ಮಹಾಪೌರರಾದ ಡಾ. ನೀರಜ್ ಪಾಟೀಲ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದುರದೃಷ್ಟಕರ. ಸ್ವತ: ವೈದ್ಯರೂ ಆಗಿರುವ ಅವರು ಈ ಸಂಕಷ್ಟದಿಂದ ಶೀಘ್ರ ಪಾರಾಗಲಿ ಎಂದು ಸಮಸ್ತ ಭಾರತೀಯರು ಪ್ರಾರ್ಥಿಸೋಣ ಎಂದು ಅವರ ಜೊತೆ ತಾವು ಇರುವ ಭಾವಚಿತ್ರಗಳನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಶೇರ್ ಮಾಡಿದ್ದಾರೆ.
ಸ್ವತ: ವೈದ್ಯರಾಗಿರುವ ನೀರಜ್ ಪಾಟೀಲ್ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕಿಗೆ ತುತ್ತಾಗಿದ್ದಾರೆ. ತಮಗೆ ಕೊರೋನಾ ಸೋಂಕು ತಗುಲಿರುವ ಕುರಿತು ಸ್ವತ: ನೀರಜ್ ಪಾಟೀಲ್ ಅವರೇ ಪ್ರತಿಕ್ರಿಯಿಸಿದ್ದಾರೆ. ನಾನು ತೀವ್ರ ಚಳಿ ಜ್ವರ ಹಾಗೂ ಚೆಸ್ಟ್ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದೇನೆ. ನನಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೆಲ್ಫ್ ಐಸೋಲೇಷನ್‌ನಲ್ಲಿ ಇದ್ದೇನೆ. ಎಲ್ಲರಿಂದ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ಈ ಸೋಂಕು ತಗಲುತ್ತದೆ ಎಂದು ಕನಸಲ್ಲೂ ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಬಹುಶ: ನಾನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದ್ದೇನೆ ಎನಿಸುತ್ತದೆ. ನಾನು ಸದಾ ಜಕಮ್ ಮಾಡುತ್ತಿದ್ದೆ. ಡಯಟ್ ಮಾಡುತ್ತಿದ್ದೆ. ಹೀಗಾಗಿ ನನ್ನಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದೆ. ನಾನು ಆದಷ್ಟು ಬೇಗ ಗುಣಮುಖನಾಗಿ ಮತ್ತೆ ಕರ್ತವ್ಯಕ್ಕೆ ವಾಪಸ್ಸಾಗುತ್ತೇನೆ ಎಂದು ನೀರಜ್ ಹೇಳಿಕೊಂಡಿದ್ದಾರೆ.