ಕೊರೊನಾ ಕಲಿಸಿದ ಪಾಠ

0
70
ಲಾಕ್ ಡೌನ್ ಪರಿಣಾಮವಾಗಿ ಸುಮಾರು 26 ದಿನಗಳ ಕಾಲ‌ ಸ್ವಯಂ/ಬಲವಂತದ ಕ್ವಾರಂಟೈನ್ ಪೂರೈಸಿರುವ ನಮಗೆಲ್ಲ ಹಲವಾರು ವಿಷಯಗಳು ಕನಸಿನ ರೂಪದಲ್ಲಿ‌ ಕಣ್ಮುಂದೆ ಹಾದು ಹೋಗುತ್ತಿವೆ. ಹಿಂದೆ ಮನೆಯ ಪರಿಸರವೇ ಬದುಕಿನ ಬಹುಪಾಲು ಅವಿಭಾಜ್ಯ ಅಂಗವಾಗಿತ್ತು. ಹೊಟ್ಟೆ, ಬಟ್ಟೆ, ಮನರಂಜನೆಗೆ ಆ‌ ಪರಿಸರದಿಂದಲೇ ಸಂಪನ್ಮೂಲ ದೊರೆಯುತ್ತಿತ್ತು.
ಆದರೆ ಈ ಪರಕೀಯ ಸಂಸ್ಕೃತಿ ಬಂದಮೇಲೆ ಜನ ನಮ್ಮ ಹಳೆ ಪದ್ಧತಿಗಳನ್ನು ಮರೆತು ಪರಕೀಯ ಸಂಸ್ಕೃತಿಗೆ ಮಾರು ಹೋಗಿದ್ದರು, ಇದೀಗ ಈ ಕೊರೋನಾ ಮಹಾಮಾರಿ ಮತ್ತೆ ನಮ್ಮ ಹಳೆ ಪದ್ಧತಿಗಳತ್ತ ಎಳೆದೊಯ್ಯುತ್ತಿದೆ, ಇದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಭಾರತದ ಬಡತನವೂ ಅನಾವರಣವಾಗಿದೆ, ಅನೇಕ ಕೂಲಿ ಕಾರ್ಮಿಕರು, ಬಡವರು ಹೊಟ್ಟೆಗೆ ಅನ್ನ ಸಿಗದೇ ಪರದಾಡುತ್ತಿರುವುದು ಗಮನಿಸಿದರೆ ಕರುಳು ಕಿತ್ತು ಬಂದಂತೆ ಭಾಸವಾಗುತ್ತದೆ.
ಕೊರೊನಾ ಜೀವಜಗತ್ತಿಗೆ ಸವಾಲೊಡ್ಡುವ ಜತೆಗೆ ಬದುಕುವ ಪಾಠವನ್ನೂ ಹೇಳಿಕೊಟ್ಟಿದೆ. ಮನುಷ್ಯ ಸಾಗುತ್ತಿರುವ ವೇಗದ ಬದುಕಿಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಇಂತಹ ಆಪತ್ತುಗಳು ಇದೇ ಕೊನೆಯಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದೆ. ಕನಿಷ್ಠ ಅವಶ್ಯಕತೆಗಳನ್ನಷ್ಟೇ ಪೂರೈಸಿಕೊಂಡು ಪ್ರಕೃತಿಯೊಂದಿಗೆ ಬದುಕುವ ಅಗತ್ಯವನ್ನು ಹೇಳಿಕೊಟ್ಟಿದೆ.
ದುರಾಸೆ, ದುರಾಕ್ರಮಣಕ್ಕೆ ಮನುಷ್ಯ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ಈ ಸಂಕಷ್ಟದ ಕಾಲದಲ್ಲಿ ಅರಿವಿಗೆ ಬಂದಿದೆ. ಮಿತಿ ಇಲ್ಲದ ವೇಗದಲ್ಲಿ ಸಾಗುತ್ತಿರುವ ನಗರಗಳು ತತ್ತರಿಸುತ್ತಿರುವಾಗ ಆರೋಗ್ಯ ಕಾಪಾಡಿಕೊಂಡ ಗ್ರಾಮೀಣ ಭಾರತ ಹಳ್ಳಿಯ ಬದುಕೇ ಶ್ರೇಷ್ಠ ಬದುಕು ಎಂಬುದನ್ನು ತೋರಿಸಿಕೊಟ್ಟಿದೆ.


ಗಣೇಶ್ ಆರ್ ಪಾಟೀಲ್, ಹಡಲಗಿ, ತಾ. ಆಳಂದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here