ವಾಡಿ: ಸೀಲ್ಡೌನ್ ಬಡಾವಣೆಗಳಲ್ಲಿ ಕ್ರಿಮಿನಾಶಕ ಸಿಂಪರಣೆ

0
33
  • ಮಡಿವಾಳಪ್ಪ ಹೇರೂರ

ವಾಡಿ: ಪಟ್ಟಣದ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ನಾಲ್ಕು ವಾರ್ಡ್‌ಗಳನ್ನು ಸೀಲ್ಡೌನ್ ಮಾಡಿರುವ ಪೊಲೀಸರು, ಮನೆಯಿಂದ ಹೊರಗಡೆ ಬರದಂತೆ ಸುಮಾರು ೨೦೦೦ ಜನರನ್ನು ನಿರ್ಬಂಧಿಸಿದ್ದಾರೆ.

ಸೋಂಕಿತ ಬಾಲಕಿಯ ಮನೆ ಸೇರಿದಂತೆ ಪಟ್ಟಣದ ಪಿಲಕಮ್ಮಾ ದೇವಿ ಬಡಾವಣೆ, ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ಕಲಕಮ್ ಏರಿಯಾಗಳಿಗೆ ಕಟ್ಟೆಚ್ಚರ ವಹಿಸುವ ಮೂಲಕ ಎಲ್ಲಾ ರಸ್ತೆಗಳಿಗೆ ಸೋಮವಾರ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ ನೇತೃತ್ವದಲ್ಲಿ ಪೌರಕಾರ್ಮಿಕರು ಕೊರೊನಾ ಕ್ರಿಮಿನಾಶಕ ಸಿಂಪರಣೆ ಮಾಡಿದರು. ಡೇಂಜರ್ ಜೋನ್‌ಗೆ ಒಳಪಟ್ಟ ವಾರ್ಡ್ ಸಂಖ್ಯೆ ೧೧, ೧೨, ೧೩ ಮತ್ತು ೧೪ರ ಬಡಾವಣೆಗಳಿಗೆ ಸಾರ್ವಜನಿಕ ಪ್ರವೇಶ ನಿಷೇದಿಸಲಾಗಿದೆ.

Contact Your\'s Advertisement; 9902492681

ಆಶಾ ಕರ್ತವ್ಯಕ್ಕೆ ಅಡ್ಡಿ: ಕೊರೊನಾ ಸೋಂಕು ದೃಢಪಟ್ಟು ಸೀಲ್ಡೌನ್ ಚೌಕಟ್ಟಿನೊಳಗಣ ಬಡಾವಣೆಗಳಲ್ಲಿ ಸೋಮವಾರ ಒಟ್ಟು ೭೩ ಜನ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಮಾಹಿತಿ ಕಲೆಹಾಕುವ ಜತೆಗೆ ಆರೋಗ್ಯ ವಿಚಾರಣೆಗೆ ಮುಂದಾದರು. ಈ ವೆಳೆ ಕೆಲ ಕುಟುಂಬಗಳು ಆಶಾ ತಂಡಕ್ಕೆ ಅಗತ್ಯ ಮಾಹಿತಿ ನೀಡಿದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನೆಡೆಯಿತು. ಕಲಕಮ್ ಏರಿಯಾದ ಕೆಲವರು ನಿಮಗೇಕೆ ನಮ್ಮ ಕುಟುಂಬದ ಮಾಹಿತಿ ನೀಡಬೇಕು? ನಮಗೆ ಕನ್ನಡ ಬರುವುದಿಲ್ಲ ಹಿಂದಿಯಲ್ಲಿ ಕೇಳಿ. ನಮ್ಮ ಮನೆಯವರ ಹೆಸರು ಬರೆದುಕೊಂಡು ಆಹಾರ ದಾನ್ಯ ಕೊಡ್ತೀರೇನು? ಎಂದು ಪ್ರತಿವಾದಿಸಿದ್ದಾರೆ ಎಂದು ಸ್ವತಹ ಆಶಾ ಕಾರ್ಯಕರ್ತೆಯರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೀಲ್ಡೌನ್ ನಿರ್ಲಕ್ಷಿಸಿದರೆ ಕೇಸ್: ಬಾಲಕಿಯಲ್ಲಿ ಕೊರೊನಾ ಸೋಂಕು ಖಚಿತಗೊಂಡಿದೆ. ಲಾಕ್‌ಡೌನ್ ಬದಲಿಸಿ ಕೆಲ ವಾರ್ಡ್‌ಗಳಿಗೆ ಸೀಲ್‌ಡೌನ್ ಘೋಷಿಸಲಾಗಿದೆ. ನಿರ್ಬಂಧ ವಿಧಿಸಲಾದ ಬಡಾವಣೆಗಳಿಂದ ಯಾರೂ ಹೊರಗೆ ಹೋಗುವಂತಿಲ್ಲ. ಹೊರಗಿನಿಂದ ಯಾರೂ ಒಳಗೆ ಬರುವಂತಿಲ್ಲ. ಮನೆ ಬಿಟ್ಟು ಹೊರಗೆ ಬಂದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಕ್ರೈಂ ಪಿಎಸ್‌ಐ ದಿವ್ಯಾ ಮಹಾದೇವ್ ಧ್ವನಿವರ್ಧಕದ ಮೂಲಕ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಎಚ್ಚರಿಕೆ ನೀಡಿದರು.

ಬಡಾವಣೆಗಳಿಗೆ ಬರದ ತರಕಾರಿ:  ಮಹಾಮಾರಿ ಕೊರೊನಾ ವೈರಸ್‌ನಿಂದ ಬೆಚ್ಚಿಬಿದ್ದಿರುವ ವಾಡಿ ನಗರದ ಜನರು, ಪ್ರಾಣ ಭೀತಿಯಿಂದ ನಲುಗಿ ಹೋಗಿದ್ದಾರೆ. ಅಧಿಕಾರಿಗಳು ಗುರುತಿಸಿದ ನಿಷೇಧಿತ ಪ್ರದೇಶಗಳ ಹೊರತಾಗಿಯೂ ಭೀಮನಗರ, ಮರಾಠಿ ಗಲ್ಲಿ, ರೆಸ್ಟ್‌ಕ್ಯಾಂಪ್ ತಾಂಡಾ, ಜಂಬವೀರ ಕಾಲೋನಿ, ಅಂಬೇಡ್ಕರ್ ಕಾಲೋನಿ ಹೀಗೆ ವಿವಿಧ ಬಡಾವಣೆಗಳ ಗಲ್ಲಿ ರಸ್ತೆಗಳಿಗೂ ಮುಳ್ಳುಕಂಟಿ, ಕಟ್ಟಿಗೆ, ತಗಡುಗಳನ್ನು ಕಟ್ಟಿ ಸಾರ್ವಜನಿಕರು ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ.

ಪರಿಣಾಮ ತರಕಾರಿ ವ್ಯಾಪಾರಿಗಳು ಬಡಾವಣೆಯೊಳಗೆ ಪ್ರವೇಶ ಪಡೆಯಲಾಗದೆ ವಾಪಸ್ ಮರಿಳಿದ ಪ್ರಸಂಗ ನಡೆಯಿತು. ಸೀಲ್ಡೌನ್ ಏರಿಯಾಗಳ ಒಳ ರಸ್ತೆಗಳನ್ನೂ ಜನರು ಬಂದ್ ಮಾಡಿದ್ದರಿಂದ ತರಕಾರಿ ಬರಲು ಸಾಧ್ಯವಾಗಿಲ್ಲ. ಆಸ್ಪತ್ರೆ ಮತ್ತು ಮೇಡಿಕಲ್‌ಗಳಿಗೆ ಹೋಗಲು ಜನರು ಪರದಾಡಿದರು. ಪಟ್ಟಣದ ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಿಗೂ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಸೋಮವಾರದಿಂದ ಬೀಗ ಹಾಕಿಸಿದ್ದಾರೆ. ನಗರದ ಎಲ್ಲಾ ಎಟಿಎಂಗಳಲ್ಲಿ ನೋ ಕ್ಯಾಶ್ ಫಲಕ ಗೋಚರಿಸಿದವು. ಹಣ ಪಡೆಯಲು ಬಂದವರು ಪರದಾಡಿದರು.

ಅಕ್ಕ-ತಮ್ಮರ ವರದಿ ನೆಗೆಟೀವ್: ಇರಾಕ್‌ನಿಂದ ಬಂದು ಮಾಹಿತಿ ನೀಡದೆ ಗುಪ್ತವಾಗಿದ್ದ ಯುವಕ ಮತ್ತು ಆತನ ಹಿರಿಯ ಸಹೋದರಿಯ ಗಂಟಲು ದ್ರಾವಣ ಪರೀಕ್ಷೆಯ ವರದಿ ಪ್ರಕಟಗೊಂಡಿದ್ದು, ಇಬ್ಬರಲ್ಲೂ ಕೊರೊನಾ ಸೋಂಕು ನೆಗೆಟೀವ್ ಬಂದಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕಿತ ಬಾಲಕಿಯ ತಂದೆ, ತಾಯಿ ಮತ್ತು ಓರ್ವ ಬಾಲಕಿಯ ಕೊರೊನಾ ಪರೀಕ್ಷಾ ವರದಿ ಬರಬೇಕಿದ್ದು, ಸ್ಥಳೀಯರ ಎದೆ ಬಡಿತ ಹೆಚ್ಚಾಗಿದೆ. ಒಟ್ಟು ೨೫ ಜನರನ್ನು ಪ್ರೈಮರಿ ಕಾಂಟೆಕ್ಟ್ ಎಂದು ಗುರುತಿಸಲಾಗಿದ್ದು, ಒಂಬತ್ತು ಜನರನ್ನು ಐಸೋಲೇಷನ್ ವಾರ್ಡ್‌ಗೆ ಕಳುಹಿಸಲಾಗಿದೆ. ಇನ್ನುಳಿದವರನ್ನೂ ಕಳಿಸಲಾಗುವುದು. ೮೦ ಜನರ ಸೆಕೆಂಡ್ ಕಾಂಟೆಕ್ಟ್ ಪಟ್ಟಿ ಸಿದ್ಧಪಡಿಸಿ ಮನೆಯಲ್ಲಿಯೇ ನಿಗಾ ವಹಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್ ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here