ರಾವೂರ ಜಾತ್ರೆ: ದೇವಸ್ಥಾನದ 20 ಸೇರಿ 200 ಗ್ರಾಮಸ್ಥರ ವಿರುದ್ಧ ಎಫ್.ಐ.ಆರ್. ದಾಖಲು

0
200

ಕಲಬುರಗಿ: ಲಾಕ್‍ಡೌನ್ ಉಲ್ಲಂಘಿಸಿ ಗುರುವಾರ ಏಪ್ರಿಲ್ 16 ರಂದು ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ದೇವರ ದೇವಸ್ಥಾನದ ಮಠದ ಜಾತ್ರಾ ಮಹೋತ್ಸವ ಜರುಗಿಸಿದ ಹಿನ್ನೆಲೆಯಲ್ಲಿ ಸದರಿ ದೇವಸ್ಥಾನದ ಮಠದ 20 ಜನ ಹಾಗೂ 150 ರಿಂದ 200 ಗ್ರಾಮಸ್ಥರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

ಕೊರೋನಾ ಹರಡದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಈಗಾಗಲೇ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144 ಕಲಂ ಜಾರಿಯಲ್ಲಿದ್ದು, ಯಾವುದೇ ರೀತಿಯ ಜನ ಸಮೂಹ ಹಾಗೂ ಜಾತ್ರೆ ನಡೆಸುವುದನ್ನು ನಿಷೇಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜಾತ್ರೆಯನ್ನು ರದ್ದುಗೊಳಿಸುವುದಾಗಿ ಲಿಖಿತವಾಗಿ ಹೇಳಿಕೆ ನೀಡಿ ತದನಂತರ ಜನಸಮೂಹವನ್ನು ಸೇರಿಸಿ ಜಾತ್ರೆ ಆಯೋಜಿಸಿದ್ದು, ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದಂತಾಗಿದೆ.

Contact Your\'s Advertisement; 9902492681

ಇದೇ ಪ್ರಕರಣ ಸಂಬಂಧ ಜಾತ್ರೆಯನ್ನು ತಡೆಯುವಲ್ಲಿ ವಿಫಲರಾಗಿ ಕರ್ತವ್ಯ ಲೋಪವೆಸಗಿದ ಚಿತ್ತಾಪುರ ಗ್ರಾಮೀಣ ಹೋಬಳಿಯ ಸೆಕ್ಟ್ರಲ್ ಮೆಜಿಸ್ಟ್ರೇಟ್ ಆಗಿ ನೇಮಕ ಮಾಡಲಾದ ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಕುಮಾರ ರಾಠೋಡ ಹಾಗೂ ವಾಡಿ ಪೊಲೀಸ್ ಠಾಣೆಯ ಪಿ.ಎಸ್.ಐ. ವಿಜಯಕುಮಾರ ಅವರನ್ನು ಗುರುವಾರದಂದೇ ಅಮಾನತ್ತುಗೊಳಿಸಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಸೇಡಂ ಸಹಾಯಕ ಆಯುಕ್ತರು, ಚಿತ್ತಾಪುರ ತಹಶೀಲ್ದಾರರು, ರಾವೂರ ಗ್ರಾಮ ಪಂಚಾಯತ್‍ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಾರಣ ಕೇಳುವ ನೋಟೀಸು ಸಹ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here