ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ದಿನೆ ದಿನೆ ಹೆಚ್ಚುತ್ತಿದ್ದು, ಭಾನುವಾರ ಒಂದೇ ದಿನದಲ್ಲಿ 24 ವರ್ಷದ ಓರ್ವ ಮಹಿಳೆ ಸೇರಿ 2 ವರ್ಷದ ಗಂಡು ಮಗುವಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, ಕಲಬುರಗಿಯಲ್ಲಿ ಪೀಡಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.
24 ವರ್ಷದ ಮಹಿಳೆ ಏ. 7 ರಂದು ಮೃತಪಟ್ಟ ವ್ಯಕ್ತಿಯ ಸೊಸೆ ಎಂದು ತಿಳಿದುಬಂದಿದ್ದು, ಮೃತ ವ್ಯಕ್ತಿಯ ನೇರ ಸಂಪರ್ಕದಲ್ಲಿ ಇರುವುದರಿಂದ ಸೋಂಕು ತಗಲಿದೆ ಎನ್ನಲಾಗಿದೆ.
ಚಿತ್ತಾಪುರ ತಾಲ್ಲೂಕಿನ ವಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಎರಡು ವರ್ಷದ ಮಗುವಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ವ್ಯಕ್ತಿ ವಾಡಿಗೆ ಆಗಮಸುವ ಟ್ರೇನ್ ಗಳಲ್ಲಿ ಚುರಮುರಿ, ಸೆಂಗಾದಂತ ಸಣ್ಣ ಪುಟ್ಟ ವ್ಯಾಪಾರ ಮಾಡಿ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಸುದ್ದಿ ಅರಿತ ಕ್ಷೇತ್ರದ ಶಾಸಕರಾದ ಪ್ರೀಯಾಂಕ್ ಖರ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ ನಡೆಸಿ, ಸೋಂಕು ಪೀಡಿತ ಪ್ರದೇಶದಲ್ಲಿ ಮುನ್ನೆಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ನಿನ್ನೆ ಸಂಜೆ ಮನೆ ಮುಂದೆ ಆಟವಾಡಿಕೊಂಡಿದ್ದ ಮಗು ಬಿದ್ದು ರಕ್ತ ಮಾಡಿಕೊಂಡಿದ್ದರಿಂದ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷಿಸಲು ಕೊರೋನಾ ಪಸಿಟಿವ್ ಇರುವುದಾಗಿ ಬೆಂಗಳೂರು ಆರೋಗ್ಯ ಇಲಾಖೆಯ ಕೋವಿಡ್-19 ಪರೀಕ್ಷಾ ಕೇಂದ್ರದ ಬುಲೆಟಿನ್ ವರದಿ ದೃಢಪಡಿಸಿದೆ.
ಮುಂಜಾಗ್ರತಾ ಕ್ರಮವಾಗಿ ತಹಸೀಲ್ದಾರ್ ಉಮಾಕಾಂತ, ತಾಲ್ಲೂಕು ವೈದ್ಯಾಧಿಕಾರಿ ಮೇಕನ್, ಡಿವೈಎಸ್ಪಿ ವೆಂಕನಗೌಡ ಪಾಟೀಲ, ಸಿಪಿಐ ಪಂಚಾಕ್ಷರಿ ಸಾಲಿಮಠ ಅವರುಗಳು ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮನೆಯ ಇತರ ಸದಸ್ಯರಿಗೆ ವಿಚಾರಣೆ ನಡೆಸಿ ಸುತ್ತಲೂ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಜಿಲ್ಲೆಯಲ್ಲಿ ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚು ಜಿಲ್ಲೆಯಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಪೀಡಿತ ರೋಗಿಗಳಿಗೆ ಪ್ರಸ್ತುತ ಇ.ಎಸ್.ಐ.ಸಿ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.