’ಭೂತ’ದ ಚೇಷ್ಟೆಗಳು ವರ್ತಮಾನದಲ್ಲಿ ಕುಣಿಯುಬಾರದು

0
128

ಧರ್ಮ, ನೀತಿ, ಆಚಾರ, ವಿಚಾರ, ಪ್ರಗತಿ ಎಂದು ಕೆಲವು ಸಂತರು, ಮಹಾತ್ಮರು, ಶರಣರು, ಸಮಾಜ ಸುಧಾರಕರು ಹಗಲಿರುಳು ದುಡಿಯುತ್ತಿದ್ದರೂ ನಿರೀಕ್ಷಿತ ಸುಧಾರಣೆ ಆಗುತ್ತಿಲ್ಲ. ಇಂದು ಮಾತುಗಳಿಗೆ ಕೊರತೆ ಇಲ್ಲ. ಆದರೆ ಮಾತಿನಂತೆ ನಡೆವವರ ಕೊರತೆ ಇದೆ. ಹೀಗಾಗಿಯೇ ನಿರೀಕ್ಷಿತ ಫಲ ಕಾಣಸಿಗದೆ ನಿರಾಸೆ ಎದ್ದು ಕಾಣುತ್ತಿದೆ. ಪರಸ್ಪರ ಮೇಲಾಟ, ಮೋಸದಾಟಗಳೇ ಎಲ್ಲೆಡೆ ವಿಜೃಂಭಿಸುತ್ತಿವೆ.

ಹೀಗಾಗಿ ನಾವೇನು ಮಾಡುತ್ತೇವೆ, ಮಾತನಾಡುತ್ತೇವೆ, ಅದರಿಂದ ಆಗುವ ಪ್ರಯೋಜನ-ಪರಿಣಾಮ ಏನು? ಎಂದು ಚಿಂತನೆ ಮಾಡಬೇಕಿದೆ. ಕಾಯಕಶ್ರದ್ಧೆ, ಸಾಮಾಜಿಕ ಸಮಾನತೆ, ಅಸ್ಪ್ರೃಶ್ಯತಾ ನಿವಾರಣೆ, ಸ್ತ್ರೀ ಸಬಲೀಕರಣದ ಜೊತೆಗೆ ನೈತಿಕ ನೆಲೆಗಟ್ಟು ಕುಸಿಯದಂತೆ ಎಚ್ಚರಿಕೆ ವಹಿಸಬೇಕಿದೆ. ಆಚಾರ ರಹಿತ ವಿಚಾರ, ವಿಚಾರ ರಹಿತ ಆಚಾರ ಜನರನ್ನು ದಿಕ್ಕು ತಪ್ಪಿಸುತ್ತದೆ. ಅದಕ್ಕಾಗಿಯೇ ಶಿವಶರಣರು ಆಚಾರ-ವಿಚಾರಗಳ ಸಂಗಮವಾಗಬೇಕು ಎಂದಿದ್ದಾರೆ.

Contact Your\'s Advertisement; 9902492681

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ
ಸತ್ಯವ ನುಡಿವುದೇ ದೇವಲೋಕ
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲ ಸಂಗಮ ದೇವ ನೀವೇ ಪ್ರಮಾಣು

ಮೇಲಿರುವ ದೇವಲೋಕ, ಕೆಳಗಿರುವ ಮರ್ತ್ಯಲೋಕ ಎರಡೂ ಬೇರೆ. ಪುಣ್ಯ ಮಾಡಿದವರು ದೇವಲೋಕದಲ್ಲಿ ದೇವಾನು ದೇವತೆಗಳಾಗಿ ನೆಲೆಸುತ್ತಾರೆ. ಮರ್ತ್ಯಲೋಕದದಲ್ಲಿ ನರಮಾನವರು ವಾಸಿಸುತ್ತಾರೆ ಎಂದು ಜನರನ್ನು ನಂಬಿಸಲಾಗಿತ್ತು. ಆದರೆ ಸತ್ಯ, ನ್ಯಾಯ, ನೀತಿ ಆಚಾರ ಹೊಂದಿರುವುದೇ ಸ್ವರ್ಗಲೋಕ. ಅಸತ್ಯ, ಅನ್ಯಾಯ, ಅನೀತಿ, ಅನಾಚಾರ ಹೊಂದಿರುವುದೇ ಮರ್ತ್ಯಲೋಕ ಎಂದು ಬಸವಣ್ಣನವರು ಈ ವಚನದಲ್ಲಿ ಅತ್ಯಂತ ಸರಳವಾಗಿ ಹೇಳಿದ್ದಾರೆ. ಅಯ್ಯ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಬಡವರಿಗೆ ಮನೆ ಕಟ್ಟಿಕೊಟ್ಟರೆ ಅವರ ಬಡತನ ನಿವಾರಣೆ ಆಗದು. ಇದರ ಬದಲು ಜನರಲ್ಲಿ ವೈಮನಸ್ಸು ದೂರ ಮಾಡಬೇಕು. ಇಂತಹ ಪ್ರೀತಿಯ ಸೇತುವೆ ಕಟ್ಟುವ ಕಾರ್ಯ ಶರಣರು ಮಾಡಿದ್ದಾರೆ. ದುಡಿಮೆಯ ದಾರಿ ತೋರಿಸಿಕೊಟ್ಟಿದ್ದಾರೆ. ತನ್ನ ಅನ್ನವನ್ನು ತಾನೇ ಸಂಪಾದನೆ ಮಾಡುವ ಕಾಯಕ ತತ್ವವನ್ನು ಅವರು
ಬೋಧಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದರೆ ಬಡತನ ನಿವಾರಣೆಯಾಗಿ ಈ ದೇಶ ಸ್ವಚ್ಛ -ಸುಂದರವಾಗಿರುತ್ತಿತ್ತು. ಜನರು ಅಪರಾಧದಿಂದ, ದುಃಖದಿಂದ ಮುಕ್ತರಾಗುತ್ತಿದ್ದರು.

ಸರ್ಕಾರ ಅಕ್ಕಿ, ಅನ್ನ, ಅರಿವೆ ಏನೆಲ್ಲವನ್ನು ಉಚಿತವಾಗಿ ಕೊಡುತ್ತಿದೆ. ಆದರೆ ಬೆಳಗ್ಗೆ ಕೊಟ್ಟು ಸಂಜೆ ವೇಳೆಗೆ ಅವರ ಹಣವನ್ನೆಲ್ಲ ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಕಲ ಜೀವಾತ್ಮರಿಗೆ ಲೇಸು ಬಯಸುವ ವಚನ ಸಾಹಿತ್ಯ ನಮಗೆ ದಾರಿದೀಪವಾಗಬೇಕಿದೆ. ಮಠ-ಮಂದಿರ, ಮನೆಗಳನ್ನು ಕಟ್ಟುವುದಕ್ಕಿಂತ ನಶಾಮುಕ್ತ ಸಮಾಜ ನಿರ್ಮಾಣ ಮಾಡಿದರೆ ಅದಕ್ಕಿಂತ ಕ್ರಾಂತಿಕಾರಿಯಾದ ಕಲ್ಯಾಣಕಾರಿ ಕೆಲಸ ಮತ್ತೊಂದಿಲ್ಲ ಎಂಬುದನ್ನು ಅರಿತಿದ್ದ ಶರಣರು ಸತ್ಯ, ಶುದ್ಧ, ಕಾಯಕದಿಂದ ಕೂಡಿದ, ಮೂಢನಂಬಿಕೆ, ಕಂದಾಚಾರಗಳಿಲ್ಲದ ಸಮ ಸಮಾಜದ ಕನಸು ಕಂಡಿದ್ದರು.

ಬಾಗೇವಾಡಿಯನ್ನು ಬಸವನ ಬಾಗೇವಾಡಿಯನ್ನಾಗಿ ಪರಿವರ್ತಿಸಿದ ಬಸವನ ಜನ್ಮ ಸ್ಥಳದ ಸ್ಮಾರಕದ ಮುಂದೆ

ಅನ್ಯಾಯ ಅಸತ್ಯದಿಂದ ಸ್ವರ್ಗ ಪ್ರಾಪ್ತಿ ಸಾಧ್ಯವಿಲ್ಲ. ಸ್ವರ್ಗ-ನರಕಗಳೆಂಬವು ಬೇರಿಲ್ಲ. ಸತ್ಯ, ನ್ಯಾಯ, ನೀತಿಯ ನಡತೆ, ಸದಾಚಾರವೇ ಸ್ವರ್ಗ. ಇದಕ್ಕೆ ಕೂಡಲಸಂಗಮದೇವರೆ ಪ್ರಮಾಣು ಎಂದು ಸಾಕ್ಷೀಕರಿಸುತ್ತಾರೆ. ಇಷ್ಟೊಂದು ಸರಳ, ಸುಂದರ ವಚನಗಳಿದ್ದರೂ ಅವುಗಳನ್ನು ಪಚನ ಮಾಡಿಕೊಳ್ಳದ ನಾವುಗಳು ಶರಣರ ವಚನಗಳ ಸದಾಶಯವನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕು. ಆಧುನಿಕ ಶಿಕ್ಷಣ ಪಡೆದವರಲ್ಲಿ ವಿಚಾರಗಳಿವೆ. ಆದರೆ ಅದಕ್ಕನುಗುಣವಾದ ಆಚಾರವಿಲ್ಲ. ಮಾನವೀಯತೆ ಅರಳಬೇಕು, ಜೀವದಯೆ ಎಲ್ಲರಲ್ಲೂ ಮೂಡಬೇಕಿದೆ.

ಮರ್ತ್ಯಲೋಕದಲ್ಲಿರುವುದು ಮಿಥ್ಯ. ಇಲ್ಲಿರುವುದೆಲ್ಲ ಸುಳ್ಳು. “ಅಲ್ಲಿರುವುದು ನಮ್ಮ ಮನೆ. ಇಲ್ಲಿರುವುದು ಸುಮ್ಮನೆ” ಎಂದು ಇಹದ ಬದುಕನ್ನು ತ್ಯಜಿಸಿ ಕಾಣದ (ಇಲ್ಲದ) ಕೈಲಾಸದ ಕಡೆ ಬೆರಳು ಮಾಡಿ ತೋರಿಸುತ್ತಿದ್ದ ಕಾಲದಲ್ಲಿ ದೇವಲೋಕ, ಮರ್ತ್ಯಲೋಕ ಬೇರಿಲ್ಲ. ಇದು ಕರ್ತಾರನ ಕಮ್ಮಟ. ಇಲ್ಲಿ ಸಲ್ಲುವುವವರು ಅಲ್ಲಿಯೂ ಸಲ್ಲುತ್ತಾರೆ ಎಂದು ಜನರಿಗೆ ನಿಜದ ನಿಲುವು ತೋರಿಸಿಕೊಟ್ಟ ಬಸವಣ್ಣನವರ ವಿವರಣಾಶೈಲಿ ಯಾರ ಊಹೆಗೂ ನಿಲುಕಲಾರದಂತಹದ್ದು.

ಭೂತಕಾಲವು ವರ್ತಮಾನ ಮತ್ತು ಭವಿಷತ್ ಕಾಲಕ್ಕೆ ದಾರಿ ದೀಪವಾಗಬೇಕು. ಆದರೆ ಭೂತದ ಚೇಷ್ಟೆಗಳು, ಮೋಸಗಳು ವರ್ತಮಾನದಲ್ಲಿ ಕುಣಿಯುವಂತಾಗಬಾರದು. ಇದರಿಂದ ಭವಿಷತ್‌ಗೆ ಉಳಿಗಾಲವಿಲ್ಲ. ಭವಿಷತ್ ಒಳ್ಳೆಯದಾಗಬೇಕಾದರೆ ಭೂತಕಾಲದ ಗುಣಾವಗುಣಗಳ ಬಗ್ಗೆ ಮುಕ್ತ ಚಿಂತನೆ ನಡೆಯಬೇಕು ಎಂಬ ವಾಸ್ತವವಾದವನ್ನು ಲೋಕದ ಎದುರಿಗಿಟ್ಟ ಬಸವಣ್ಣ ಜನರಲ್ಲಿ ಹೊಸ ಪ್ರಜ್ಞೆಯನ್ನು ತಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here