ಪ್ರಕೃತಿಯೆ ನೀನಿತ್ತ ಅವಧಿಯಲ್ಲಿ

0
267

ಪತ್ರಿಕೆಯಲ್ಲಿ ಬರುತ್ತಿರುವ ಲಾಕ್ ಡೌನ್ ನಿಂದ ಕುಟುಂಬದಲ್ಲಿನ ಜವಾಬ್ದಾರಿಯ ಬಗ್ಗೆ ಸ್ತ್ರೀಮತವನ್ನು ಬರೆಯಿರಿ ಎಂದು ಕೇಳಿದಾಗ ಗೃಹಿಣಿಯೊಳಗಡಗಿದ ಲೇಖಕಿಯ ಮನದಲ್ಲಿ ನಡೆದ ಕಳವಳದ ಬಗ್ಗೆ ವಿಚಾರಿಸುತ್ತಾ ಎಂಥ ಒತ್ತಡದ ಕೆಲಸಗಳಲ್ಲೂ ಈ ತರಹದ ಮನಸ್ಥಿತಿ ಇರಲಿಲ್ಲ ಸಮಾಧಾನವೆ ಇಲ್ಲದಂತೆ ನನ್ನೊಳಗೆ ಆತ್ಮಾವಲೋಕನ ಪ್ರಾರಂಭವಾಯಿತು. ಲಾಕ್ ಡೌನ್ ನಿಂದಾಗಿ ನನ್ನಂಥ ಹಲವಾರು ಗೃಹಿಣಿಯರಿಗೆ ಕುಟುಂಬದ ಜವಾಬ್ದಾರಿ ಹೆಚ್ಚಿಸಿದೆ. ಎಲ್ಲವನ್ನೂ ಸಂಯಮದಿಂದ ನಿಭಾಯಿಸುತ್ತಾ, ಎಲ್ಲರೂ ಒಟ್ಟಿಗೆ ಇರುವ ಅವಕಾಶ ಒದಗಿಸಿದ ಪ್ರಕೃತಿಯಿತ್ತ ಅವಧಿಗೆ ಸ್ವಾಗತಿಸಿ, ಸರ್ಕಾರದ ನಿಯಮದಂತೆ ಗೃಹಬಂಧನದಲ್ಲಿ ಕುಟುಂಬದವರೊಡನೆ ಸಮಯ ಕಳದದ್ದೇ ತಿಳಿಯದಾಗಿದೆ. ಓದುವುದಕ್ಕಾಗಲಿ, ಬರವಣಿಗೆಗಾಗಲಿ ಸಮಯವಿಲ್ಲ ಮುಖ್ಯವಾಗಿ ಮನಸ್ಸಿಗೆ ನೆಮ್ಮದಿಯಿಲ್ಲ.

ವಿಶ್ವದೆಲ್ಲೆಡೆಯಲ್ಲಿ ಎದ್ದಿರುವ ಕೋಲಾಹಲವು ಟಿವಿಯಲ್ಲಿ ಬರುವ ಇಡೀ ಜಗತ್ತಿನ, ದೇಶದ ಮತ್ತು ರಾಜ್ಯದಲ್ಲಿನ ಸುದ್ದಿಗಳನ್ನು ನೋಡುತ್ತಿದ್ದಾಗ ಮನ ಭಾರವಾದಂತೆ ಭಾಸವಾಗುವುದು. ಕಣ್ಣಿಗೆ ಕಾಣದ ಕೊರೋನಾ ವೈರಾಣುವಿನ ಮುಂದೆ ಎಂಥ ಶಕ್ತಿಶಾಲಿ ಅಣುಬಾಂಬುಗಳಿಗೂ ವೈರಾಣುವನ್ನು ನಾಶಮಾಡುವ ಶಕ್ತಿಯಿಲ್ಲ. ಎಲ್ಲ ಧರ್ಮಗಳು, ಸಿದ್ಧಾಂತಗಳು ಈ ಚಿಕ್ಕ ಕಣದ ಶಕ್ತಿಯನ್ನು ಕಂಡು ವಿಸ್ಮಯಗೊಂಡಿವೆ ಇದರ ಮುಂದೆ ಯಾವ ಪ್ರಬಲವುಳ್ಳವರ ಆಟವೂ ನಡೆಯುತ್ತಿಲ್ಲ.

Contact Your\'s Advertisement; 9902492681

ನಿಸರ್ಗದ ನಿಲುವುಗಳನ್ನು ಅರಿಯದೆ ಮನಬಂದಂತೆ ಆಡುತ್ತಿದ್ದ ಮಾನವನಿಗೆ ತನ್ನ ಅಸ್ತಿತ್ವದ ಅರಿವು ಮೂಡಿಸುತ್ತಾ, ಪ್ರಕೃತಿಯು ತನ್ನ ಸ್ವಯಂ ಶುದ್ಧಿಕರಣದ ಜೊತೆಗೆ ಚಿಕ್ಕ ಕಣದ ಮೂಲಕ ಜಾತಿ,ವರ್ಗ,ವರ್ಣ, ಬಡವ ಶ್ರೀಮಂತ ಮತ್ತು ಲಿಂಗಭೇದಗಳ ತಾರತಮ್ಯ ವಿಲ್ಲದೆ ಎಲ್ಲರಿಗೂ ಸಮಾನತೆಯ ಪಾಠ ಕಲಿಸುತ್ತಿದೆ. ಮಾನವ ಮತ್ತು ಪ್ರಕೃತಿಯ ಮಧ್ಯೆ ಅಗೋಚರ ನಿಸರ್ಗವೊಂದಿದೆ. ಕಣ್ಣಿಗೆ ಕಾಣದ ಈ ವೈರಾಣುಗಳು ನಿಸರ್ಗಕ್ಕೆ ಸಂಬಂಧಿಸಿದವುಗಳಾಗಿವೆ. ವ್ಯಕ್ತಿ, ಸಮಾಜ ಮತ್ತು ನಿಸರ್ಗದ ರಕ್ಷಣೆ ಬಸವಣ್ಣನವರು ಹೇಳುವಂತೆ ಅಂತರಂಗ ಶುದ್ಧಿಯಿಲ್ಲದೆ ಬಹಿರಂಗ ಶುದ್ಧಿಯಿಲ್ಲ ಬಹಿರಂಗ ಶುದ್ಧಿಯಿಲ್ಲದೆ ಮಾನವನ ಅಸ್ತಿತ್ವವಿಲ್ಲ.

“ಮನೆಯ ಗಂಡನ *ಮನೆವಾರ್ತೆಯನೇನಹೇಳುವೆನವ್ವಾ. ಅಂಗವಿದ್ಯೆಯನೊಲ್ಲ, ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ. ಕೈಯ ತೊಳೆದಲ್ಲದೆ ಮುಟ್ಟಲೀಯ; ಕಾಲತೊಳೆದಲ್ಲದೆ ಹೊದ್ದಲೀಯ. ಇಂತೀ ಸರ್ವಾಂಗ ತಲೆದೊಳೆದ ಕಾರಣ, ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ!”

ಬಸವಣ್ಣನವರ ವಚನವನ್ನು ನಾವು ಸಹಜ ದೃಷ್ಟಿಯಿಂದ ನೋಡಿದಾಗ ಪಂಚಭೂತಗಳಿಂದ ಕೂಡಿದ ಮಾನವನ ಅಂಗದಲ್ಲಯೆ ಪ್ರಕೃತಿಯು ಅಡಗಿದೆ. ತಾನು ಈ ನಿಸರ್ಗದ ಅಂಶವೇ ತಾನೆಂಬುದು ಅರಿವು ಮೂಡಿದಾಗ ಸಕಲಜೀವಾತ್ಮರಿಂದ ಕೂಡಿದ ನಿಸರ್ಗವು ತನ್ನೊಳಗೆ ಇದೆ ಎಂದು ಸಾಕ್ಷಾತ್ಕಾರವಾಗುವುದು. ನಮ್ಮ ಕಣ್ಣಿಗೆ ಕಾಣುವುದು ಅಂಗವಾದರೆ ಅದರೊಳಗಿನ ಚೈತನ್ಯ ಲಿಂಗ. ಜಗತ್ತಿನಲ್ಲಿ ಯಾವುದು ಬೇರೆ ಅಲ್ಲ ಎಲ್ಲವೂ ಸೃಷ್ಟಿಕರ್ತನದೇ ಎಂದರಿತು ಸಕಲಜೀವರಾಶಿಗೆ ಲೇಸಾಗಬೇಕೆಂದು ಮನದಲ್ಲಿ ಅರಿವಾದಾಗ ಮಾತ್ರ ಆತ್ಮನೀರಿಕ್ಷೆಯಲ್ಲಿ ತೊಡಗಿಕೊಂಡು ಕೂಡಲಸಂಗಮದೇವನಲ್ಲಿ ಕೂಡಿಕೊಂಡು ಲಿಂಗಾಂಗ ಸಾಮರಸ್ಯ ಹೊಂದುವುದು.

ಆದರೆ ಮನುಷ್ಯ ಎಲ್ಲವೂ ನನ್ನದಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಂಗ್ರಹ ಬುದ್ಧಿ ಕಲಿತು ನಿಸರ್ಗವನ್ನು ಹಾಳುಮಾಡುತ್ತಿದ್ದಾನೆ. ನಿಸರ್ಗದ ಕರ್ತವ್ಯದಲ್ಲಿ ಮಾನವನು ಚ್ಯುತಿ ಒದಗಿಸಿದಾಗ ಕಣ್ಣಿಗೆ ಕಾಣದ ಕಣಗಳು ಬಂದು ಮಾನವನ ಮೇಲೆ ದಾಳಿ ಮಾಡುತ್ತವೆ. ಏಕೆಂದರೆ ಇಡೀ ಜೀವಜಾಲದ ಸಮತೋಲನವನ್ನು ಕಾಪಾಡುವ ಜವಾಬ್ದಾರಿ ನಿಸರ್ಗದ ಮೇಲಿದೆ. ಮಾನವನ ದುರಾಶೆಯನ್ನು ನಿಸರ್ಗ ಪೂರೈಸುವುದಿಲ್ಲ. ನಾವು ಪ್ರಕೃತಿ ನಿಯಮಗಳು ಪಾಲಿಸಲೇಬೇಕು ಎಂಬುದು ಈ ವೈರಾಣುವಿನ ಆದೇಶವಾಗಿದೆ. ನಮಗೀಗ ತಿಳಿದಿರುವಂತೆ ಮನುಷ್ಯನ ಹೊರತುಪಡಿಸಿ ಪೃಥ್ವಿಯ ಮೇಲೆ ಮರಗಿಡಗಳು ನಳನಳಿಸುತ್ತಿವೆ ಉಳಿದೆಲ್ಲ ಪ್ರಾಣಿಗಳು ಓಡಾಡುತ್ತಿದ್ದಾವೆ. ನೀಲಾಕಾಶವೂ ನಿರಾಳವಾದಂತಾಗಿದೆ. ಪಕ್ಷಿಗಳು ಸ್ವಚಂದವಾಗಿ ಹಾರಾಡುತ್ತಿವೆ. ಈಗಲಾದರೂ ಮಾನವರಾಗಿ ಮಾನವೀಯತೆಯನ್ನು ಮರೆಯದೆ ಬಸವಾದಿ ಶರಣರು, ಸಂತರು, ಅನೇಕ ದಾರ್ಶನಿಕ ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ಬಂದದ್ದನ್ನು ತಾಳ್ಮೆಯಿಂದ ಎದುರಿಸೋಣ.

ಜಯಶ್ರೀ ಸುಕಾಲೆ ಬೀದರ್ 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here