ಕಲಬುರಗಿ: ರಾಜ್ಯದ ಗೃಹ ಸಚಿವ ಎಂ.ಬಿ. ಪಾಟೀಲ ಅವರು ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ನಿಮಿತ್ತ ಆಗಮಿಸಿದ್ದಾಗ, ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ನಶೆಮುಕ್ತ ನಾಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಮಠಕ್ಕೆ ಬಂದ ಗೃಹ ಸಚಿವರನ್ನು ಮಠದ ಪೀಠಾಧಿಪತಿಗಳು ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಜಿಲ್ಲಾಧ್ಯಕ್ಷರಾಗಿದ್ದ ರೇವಣಸಿದ್ಧ ಶಿವಾಚಾರ್ಯರು ರುದ್ರಾಕ್ಷಿ ಕಿರೀಟ ತೊಡಿಸಿ ಸನ್ಮಾನಿಸಿದ್ದರು.
ಶ್ರೀಗಳ ವಿರುದ್ಧದ ಈ ಕ್ರಮ ಸರ್ವಾಧಿಕಾರಿ ಧೋರಣೆಯಿಂದ ಕೂಡಿದ್ದು, ಇದನ್ನು ಎದುರಿಸುವ, ಕರಗಿಸುವ ಶಕ್ತಿ ನಮಗಿದೆ. ಇದೇ ಹಿನ್ನೆಲೆಯಲ್ಲಿ ಮೇ. 20 ರಂದು ಕನ್ನಡ ಪರ, ದಲಿತಪರ ಸಂಘಟನೆಗಳ ಮುಖಂಡರ ಸಭೆ ನಗರದ ಕನ್ನಡ ಭವನದಲ್ಲಿ ಕರೆಯಲಾಗಿದೆ. ರೇವಣಸಿದ್ಧ ಶಿವಾಚಾರ್ಯರು ಚುನಾವಣೆ ಮುಗಿದ ಬಳಿಕ ಮಾತನಾಡಲಿದ್ದಾರೆ.
– ನಾಗಲಿಂಗಯ್ಯ ಮಠಪತಿ
ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಅಧ್ಯಕ್ಷರು ಸಂಸ್ಥೆಯ ಲೆಟರ್ ಹೆಡ್ ನಲ್ಲಿ ರೇವಣಸಿದ್ಧ ಶಿವಾಚಾರ್ಯರಿಗೆ ಪತ್ರ ಬರೆದು, ಅಂದಿನ ಮುಖ್ಯ ಮಂತ್ರಿಗಳ ಪ್ರೇರಣೆಯಂತೆ (2017-18) ಅಖಂಡ ವೀರಶೈವ ಲಿಂಗಾಯತ ಧರ್ಮ ಹಾಗೂ ಪರಂಪರೆ ನಾಶ ಮಾಡಲು ಮುಂಚೂಣಿಯಲ್ಲಿದ್ದುಕೊಂಡು ಕೆಲಸ ಮಾಡಿದ, ಈಗಲೂ ಅದೇ ಧೋರಣೆ ಹೊಂದಿರುವ, ಈ ಹಿಂದೆ ವಿರಕ್ತರೂ ‘ ಉಂಡ ಮನಿ ಜಂತಿ ಎಣಿಸುತ್ತಿದ್ದಾರೆ’ ಎಂದು ಹೇಳಿದ್ದ ಎಂ.ಬಿ. ಪಾಟೀಲರನ್ನು ಮಠಕ್ಕೆ ಕರೆಯಿಸಿ ರುದ್ರಾಕ್ಷಿ ಕಿರೀಟ ತೊಡಿಸಿರುವಿರಿ. ಇದು ನಿಮ್ಮ ಮನಸ್ಥಿತಿ ಸರಿಯಿಲ್ಲ ಎಂದು ಭಾವಿಸಿ ನೀವು ಮಾಡಿದ ಈ ಕಾರ್ಯದ ಹಿನ್ನೆಲೆಯಲ್ಲಿ ನಿಮ್ಮನ್ನು ವಜಾಗೊಳಿಸಲಾಗಿದೆ ಎಂದು ಫರ್ಮಾನು ಹೊರಡಿಸಿದ್ದಾರೆ.
ಆದರೆ ಈ ಬಗ್ಗೆ ಶ್ರೀಗಳೊಂದಿಗೆ ಮಾತನಾಡದೆ, ಚರ್ಚಿಸದೆ, ನೊಟೀಸ್ ನೀಡದೆ ಏಕಾಏಕಿ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರೇವಣಸಿದ್ಧ ಶಿವಾಚಾರ್ಯರನ್ನು ಅಧ್ಯಕ್ಷ ಪದವಿಯಿಂದ ವಜಾಗೊಳಿಸಿರುವುದು ಎಷ್ಟು ಸರಿ ಎಂಬುದು ಶ್ರೀಮಠದ ಭಕ್ತ ನಾಗಲಿಂಗಯ್ಯ ಮಠಪತಿ ಪ್ರಶ್ನಿಸಿದ್ದಾರೆ.
ಶ್ರೀ ಗಳು ಎಂ.ಬಿ. ಪಾಟೀಲರನ್ನು ಮಠಕ್ಕೆ ಕರೆಯಿಸಿದ್ದಕ್ಕಾಗಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವುದಾದರೆ ಈ ಹಿಂದೆ ರಂಭಾಪುರಿ ಶ್ರೀಗಳು ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು (ಲೋಕಸಭೆ ಚುನಾವಣೆ ವೇಳೆ) ಸನ್ಮಾನ ಮಾಡಿದ್ದು ಸರಿಯೇ? ಮೇಲಾಗಿ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲರನ್ನು ಶ್ರೀಶೈಲ ಜಗದ್ಗುರು ಗಳು ಸಹ ಸನ್ಮಾನಿಸಿದ್ದಾರೆ ಇದು ಕೂಡ ತಪ್ಪಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ? ಇದ್ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಸಮಾಜದಲ್ಲಿನ ಇಂದಿನ ಯುವ ಸಮೂಹ ದುಶ್ಚಟಗಳ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಅದನ್ನು ಬಿಡಿಸಲು ಶ್ರೀಗಳು ನಶೆಮುಕ್ತ ನಾಡು ಕಾರ್ಯಕ್ರಮ ಹಮ್ಮಿಕೊಂಡು ಗೃಹ ಸಚಿವರನ್ನು ಕರೆಸಿರುವುದರಲ್ಲಿ ಅಂತಹ ತಪ್ಪೇನಿದೆ? ಎಂದಿದ್ದಾರೆ.
ರೇವಣಸಿದ್ಧ ಸಿವಾಚಾರ್ಯರು ಸಹ ರೇಣುಕಾಚಾರ್ಯ ಪರಂಪರೆಯವರಾಗಿದ್ದು, ಆ ದಿಸೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರುವ ಮೂಲಕ ಮಾದರಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇದಕ್ಕೆ ಅವರು ಪ್ರತಿ ವರ್ಷ ಶ್ರೀಮಠದಿಂದ ಹಮ್ಮಿಕೊಂಡು ಚಿನ್ನದ ಕಂತಿ ಪ್ರಶಸ್ತಿ, ರೈತ ಸಮಾವೇಶ ನಡೆಸುತ್ತಿದ್ದಾರೆ. ಇದ್ಯಾವುದೂ ಜಗದ್ಗುರುಗಳ ಕಣ್ಣಿಗೆ ಬೀಳಲಿಲ್ಲವೇ?.
ಸಾರಸಾರ ವಿಚಾರ ಮಾಡದೆ ಹೀಗೆ ಏಕಾಏಕಿ ತಪ್ಪು ನಿರ್ಧಾರ ಕೈಗೊಂಡಿರುವುದರ ಹಿಂದೆ ಬಹು ದೊಡ್ಡ ಷಢ್ಯಂತ್ರವಿದೆ. ಇದು ಕೂಡ ಒಂದು ರೀತಿಯಲ್ಲಿ ಧಾರ್ಮಿಕ ಭಯೋತ್ಪಾದನೆ ಎಂದು ಅವರು ನೊಂದು ನುಡಿದಿದ್ದಾರೆ.
ಒಡೆದು ಹೋಗಿರುವುದನ್ನು ಒಂದಾಗಿಸುವುದು ಬೇಡವೆ, ಹರಿದು ಹೋಗಿರುವುದನ್ನು ಒಲಿಯುವುದು ಬೇಡವೆ? ಇಷ್ಟಕ್ಕೂ ವಿಶ್ವಗುರು ಬಸವಣ್ಣನವರು ಹೇಳಿದ್ದಾದರೂ ಏನು? ಅವರ ಯಾವ ವಚನಗಳಲ್ಲಿ ದೋಷಗಳಿವೆ. ಹೀಗೆಲ್ಲ ಯಾಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೂ ಆ ದಿನ ಎಂ.ಬಿ. ಪಾಟೀಲರು ಈ ವೀರಶೈವ-ಲಿಂಗಾಯತ ಇದ್ಯಾವುದರ ಬಗ್ಗೆ ಚಕಾರ ವೆತ್ತದೆ, ಬಸವ ಪರಂಪರೆಯ ಕಲ್ಯಾಣ ನಾಡನ್ನು ಕಟ್ಟಬೇಕಿದೆ ಎಂದು ಹೇಳಿದರು. ಇದರಲ್ಲಿ ಏನು ತಪ್ಪಿದೆಯೋ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಶಿವಾಚಾರ್ಯ ಸಂಘದ ಹಿಡನ್ ಅಜೆಂಡಾ ಏನು? ಎನ್ನುವುದು ನಮಗೆ ನಿಧಾನವಾಗಿ ಅರ್ಥವಾಗುತ್ತಿದೆ. ಮಳೆ ಬಾರದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಇದಕ್ಕೆ ಜಗದ್ಗುರುಗಳ ಕೊಡುಗೆ ಏನು ಎಂದು ನಾವೂ ಪ್ರಶ್ನಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.