ಕನ್ನಡ ಸಾಹಿತ್ಯ ಚರಿತ್ರೆಯ ನಿಜವಾದ ಸುವರ್ಣಯುಗ ವಚನ ಚಳವಳಿಯ ಕಾಲ. ವಚನ ಚಳವಳಿಯ ನೇತಾರನಾಗಿದ್ದ ಬಸವಣ್ಣನವರು ಸಮ ಸಮಾಜ ನಿರ್ಮಿಸುವುದಕ್ಕಾಗಿ ಕಾಯಕ-ದಾಸೋಹ ಎಂಬ ಎರಡು ಹೊಸ ಮಂತ್ರ ಸದೃಶ ಕಲ್ಪನೆಗಳನ್ನು ಜಾರಿಗೆ ತಂದರು. ಅನುಭವ ಮಂಟಪ ಎಂಬ ಪ್ರಜಾಸತ್ತೆಯ ಪಾರ್ಲಿಮೆಂಟ್‌ನ್ನು ಅಂದೇ ಹುಟ್ಟು ಹಾಕಿದ್ದ ಅವರು, ಲೋಕೋದ್ಧಾರಕ್ಕಾಗಿ ಅಹರ್ನಿಷಿ ಶ್ರಮಿಸಿದರು.
“ಬದುಕುವುದಕ್ಕೆ ಬೇಕು ಬದುಕುವ ಈ ಮಾತು” ಎನ್ನುವಂತಿರುವ ಅವರ ವಚನಗಳು ಅವರ ಬದುಕಿನ ಪಡಿನೆರಳಾಗಿವೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವ್ಯಕ್ತಿಯ ಆತ್ಮ ಕಲ್ಯಾಣದ ಮೂಲಕ ಸಮಾಜ ಕಲ್ಯಾಣದ ಕನಸು ಕಂಡಿದ್ದ ಬಸವಣ್ಣನವರು ಇಡೀ ವಚನ ಚಳವಳಿಯ ಪ್ರೇರಕಶಕ್ತಿಯಾಗಿದ್ದರು. ತನ್ನಕ್ಕನಿಗಿಲ್ಲದ ಜನವಾರ ತನಗೇಕೆ? ಎಂದು ಬ್ರಾಹ್ಮಣ್ಯದ ಕರ್ಮಠತನವನ್ನು ಕಿತ್ತೊಗೆಯುವ ಮೂಲಕ ಇಷ್ಟಲಿಂಗವೆಂಬ ಸಮಾನತೆಯ ಅರಿವಿನ ಕುರುಹು ಕೊಟ್ಟು ಹೊಸ ಧರ್ಮ ಸ್ಥಾಪಿಸಿದ ಮಹಾನ್ ಗುರು ಅವರು.
ಇಹದಲ್ಲೇ ಪರವನ್ನು ಕಾಣುವ, ಇಹ-ಪರವೆಂದು ಭೇದವೆಣಿಸದೆ ಬದುಕಬೇಕೆಂಬ ಹೊಸ ಮಾತು ಕಲಿಸಿದವರು ವಿಶ್ವಗುರು ಬಸವಣ್ಣ. ಜಾತಿ-ಧರ್ಮ, ಮೇಲು-ಕೀಳು, ಬಡವ- ಬಲ್ಲಿದ, ಶ್ರೇಷ್ಠ-ಕನಿಷ್ಟ ಎಂಬ ತರತಮ ಭಾವನೆಯನ್ನು ಕಿತ್ತೊಗೆದು ಎಲ್ಲರನ್ನೂ ಒಂದೇ ತೆಕ್ಕೆಯಲ್ಲಿ ತಂದಿಟ್ಟು ಸಕಲ ಜೀವಾತ್ಮರಿಗೆ ಲೇಸು ಬಯಸಿದ ಮಹಾನ್ ಮಾನವತಾವಾದಿ. ಪ್ರೀತಿಯ ಮಡಿಲು, ತಾಯ್ತನದ ಕರುಳು, ಬದಲಾವಣೆ ಬಯಸುವ ಒಡಲು ಹೊಂದಿದ್ದ ಅವರು ಜನಪರ, ಜೀವಪರ ವಚನ ರಚನೆ ಮಾಡಿದ್ದಾರೆ.
ಆರಂಬ ಮಾಡುವೆ ಗುರುಪೂಜೆಗೆಂದು
ಬೆವಹಾರ ಮಾಡುವೆ ಲಿಂಗಾರ್ಚನೆಗೆಂದು
ಪರಸೇವೆ ಮಾಡುವೆ ಜಂಗಮ ದಾಸೋಹಕ್ಕೆಂದು
ನಾನಾವ ಕರ್ಮಂಗಳ ಮಾಡಿದೊಡೆಯು
ಆ ಕರ್ಮ ಫಲಭೋಗವ ನೀ ಕೊಡುವೆನೆಂಬುದು
ನಾ ಬಲ್ಲೆನು ನೀ ಕೊಟ್ಟ ದ್ರ್ಯವವ
ನಿಮಗಲ್ಲದೆ ಮತ್ತೊಂದು ಕ್ರಿಯೆ ಮಾಡೆನು
ನಿಮ್ಮ ಸೊಮ್ಮಿಂಗೆ ನಮಿಸುವೆ ನಿಮ್ಮಾಣೆ
ಕೂಡಲಸಂಗಮದೇವ
ಮೇಲ್ನೋಟಕ್ಕೆ ಈ ವಚನ ನಾನು ಯಾವುದೇ ಕಾರ್ಯ ಮಾಡಿದರೂ ಗುರು, ಲಿಂಗ, ಜಂಗಮ ಸಾಕ್ಷಿಯಾಗಿ ಮಾಡುವೆ ಎಂಬ ಅರ್ಥ ಕೊಡುತ್ತದೆ. ಆನಂತರ ಬಂದವರು ಈ ವಚನವನ್ನು ಉದ್ದೇಶಪೂರ್ವಕವಾಗಿಯೇ ತಿರುಚಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿ ಬರೆದಿದ್ದಾರೆ ಎಂದೆನಿಸುತ್ತದೆ. ಅಂತೆಯೇ ಇಂದು ಯಾವುದೇ ಕಾರ್ಯ ಮಾಡಿದರೂ ಕಾವಿಧಾರಿ ಗುರುಗಳಿಗೆ, ಸ್ಥಾವರ ಲಿಂಗಕ್ಕೆ, ಜಾತಿ ಜಂಗಮರಿಗೆ ನೀಡಬೇಕು ಎಂಬ ಅರ್ಥ ಬರುವಂತೆ ಈ ವಚನದಲ್ಲಿ ತಿರುಚಿದ್ದಾರೆ.
ಆದರೆ ಬಸವಣ್ಣನವರ ಮೇಲಿನ ಈ ವಚನ ವಾಸ್ತವದಲ್ಲಿ ಹೀಗೆ ಇದ್ದಿರಲಿಕ್ಕಿಲ್ಲ. ಆರಂಬ ಎಂದರೆ ಕೃಷಿ, ಬೆವಹಾರ ಎಂದರೆ ವ್ಯವಹಾರ. ಜಂಗಮ ಎಂದರೆ ಸಮಾಜ ಎಂಬರ್ಥದಲ್ಲಿ ಅವರು ಈ ಪದಗಳನ್ನು ಬಳಸಿದ್ದಾರೆ. ಬಸವಣ್ಣನವರ ವಚನ ರಚನೆ “ಆರಂಬ ಮಾಡುವೆ ಗುರು ಪೂಜೆ ಎಂದು, ಬೆವಹಾರ ಮಾಡುವೆ ಲಿಂಗಾರ್ಚನೆ ಎಂದು, ಪರಸೇವೆ ಮಾಡುವ ಜಂಗಮ, ದಾಸೋಹ” ಎಂದು ಇದ್ದರೆ ಮುಂದಿನವರು ಅದನ್ನು “ಗುರುಪೂಜೆಗೆಂದು, ಲಿಂಗಾರ್ಚನೆಗೆಂದು, ಜಂಗಮ ದಾಸಹೋಕ್ಕೆಂದು” ಎಂದು ಬದಲಾವಣೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ಬುದ್ಧಿಯನ್ನು ತೋರಿದ್ದಾರೆ ಎಂದೆನಿಸುತ್ತದೆ. ಬಸವಣ್ಣನವರ ಈ ವಚನದ ಎಲ್ಲ ಸಾಲುಗಳಲ್ಲಿ ಬರುವ “ಎಂದು” ಎಂಬ ಶಬ್ದವನ್ನು ತೆಗೆದು ಹಾಕಿ ಅಲ್ಲಿ “ಗೆಂದು” ಎಂಬುದನ್ನು ಸೇರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ನಾನು ಯಾವುದೇ ಕಾರ್ಯ ಮಾಡಿದರೂ ಅದರ ಫಲ ನೀನು ನನಗೆ ಕೊಟ್ಟೆ ಕೊಡುವೆ. ಫಲ ಕೊಡುವುದನ್ನು ಅಥವಾ ಬಿಡುವುದನ್ನು ನಾನು ನಿನ್ನಲ್ಲಿ ಉಳಿಸಲಾರೆ. ಆ ಫಲ ಪಡೆಯದೆ ನಾನು ಬಿಡಲಾರೆ. ಇದು ನನಗೆ ಖಂಡಿತ ಗೊತ್ತು. ಮೇಲಾಗಿ ನೀ ಕೊಟ್ಟ ದ್ರವ್ಯವನ್ನು ಅಂದರೆ ಸಂಪತ್ತನ್ನು ನಿಮಗಲ್ಲದೆ ಇನ್ನಾರಿಗೂ ಅರ್ಪಿಸುವುದಿಲ್ಲ. ನಿಮ್ಮನ್ನು ಬಿಟ್ಟು ಇನ್ನಾರನ್ನು ಅಂದರೆ ಅನ್ಯರಿಗೆ ನಾನು ನಮಿಸುವುದಿಲ್ಲ ಕೂಡ. ಬೇಕಿದ್ದರೆ ನನ್ನಿಷ್ಟ ದೈವ ಕೂಡಲಸಂಗಮದೇವರ ಮೇಲಾಣೆ ಎಂದು ಪ್ರತಿಜ್ಞೆ ಮಾಡಿದಂತಿರುವ ಬಸವಣ್ಣನವರ ಈ ವಚನವನ್ನು ವಿರೂಪಗೊಳಿಸಿರುವುದನ್ನು ಚಿಕಿತ್ಸಕ ಬುದ್ಧಿಯುಳ್ಳ ಯಾರಾದರೂ ಗುರುತಿಸಬಹುದಾಗಿದೆ.
ಒಟ್ಟಿನಲ್ಲಿ ನಾವು ಏನು ಮಾಡಿದರೂ ಈ ಕಾವಿಧಾರಿ ಗುರುಗಳಿಗೆ, ಉಣ್ಣದ, ಉಡದ ಸ್ಥಾವರಲಿಂಗಕ್ಕೆ, ಜಾತಿಯಿಂದ ಜಂಗಮರಾಗಿ ಹುಟ್ಟಿದವರಿಗಾಗಿಯೇ ಮಾಡಬೇಕು ಎಂದು ತಪ್ಪಾಗಿ ಅರ್ಥೈಸುವ ಮೂಲಕ ಜನರನ್ನು ಇನ್ನೂ ಅಜ್ಞಾನದಲ್ಲಿಡುವ ಬಹು ದೊಡ್ಡ ಹುನ್ನಾರದ ಉದಾಹರಣೆ ಈ ವಚನ ಬದಲಾವಣೆಯ ಕೆಲಸವಾಗಿದೆ.ಬಸವಣ್ಣನವರ ವಚನದ ವಾಸ್ತವ ಅಂಶವನ್ನು ಮರೆ ಮಾಚಿ ನಮ್ಮನ್ನು ಭ್ರಮಾ ಲೋಕದಲ್ಲಿ ತೇಲಾಡುವಂತೆ ಮಾಡಿದವರ ಹುನ್ನಾರವನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಾಗಿದೆ.