ಶಹಾಬಾದ: ಬಿಸಿಲಿನ ತಾಪಕ್ಕೆ ಕಾದ ತಾಲೂಕಿನ ಹಲವೆಡೆ ಶುಕ್ರವಾರ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ಗಿಡ, ವಿದ್ಯುತ್ ಕಂಬಗಳು ಬಿದ್ದಿದ್ದು, ಒಂದು ಮನೆ ಕುಸಿದಿದೆ. ಕರೊನಾ ಹರಡುವ ಭೀತಿಯಿಂದ ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಮನೆಯಲ್ಲೇ ಬಂದಿಯಾಗಿರುವ ಜನತೆ ಬಿಸಿಲಿನ ತಾಪಕ್ಕೆ ಬೆಂಡಾಗಿದ್ದರು.
ಶುಕ್ರವಾರ ಸುರಿದ ಮಳೆಯಿಂದ ತಾಲೂಕಿನಲ್ಲಿ ಗುಡುಗು ಸಹಿತ ಸುಮಾರು ಅರ್ಧ ಗಂಟೆ ಮಳೆಗೆ ಇಳೆ ತಂಪಾಗಿದೆ.
ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.ಗಾಳಿ ಸಹಿತ ಮಳೆಗೆ ಅಲಸ್ಟಾಂ ಕಾಲೋನಿಯಲ್ಲಿ ಮರಗಳು ಉರುಳಿವೆ.ಅಲ್ಲದೇ ಮರಗಳ ಟೊಂಗೆಗಳು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ವಿದ್ಯುತ್ ಕಡಿತವಾಗಿತ್ತು.
ನಗರದ ರಾಮಾ ಮೊಹಲ್ಲಾ ಪ್ರದೇಶದಲ್ಲಿ ಮರವೊಂದು ಬಿದ್ದಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಧರೆಗೆ ಉಳಿದಿವೆ, ಜೆಸ್ಕಾಂ ಸಿಬ್ಬಂದಿ ಜನರು ಗುಂಪಾಗಿ ಹೊರ ಬರಬಾರದೆಂದು ಎಚ್ಚರಿಸಿ, ಜನರನ್ನು ಚದುರಿಸಿ, ವಿದ್ಯುತ್ ಕಂಬಗಳ ದುರಸ್ತಿಗೆ ಕ್ರಮ ಕೈಗೊಂಡರು. ಇದರಿಂದ ನಗರದಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಯಿತು.
ನಗರದ ಪಠಾಣಗಲ್ಲಿ ಪ್ರದೇಶದಲ್ಲಿ ಮಳೆಯಿಂದ ಚರಂಡಿ ತುಂಬಿ ಸುಮಾರ 10 ಮನೆಗಳಿಗೆ ನೀರು ನುಗ್ಗಿದ್ದು, ಕೆಲ ಮನೆಗಳ ಮುಂದೆ ಭಾರಿ ನೀರು ನಿಂತಿದ್ದರಿಂದ ಮನೆಯಿಂದ ಹೊರ ಬರಲಾಗುತ್ತಿಲ್ಲ.
ಇಂದಿರಾ ನಗರ ಮಡ್ಡಿ-2 ರ ಕಾಳನೂರ ಓಣಿ ಪ್ರದೇಶದಲ್ಲಿ ಮಳೆ ವಿಕಲಚೇತನ್ ಶಂಕರ ಎಂಬುವವರ ಮನೆಯ ಗೋಡೆ ಕುಸಿದಿದ್ದರಿಂದ ಮನೆ ಛಾವಣಿ ಸ್ವಲ್ಪ ಮಟ್ಟಿಗೆ ಬಿದ್ದಿದೆ.
ಜೆಪಿ ಕಾಲೋನಿಯ ಕಾಶಪ್ಪ ಎಂಬುವವರ ಮನೆಯ ಮೇಲೆ ಮರವೊಂದು ಬಿದ್ದಿದ್ದರ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ.