ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಸಮೀಪದ ವೀರಪ್ಪ ನಿಷ್ಠೀ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಕೊರೊನಾ ಶಂಕಿತರ ಮುಂಜಾಗ್ರತಾ ತಂಗುವಿಕೆಗಾಗಿ ೧೦೦ ಹಾಸಿಗೆಗಳ ಸೂಪರ್‌ವೈಸ್ಡ್ ಕ್ವಾರಂಟೈನ್ ಸೆಂಟರ್ ಆರಂಭಿಸಲಾಗಿದೆಒಟ್ಟು ಮೂವತ್ತು ಕೋಣೆಗಳಲ್ಲಿ ನೂರು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು ಸುರಪುರ ಶಹಾಪುರ ಮತ್ತು ಹುಣಸಗಿ ತಾಲೂಕಿನ ಕೊರೊನ ಶಂಕಿತರನ್ನು ಮುಂಜಾಗ್ರತೆಗಾಗಿ ಇರಿಸಲು ಕೇಂದ್ರ ಆರಂಭಿಸಲಾಗಿದೆ.
ಕ್ವಾರಂಟೈನ್ ಕೇಂದ್ರದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾಹಿತಿ ನೀಡಿ,ಈಗಾಗಲೆ ವಿದೇಶದಿಂದ ಬಂದಿದ್ದ ತಾಲೂಕಿನ ೨೨ ಜನರನ್ನು ಅವರ ಮನೆಗಳಲ್ಲಿಯೆ ಕ್ವಾರಂಟೈನ್ ಮಾಡಲಾಗಿತ್ತು.ಅವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಕೆಲವರು ಹೊರಗಡೆ ಬರುತ್ತಿದ್ದಾರೆ ಎಂದು ಸಾರ್ವಜನಿಕರು ದೂರು ನೀಡುತ್ತಿದ್ದರು. ಅಲ್ಲದೆ ತಾಲೂಕಿನಲ್ಲಿ ಸಾವಿರಾರು ಜನ ಗುಳೆ ಹೋಗಿ ಬಂದಿದ್ದಾರೆ.ಆದರೆ ಇದುವರೆಗೂ ಯಾರಲ್ಲೂ ಕೊರೊನಾ ಸೊಂಕು ಕಂಡು ಬಂದಿಲ್ಲ. ಮುಂದೆ ಯಾರಾದರೂ ಶಂಕಿತರು ಕಂಡು ಬಂದಲ್ಲಿ ಕ್ವಾರಂಟೈನ್ ಸೆಂಟರಲ್ಲಿ ೧೪ ದಿನಗಳ ಕಾಲ ಇರಿಸಿ ಪರೀಕ್ಷೆಗೊಳಪಡಿಸಲಾಗುವುದು ಎಂದರು.
ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೂರು ಹಾಸಿಗೆಗಳ ಸೂಪರ್‌ವೈಸ್ಡ್ ಕ್ವಾರಂಟೈನ್ ಸೆಂಟರ್ ಆರಂಭಿಸಲಾಗಿದ್ದು ಸುರಪುರ ಶಹಾಪುರ ಮತ್ತು ಹುಣಸಗಿ ತಾಲೂಕಿ ಕೊರೊನಾ ಶಂಕಿತರನ್ನು ಕೇಂದ್ರದಲ್ಲಿರಿಸಿ ಪರೀಕ್ಷಿಸಲಾಗುವುದು. – ಡಾ: ಆರ್.ವಿ.ನಾಯಕ ತಾಲೂಕು ಆರೋಗ್ಯಾಧಿಕಾರಿ.
ಸೆಂಟರ್ ನೋಡಲ್ ಅಧಿಕಾರಿಯನ್ನಾಗಿ ಡಾ. ಓಂಪ್ರಕಾಶ ಅಂಬುರೆಯವರನ್ನು ನೇಮಿಸಲಾಗಿದೆ. ದಿನ ೨೪ ಗಂಟೆಯು ಒಬ್ಬರು ವೈದ್ಯರು ,ಒಬ್ಬರು ಟೆಕ್ನೀಶಿಯನ್ ಸೇರಿ ಒಟ್ಟು ೧೨ ಜನರ ತಂಡ ಕರ್ತವ್ಯ ನಿರ್ವಹಿಸಲಿದ್ದಾರೆ. ಸದ್ಯ ಕೇಂದ್ರದಲ್ಲಿ ಅವಶ್ಯವಿರುವ ಎಲ್ಲಾ ಸಲಕರಣೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.